ಅಜ್ಞಾನಿ ಗುರು ಅವಿವೇಕಿ ಶಿಷ್ಯ

0

ಡಾ. ಈಶ್ವರಾನಂದ ಸ್ವಾಮೀಜಿ

 

ಉತ್ತಮ, ಸುಶಿಕ್ಷಿತ, ಸಂಸ್ಕಾರಯುಕ್ತ, ಸಮಾಜ ನಿರ್ಮಾಣವಾಗಲು ಅಥವಾ ಸಮಾಜದಲ್ಲಿ ಇರುವ ಜನರಯನ್ನು ಅಸತ್ಯದಿಂದ ಸತ್ಯದ ಕಡೆಗೆ ಕರೆದುಕೊಂಡು ಒಯ್ಯಲು, ಅವರಲ್ಲಿರುವ ಅಜ್ಞಾನ ತೊಲಗಿ ಸುಜ್ಞಾನವುಂಟು ಮಾಡಲು, ಅಂಧಕ್ಕಾರ ಕಳೆದು ಜ್ಞಾನದ ಬೆಳಕನ್ನುಂಟು ಮಾಡಲು, ಮೃತ್ಯುವಿನ ಬಾಯಿಯಿಂದ ಬಿಡಿಸಿ ಅಮೃತತ್ತ್ವದ ಕಡೆಗೆ ಕರೆದುಕೊಂಡು ಒಯ್ಯಲು, ಧರ್ಮವನ್ನು ಜಾಗೃತಗೊಳಿಸಲು ಗುರುವಿನ ಪಾತ್ರ ಬಹು ಪ್ರಧಾನವಾಗಿದೆ. ಆ ಗುರು ಎಲ್ಲ ಬಲ್ಲವನಿದ್ದು ಅಂದರೆ ವೇದ, ಉಪನಿಷತ್ತುಗಳಲ್ಲಿರುವ ಅಧ್ಯಾತ್ಮ ವಿದ್ಯೆ, ಸಾಮಾಜಿಕವಾಗಿ ಕಳಕಳಿ ಉಳ್ಳವನಾಗಿದ್ದು, ತನ್ನಲ್ಲಿಗೆ ಬರುವ ಭಕ್ತರನ್ನು ಉದ್ಧಾರ ಮಾಡುವ ಮನೋಭಾವವುಳ್ಳನಾಗಿರಬೇಕು. ಭಕ್ತರಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಹೆಣ್ಣು-ಗಂಡು, ಚಿಕ್ಕವ-ದೊಡ್ಡವ ಎಂಬ ಮೊದಲಾದ ಭೇದಭಾವಗಳನ್ನು ಎಣಿಸದೆ ಎಲ್ಲರನ್ನು ಏಕ ಭಾವದಿಂದ ಆಶೀರ್ವದಿಸುವ ಗುರುವಿನ ಅವಶ್ಯಕತೆಯನ್ನು ಸಮಾಜಹೊಂದಬೇಕು. ಅಂಥ ಗುರುವಿಗೆ ಆಯ್ಕೆ ಮಾಡುವುದು ಸಮಾಜದ ಕರ್ತವ್ಯವೂ ಹೌದು.

ಅಂಥ ಗುರುವಿನಿಂದ ಒಂದಿಷ್ಟು ಸಮಾಜದ ಪರಿವರ್ತನೆ ಸಾಧ್ಯ. ಗುರುವಾದನು ಅಜ್ಞಾನಿಯಾಗಿದ್ದರೆ ಸಮಾಜಕ್ಕೆ ಇನ್ನೇನು? ಉಪದೇಶ ಮಾಡಿ ಸಮಾಜ ಅಥವಾ ತನ್ನಲ್ಲಿ ಬಂದಿರುವ ಭಕ್ತರನ್ನು ಹೇಗೆ ಉದ್ಧರಿಸುವನು? ಶಾಸ್ತ್ರ ಎಂಬ ಶಸ್ತ್ರ ಹಿಡಿಯಲು ಗೊತ್ತಿಲ್ಲದವನು ಸಮಾಜದಲ್ಲಿ ಅಜ್ಞಾನವೆಂಬ ದುಷ್ಟ ಗುಣಗಳ ಜೊತೆಗೆ ಹೊರಾಡಲು ಹೇಗೆ ಸಾಧ್ಯ? ತನ್ನಲ್ಲಿರುವ ಕೆಟ್ಟ ಗುಣಗಳೆಲ್ಲ ತಪಸ್ಸಿನ ಮೂಲಕ ತೊಲಗಿಸಿ ಕೊಂಡಾಗ ಮಾತ್ರ ಇನ್ನೊಬ್ಬರಲ್ಲಿರುವ ಕೆಟ್ಟ ಗುಣಗಳು ತೆಗೆಯಲು ಸಾಧ್ಯ. ನಿಮಗೆ ಗೊತ್ತಿರುವ ಹಾಗೆ ಸ್ವಾಮಿ ವಿವೇಕಾನಂದರ ಗುರುಗಳಾದ ಪರಮಹಂಸರ ಹತ್ತಿರ ತಾಯಿಯೊಬ್ಬಳು ತನ್ನ ಮಗನಿಗೆ ಕರೆದುಕೊಂಡು ಹೋಗಿದ್ದಳು. ಸ್ವಾಮೀಜಿಯವರನ್ನು ಕುರಿತು “ನನ್ನ ಮಗ ಮಗ ತುಂಬಾ ಬೆಲ್ಲ ತಿನ್ನುವನು ಬಿಡಲು ಹೇಳಿ ಸ್ವಾಮೀಜಿ” ಎಂದಾಗ ಒಂದು ವಾರ ಬಿಟ್ಟು ಬರಲು ತಿಳಿಸಿದರು.

ಅದಕ್ಕೆ ಆ ತಾಯಿ ಒಂದು ವಾರ ಬಿಟ್ಟು ಬಂದಾಗ ಪರಮಹಂಸರು “ಬೆಲ್ಲ ತಿನ್ನಬಾರದಪ್ಪಾ ಹೊಟ್ಟೆಯಲ್ಲಿ ಹುಳುವಾಗುತ್ತವೆಂದರು” ಆಗ ತಾಯಿ ಇದೇ ಮಾತು ಒಂದು ವಾರದ ಹಿಂದೆಯೇ ಹೇಳಬಹುದಿತಲ್ಲಾ ಸ್ವಾಮೀಜಿಯವರೆ, ನನಗೆ ಒಂದು ವಾರ ಕಾಯಿಸಿರಲ್ವೇ? ಎಂದಾಗ ಪರಮಹಂಸರು ಆಗ ನಾನೂ ಬೆಲ್ಲ ತಿನ್ನುತಿದ್ದೆ ಇಗ ಬಿಟ್ಟಿದ್ದೇನೆ ಅದಕ್ಕೆ ಹೇಳುತ್ತಿದ್ದೇನೆ. ನಾನೇ ಬೆಲ್ಲ ತಿಂದು ಇನ್ನೊಬ್ಬರಿಗೆ ಬಿಡು ಎಂದರೆ ಆತ್ಮಕ್ಕೆ ವಂಚನೆ ದ್ರೋಹ ಮಾಡಿದಂತಲ್ಲವೇ? ಅದು ಧರ್ಮವೂ ಅಲ್ಲವೆಂದು ತಿಳಿಸಿದರು. ಆದುದರಿಂದ ಈ ರೀತಿಯಾದ ಉತ್ತಮ ಗುರುವಿದ್ದಾಗ ಮಾತ್ರ ಉತ್ತಮವಾದ ಸಮಾಜ ನಿರ್ಮಾಣ ಸಾಧ್ಯವೆಂದಾಗಲಿ, ಗುರುವಿಲ್ಲದೆ ಗುರಿ ಸೇರಲು ಸಾಧ್ಯವಿಲ್ಲವೆಂದು ಅನೇಕ ಶರಣರು ಸಂತರು ಮಹಾತ್ಮರು ಶಿವಯೋಗಿಗಳು ಹಿಂದಿನಿಂದ ಹೇಳುತ್ತಲೇ ಬಂದಿರುವುದನ್ನು ಕಾಣುತ್ತೇವೆ. ಜ್ಞಾನವಿಲ್ಲದ ಗುರು ಜ್ಞಾನವಿಲ್ಲದ ಶಿಷ್ಯರಿಗೆ ಉಪದೇಶ ಮಾಡಿದರೆ ಏನಾಗುವುದೆಂಬುವುದನ್ನು ದೇವರ ದಾಸಿಮಯ್ಯನವರು ಬಹು ಸುಂದರವಾಗಿ ತಮ್ಮದೇಯಾದ ರೀತಿಯಲ್ಲಿ ಹೀಗೆ ಹೇಳಿದ್ದಾರೆ.

ಹೊಲಬನರಿಯದ ಗುರು, ಸುಲಭನಲ್ಲದ ಶಿಷ್ಯ
ಕೆಲಬಲನ ನೋಡದುಪದೇಶ
ಅಂಧಕನ ಲಾಭ ಹೊಕ್ಕಂತೆ ಕಾಣಾ ರಾಮನಾಥ.

ದೀಕ್ಷೆ, ಉಪನಯನ ಮೊದಲಾದ ಸಂಸ್ಕಾರಗಳನ್ನು ಕೊಡಬೇಕಾದ ಗುರು ತಾನೂ ಉತ್ತಮನಾದ ಗುರುವಿಂದ ಸಂಸ್ಕರಿಸಲ್ಪಟ್ಟು ಗುರುವಾಗಿ ಇನ್ನೊರ್ವ ಶಿಷ್ಯನಿಗೆ ಉಪದೇಶ ಮಾಡಲು ಅವನ ಯೋಗ್ಯತೆಯನ್ನು ಗುರ್ತಿಸಿ, ದೀಕ್ಷೆ, ಉಪನಯನ ಮೊದಲಾದ ಸಂಸ್ಕಾರಗಳನ್ನು ಕೊಡುವುದು ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಾಗಿದೆ. ಗುರು ಶಿಷ್ಯನಿಗೆ ಪರೀಕ್ಷೆ ಮಾಡುವ ಮುಖಾಂತರ, ಅದರಲ್ಲಿ ತೆರ್ಗಡೆ ಹೊಂದಿದಾಗ ಮಾತ್ರ ಹತ್ತಿರ ಕರೆದು ಅಂತಃಕರಣದಿಂದ ತನ್ನ ಹಸ್ತ ಶಿಷ್ಯನ ಮಸ್ತಕ ಸಂಯೋಗ ಮಾಡಿ, ಆಶೀರ್ವಾದಿಸಿ ತನ್ನ ಅಥವಾ ತಾನು ಪಡೆದಿರುವ ಸರ್ವ ಜ್ಞಾನವನ್ನು ಧಾರೆ ಎರೆಯಬೇಕು. ಗುರುವಾದವನೂ ತಾನೂ ತನ್ನ ಗುರುವಿನ ಹತ್ತಿರ ಪರೀಕ್ಷೆಗೆ ಒಳಗಾಗದೆ ಪಡೆದ ಅಲ್ಪ-ಸ್ವಲ್ಪ ವಿದ್ಯಯಿಂದ ಗುರುವಾಗಿ ಶಿಷ್ಯನಿಗೆ ಪರೀಕ್ಷೆಮಾಡದೆ ಅವನ ಬಗ್ಗೆ ಏನನ್ನೂ ಅರಿಯದೆ ಉಪದೇಶ ಮಾಡಿದರೆ ಆಗುವ ಅನಾಹುತವನ್ನು ತಮ್ಮ ವಚನದಲ್ಲಿ ದಾಸಿಮಯ್ಯನವರು ವ್ಯಕ್ತಪಡಿಸಿದ್ದಾರೆ.

ನೀರಿನಲ್ಲಿ ಇಜಲು ಬಾರದವನು ನೀರಲ್ಲಿ ಮುಳುಗುತ್ತಿರುವವನನ್ನು ತೆಗೆದಂತಾಗುತ್ತದೆ ಎಂದು ಅಪಹಾಸ್ಯವನ್ನು ಮಾಡಿದ್ದಾರೆ. ಅಂದರೆ ಯಾವ ಗುರುವಿಗೆ ಸಮಾಜದ ಆಗು-ಹೋಗುಗಳ ಬಗ್ಗೆ ಗೊತ್ತಿದ್ದು, ಅವುಗಳ ಪರಿಹಾರ ಕಂಡುಕೊಂಡು, ಅಧೋಗತಿಗೆ ಹೋಗುತ್ತಿರುವ ಸಮಾಜವನ್ನು ಊಧ್ರ್ವದಿಕ್ಕಿಗೆ ಹೊರಳಿಸಿ ಅದಕ್ಕೊಂದು ಹೊಸ ರೂಪು ಕೊಟ್ಟು ನವಸಮಾಜ ನಿರ್ಮಾಣ ಮಾಡುವವನೇ ನಿಜವಾದ ಗುರುವೆಂದು ಅನುಭಾವಿಗಳು ಅಭಿಪ್ರಾಯ ಪಡುವರು. ಮೊದಲು ತಾನು ಸಮಾಜವೆಂಬ ನೀರಿನಲ್ಲಿ ಇಜುವುದನ್ನು ಕಲಿಯಬೇಕು. ಅಂದರೆ ಸಮಾಜದಲ್ಲಿ ಹೇಗಿರಬೇಕು. ಸಮಾಜಕ್ಕೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹೀಗೆ ಮೊದಲಾದವುಗಳ ಬಗ್ಗೆ ಚಿಂತಿಸಿ ಅವುಗಳ ಪರಿಹಾರ ಹೇಗೆ? ಎಂತು? ಯಾವಾಗ? ಎಂಬ ಹಲವಾರು ರೀತಿಯಾಗಿ ಸಮಾಜದ ಹಿರಿಯರ ಜೊತೆಗೆ, ಅಥವಾ ಅನುಭಾವಿಗಳ ಜೊತೆಗೆ, ಅಥವಾ ಸಾಹಿತಿಗಳ ಜೊತೆಗೆ ಚರ್ಚಿಸಿ ಅದಕ್ಕೊಂದು ಮಾರ್ಗವನ್ನು ಕಂಡು ಹಿಡಿಯುವವನೇ ನಿಜವಾಗಿ ಇಜಲು ಬರುವಂತವನು ಎಂಬಂರ್ಥವನ್ನು ದಾಸಿಮಯ್ಯನವರ ವಚನದ ಅಂತರಾರ್ಥ ಕಾಣಬಹುದು.

ದಾಸಿಮಯ್ಯನವರ ವಚನದಲ್ಲಿ ವ್ಯಕ್ತವಾದ ಅಯೋಗ್ಯ ಗುರು-ಶಿಷ್ಯರ ಸಂಬಂಧ ಹಾಗೂ ಉಪದೇಶಗಳ ಪರವಾದ ವಚನದ ಸಾರವು ಮುಂದಿನ ಶರಣರ ಮೇಲೆ ಪ್ರಭಾವ ಬೀರಿವೆ. ಆದರೆ ನಮ್ಮ ಮೇಲೆ ಪ್ರಭಾವ ಬೀರಿವೆ ಅಥವಾ ಇಲ್ಲ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚಂದಿಮರಸ ಮೊದಲಾದ ಶಿವಶರಣರ ಮೇಲೆ ಪ್ರಭಾವ ಬೀರಿರುವುದನ್ನು ಅವರ ವಚನಗಳಿಂದ ಅರಿಯಬಹುದು ಆದರೆ ನಮ್ಮನ್ನು ಅರಿಯಲು ಯಾವ ವಚನವೂ ಅಥವಾ ಧರ್ಮ ಗ್ರಂಥ ಅಥವಾ ಸಂಸ್ಕಾರಗಳೂ ಇಲ್ಲ. ಅವರ ವಚನಗಳು ಈ ಮುಂದಿನಂತೆ ನೋಡಬಹುದು-
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ?
ಅಂಧಕನ ಕೈಯ ಅಂದಕ ಹಿಡಿದಂತೆ
ಮುಂದೇನಪ್ಪುದು ಹೇಳಲೇ ಮರುಳೆ?
ಬರುಮಾತಿನ ರಂಜನೆಯನಾಡದಿರು
ಸಿಮ್ಮಲಿಗೆಯ ಚನ್ನರಾಮನೆಂಬ
ಲಿಂಗವು ಹುಸಿಯ ಹೆಸರದವನಲ್ಲ.
ಅಲ್ಲಮಪ್ರಭುದೇವರ ವಚನ-
ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯ
ಉಪಚಾರದ ಲಿಂಗ ಉಪಚಾರದ ಜಂಗಮ
ಉಪಚಾರದ ಪ್ರಸಾದವಕೊಂಡು ಗುರುವಿಂಗೆ
ಭವದ ಲೆಂಕÀನಾಗಿ ಅಂಧಕನ ಕೈಯ ಅಂಧಕ
ಹಿಡಿದಂತೆ ಇವರಿಬ್ಬರು ಹೊರಬುಗೆಟ್ಟರು ಕಾಣಾ ಗುಹೇಶ್ವರಾ.
ಅಂಬಿಗರ ಚೌಡಯ್ಯನವರ ವಚನ-
ಅರಿಯದ ಗುರು ಅರಿಯದ ಶಿಷ್ಯಂಗೆ ಅನುಗ್ರಹವ
ಮಾಡಿದಡೇನಪ್ಪದಲ್ಲವೊ ಅಂಧಕನ ಕೈಯನಂಧಕ
ಹಿಡಿದಡೆ ಮುಂದೆನಾರು ಕಾಬರು ಹೇಳಲೆ ಮರುಳೆ
ತೊರೆಯಲದ್ದವನ ನೀಸಲರಿಯದವ ತೆಗೆವ
ತೆರನಂತೆಂದನಂಬಿಗರ ಚೌಡಯ್ಯ..
ಸರ್ವಜ್ಞನವರ ವಚನ-
ಹೊಲನರಿಯದ ಗುರುವು ತಿಳಿಯಲರಿಯದ ಶಿಷ್ಯ
ನೆಲಯನಾರಯ್ಯದುಪದೇಶ ಅಂಧಕನು
ಕೊಳವ ಹೊಕ್ಕಂತೆ ಸರ್ವಜ್ಞ..
ಹೀಗೆ ದೇವರ ದಾಸಿಮಯ್ಯನವರ ವಚನಗಳ ಪ್ರಭಾವ ಹಾಗೂ ಅವುಗಳ ಭಾವಸಾಮ್ಯತೆ, ಅರ್ಥಸಾಮ್ಯವಿದ್ದ ವಚನಗಳು ಬಸವಾದಿ ಶರಣರಲ್ಲಿ ಕಾಣುತ್ತೇವೆ.

ಇದಕ್ಕೊಂದು ಉದಾಹರಣೆ ಹೀಗಿದೆ – ಅಂಬಿಗನೊಬ್ಬ ತನ್ನ ದೊಣಿ ನಡೆಸುವ ಕಾರ್ಯ ಮುಗಿದ ನಂತರ ರಾತ್ರಿ ಮನೆಗೆ ಹೋಗುವ ಪೂರ್ವದಲ್ಲಿ ದೊಣಿಯು ನದಿಯ ದಂಡೆಯಲ್ಲಿರುವ ಒಂದು ಮರಕ್ಕೆ ಹಗ್ಗದಿಂದ ಕಟ್ಟಿ ಹೋಗುತ್ತಾನೆ. ನದಿ ದಾಟಿ ಮುಂದಿನ ಊರಿಗೆ ಹೋಗುವ ನಾಲ್ಕು ಜನ, ರಾತ್ರಿ ಸಮಯವಾದರೂ ಕುಡಿತ, ಮೋಜು ಮಸ್ತಿಯಲ್ಲಿ ಕಾಲ ಕಳೆದು, ನದಿಯ ಸಮೀಪ ಬಂದರು. ನದಿಯ ದಂಡೆಯಲ್ಲಿ ಅಂಬಿಗನಿಲ್ಲ. ಆದರೆ ದೊಣಿ ಮಾತ್ರವಿದೆ. ನಿಶೆಯಲ್ಲಿರುವ ನಾಲ್ವರು ಇಂದು ನಾವೆಲ್ಲರೂ ಕೂಡಿ ಹುಟ್ಟು ಹಾಕಿಕೊಂಡು ದೋಣಿ ನಡೆಸಿಕೊಂಡು ಆ ದಡ ಸೇರೋಣ ನಾವೇಕೆ ಅಂಬಿಗನಿಗಾಗಿ ಬೆಳಗಿನವರೆಗೂ ಕಾಯಬೇಕು ಎಂದು ಎಲ್ಲರೂ ದೋಣಿಯಲ್ಲಿ ಕುಳಿತು ಸರದಿಯಂತೆ ಹುಟ್ಟು ಹಾಕಿದರೂ ನೀರಿನ ಅಳೆಗಳಿಂದ ದೋಣಿ ಮುಂದೆ ಸಾಗಿದಂತೆ ಕಾಣುತಿತ್ತು ಆದರೆ ದೋಣಿ ಮಾತ್ರ ಮುಂದೆ ಸಾಗಲಿಲ್ಲಿ. ಸೂರ್ಯೋದಯವಾಯಿತು.

ಕುಡಿದ ಸೇರೆಯ ಮತ್ತು ಇಳಿದು ಹೋಗಿತ್ತು. ಆಗ ನೋಡಿದರು. ಮರಕ್ಕೆ ಕಟ್ಟಿರುವ ಹಗ್ಗ ಬಿಚ್ಚಿರಲಿಲ್ಲ ಎಂದು ಪಶ್ಚಾತಾಪ ಪಟ್ಟರು. ಅಷ್ಟರಲ್ಲಿ ಅಂಬಿಗ ಬಂದು ಅವರು ಸೇರುವ ಇನ್ನೊಂದು ದಡ ಅಥವಾ ಅವರೂರಿಗೆ ಸೇರಿಸಿದನು. ಹಾಗೇಯೆ ನಮಗೊಬ್ಬ ಉತ್ತಮ ಅಂಬಿಗ ಬೇಕಾಗಿದೆ. ಆದರೆ ಅಂಬಿಗನಿಲ್ಲದೆ ನಾವೇ ಸರ್ವಾಧಿಕಾರಿ ಎನ್ನುವ ಸೇರೆಯ ಮತ್ತು ತಲೆಗೆ ಏರಿ ಸಮಾಜವನ್ನು ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ ತೆಗೆದುಕೊಂಡು ಹೋಗುತ್ತೇನೆಂದರೆ ಸಾಧ್ಯವಿಲ್ಲ. ಅದಕ್ಕೆ ದೋಣಿ ನಡೆಸುವುದರಲ್ಲಿ ಪರಿಣಿತಿ ಹೊಂದಿರುವ ಅಂಬಿಗನಿಗಾಗಿ ಕಾಯಬೇಕು ಅಥವಾ ಹುಡಕಬೇಕು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply