ಮಂಗಳೂರಿನಲ್ಲೊಂದು ಅಪರೂಪದ ಮದುವೆ

0

ಮಂಗಳೂರು  – ಮಂಗಳೂರಿನ ಉಳ್ಳಾಲದಲ್ಲೊಂದು ಸೌಹಾರ್ದಯುತವಾದ ಅಪರೂಪದ ಘಟನೆ ನಡೆದಿದೆ. ಹೌದು. ಕವನ ಎಂಬುವವರು ಅಶಕ್ತ ಕುಟುಂಬದ ಅನಾಥ ಹೆಣ್ಮಗು. ಮೂಲತಃ ಮಂಗಳೂರಿನ ಶಕ್ತಿನಗರದವರು. ತಾಯಿ ಗೀತಾರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಯುವತಿ ಕವನಳಿಗೆ ಸಂಬಂಧ ಕೂಡಿಬಂದು ಜುಲೈ 11 ರಂದು ಮದುವೆ ನಿಗದಿಯಾಗಿತ್ತು. ಆದರೆ ಮದುವೆ ಮಾಡಿಸಲು ಹಣದ ಕೊರತೆ ಇತ್ತು. ಹೀಗಾಗಿ ಅಕ್ಷರಶಃ ಮದುವೆ ನಿಲ್ಲುವ ಹಂತಕ್ಕೆ ತಲುಪಿತ್ತು. ಈ ವಿಷಯವನ್ನರಿತ ಸಂಬಂಧಿ ಸುರೇಶ್ ಎಂಬುವವರು ಆತ್ಮೀಯ ಗೆಳೆಯ ಎಂ.ಕೆ. ರಝಾಕ್ ಎಂಬುವವರೊಂದಿಗೆ ನೋವು ಹಂಚಿಕೊಂಡಿದ್ದರು. ಆನಂತರ ನಡೆದದ್ದೇ ಬೇರೆ. ಕವನಳ ಬಾಳಿಗೆ ಎಂ.ಕೆ. ಕುಟುಂಬ ಅಭಯಹಸ್ತ ನೀಡುವ ಮೂಲಕ ಮದುವೆ ಸುಸೂತ್ರವಾಗಿ ನಡೆಯಿತು.

ಪ್ರಾರಂಭದಲ್ಲಿ ಎಂ.ಕೆ. ರಝಾಕ್ ಮತ್ತು ಎಂ.ಕೆ. ರಿಯಾಝ್, ಹನೀಫ್ ಜಿದ್ದಾ ಅವರು ಯುವತಿ ಕವನಳ ಕುಟುಂಬದ ಸಮೀಕ್ಷೆ ನಡೆಸಿ ಕೂಡಲೇ ಮನೆಗೆ ಗ್ಯಾಸ್, ರೇಶನ್ ವ್ಯವಸ್ಥೆ ಮಾಡುತ್ತಾರೆ. ನಂತರ  ಎಂ.ಕೆ. ಗ್ರೂಪಿನ ಅಧ್ಯಕ್ಷ ಯು.ಎಚ್. ಅಬ್ದುರ್ರಹ್ಮಾನ್ ಹಾಗೂ ಎಂ.ಕೆ. ಹಂಝ ಅವರ ಮುತುವರ್ಜಿಯೊಂದಿಗೆ ಕವನಳ ಮದುವೆ ಮಾಡಿಸಿಕೊಡುತ್ತಾರೆ. ಎಂ.ಕೆ. ಗ್ರೂಪ್ ಮ್ಯಾರೇಜ್ ಫಂಡ್ ನಿಂದ ಬಡ ಹುಡುಗಿಗೆ ಸಹಾಯಹಸ್ತ ಚಾಚುತ್ತಾರೆ. ಮದುಮಗಳಿಗೆ ಎಂ.ಕೆ.ಕುಟುಂಬವು ಬಂಗಾರದ ಕಾಲು ಮತ್ತು ಕೈ ಉಂಗುರ, ಬೆಂಡೋಳೆ ಮತ್ತಿತರ ಬೆಳ್ಳಿ ವಸ್ತುಗಳನ್ನು ನೀಡುತ್ತಾರೆ.

ಕವನಳ ಮೆಹಂದಿ ಕಾರ್ಯಕ್ರಮವು ಎಂ.ಕೆ. ಹಂಝರ ಮನೆಯಲ್ಲಿ ಸಡಗರದಿಂದ ನಡೆದಿತ್ತು.‌ ಇನ್ನು ಕವನಳ ವಿವಾಹವು ಭಾನುವಾರ ವರ ರಂಜಿತ್ ಜೊತೆಗೆ ತಲಪಾಡಿಯ ದೇವಿನಗರದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟುಂಬಿಕರ ಸಮ್ಮುಖದಲ್ಲಿ ನಡೆಯಿತು.

ಇದೇ ವೇಳೆ ಸ್ಥಳೀಯ ಶಾಸಕ ಯು.ಟಿ. ಖಾದರ್  ಈ ಕುಟುಂಬದ ಪರಿಸ್ಥಿತಿ ಅರಿತು ದೊಡ್ಡ ಮೊತ್ತದ ಧನಸಹಾಯ ಮಾಡಿ ಶುಭ ಹಾರೈಸಿದರು. ಇನ್ನಿತರ ದಾನಿಗಳೂ ತಮ್ಮ ಉದಾರತೆ ತೋರಿದರು. ಅನೇಕರು ಈ ಮದುವೆಯಲ್ಲಿ ಪಾಲ್ಗೊಂಡು ವಧೂವರರಿಗೆ ಶುಭಹಾರೈಸಿದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply