ಕೊಪ್ಪಳ – ಕಳೆದ ರಾತ್ರಿ ಚಿರತೆ ದಾಳಿಗೆ ತುತ್ತಾಗಿ ಮೃತನ ಕುಟುಂಬಕ್ಕೆ ೧೦ ಲಕ್ಷ ಪರಿಹಾರವನ್ನು ಅರಣ್ಯ ಸಚಿವ ಆನಂದ್ ಸಿಂಗ್ ಘೋಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಚಿರತೆ ದಾಳಿಯಿಂದ ರಾಘವೇಂದ್ರ(19) ಎಂಬ ಯುವಕ ಮೃತಪಟ್ಟಿದ್ದಾನೆ. ನಿನ್ನೆ ಆಕಳು ಮೇಯಿಸುವ ಸಮಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಚಿರತೆ ಯುವಕನ ಮೇಲೆ ಏಕಾಏಕಿ ದಾಳಿ ಮಾಡಿತ್ತು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದ್ರೆ ಚಿಕಿತ್ಸೆ ‌ಫಲಕಾರಿಯಾಗದೆ  ಯುವಕ ರಾಘವೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದರಿಂದ ಆಕ್ರೋಶ ಗೊಂಡ ಯುವಕನ ಮನೆಯವರು ಆಸ್ಪತ್ರೆಯ ಬಳಿ ಜಮಾಯಿಸಿ ಸಚಿವರು ಬರುವಂತೆ ಪಟ್ಟು ಹಿಡಿದಿದ್ದರು. ಕಾರಣ ವಿಷಯ ತಿಳಿದ ಸಚಿವರು ಗ್ರಾಮಕ್ಕೆ ಬೇಟಿ ನೀಡಿ  ಕುಟುಂಬಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು 10ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮೃತ ಯುವಕನ ಊರು ಕರಿಯಮ್ಮನಗಡ್ಡಿಗೆ ಭೇಟಿ ನೀಡಿ ಪಾರ್ಥಿವ ಶರೀರವನ್ನು ದರ್ಶಿಸಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯಿಂದ 7.5 ಲಕ್ಷ ಹಾಗೂ ವೈಯಕ್ತಿಕವಾಗಿ 2.5 ಲಕ್ಷ ರೂ. ಪರಿಹಾರವನ್ನು ವಿತರಿಸಿದರು.

Leave A Reply