ಸಾಮಾನ್ಯವಾಗಿ ಅರಿವು ಪ್ರತಿಯೊಂದು ಜೀವಿಗೆ ಅತ್ಯಂತ ಅಶವಶಕ. ಆ ಅರಿವಿನ ಜ್ಯೋತಿಯಿಂದ ನಮ್ಮ ಜೀವನವು ಬೆಳಕಿನ ದಾರಿಯಲ್ಲಿ ಸಾಗುತ್ತದೆ. ಅಂತಹ ಅರಿವಿನಿಂದ ಯಾವ ಪ್ರಯೋಜನವಾಗುತ್ತದೆ ಎಂಬುವುದನ್ನು ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮ್ಮ ಈ ಕೆಳಗಿನ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.
ಅರುವಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು,
ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು,
ವಿಷಯAಗಳ ಶಿವನರಿಯಿತ್ತು, ದಶವಿದೇಂದ್ರಿಯAಗಳ ದಾಳಿಯ ನಿಲ್ಲಿಸಿತ್ತು,
ಪಂಚಮಹಾಭೂತAಗಳ ಪ್ರಪಂಚುವ ಪರಿಹರಿಸಿತ್ತು,
ಬ್ರಹ್ಮವೇ ತಾನೆಂಬ ಕುರುಹು ಮೈಗಾಣಿಸಿತ್ತು,
ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತ ನೋಡಾ,
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ.
ಅರಿವಿನ ಜ್ಯೋತಿ ನಮ್ಮಲ್ಲಿ ಉದಯವಾಗಲು ಅಜ್ಞಾನ ತೊಲಗಿ, ಕರಣಂಗಳೆಲ್ಲ ಭಗವಂತನನ್ನು ಸ್ಮರಿಸುವಂತೆ ಮಾಡಿತ್ತು. ದಶೇಂದ್ರಿಯಗಳು ತಮ್ಮ ದಾಳಿಯನ್ನು ನಿಲ್ಲಿಸಿ ಪಂಚಮಹಾಭೂತಗಳಾದ ಆಕಾಶ, ವಾಯು ತೇಜ, ಭೂಮಿ, ಮತ್ತು ಜಲಗಳ ಹಂಗು ಹರಿಯಲ್ಪಟ್ಟಿವು. ಬ್ರಹ್ಮವೇ ತಾನೇ ಎಂಬ ಅರಿವು ಮೂಡುವಂತ ಅರಿವಿನ ಜ್ಯೋತಿ ಯಾರಿಗೆ ತಾನೇ ಬೇಡ ? ಅದನ್ನು ಎಲ್ಲರು ಆಪೇಸುತ್ತಾರೆ. ಆದರೆ ಅದನ್ನು ಪಡೆಯುವ ಬಗೆ ಮಾತ್ರ ಅರಿಯರು. ಇದಕ್ಕೊಂದು ಉತ್ತಮವಾದ ದೃಷ್ಟಾಂತ ಹೀಗೆ ನೋಡಬಹದು –
ಚೀನಾ ದೇಶದಲ್ಲಿ ಒಬ್ಬ ಶ್ರೇಷ್ಠ ಗುರುವಿದ್ದ. ಸತ್ಯ ಸಾಕ್ಷಾತ್ಕಾರ ಮಾಡಿಕೊಂಡು ಗುರುವೆಂದು ದೇಶದ ತುಂಬೆಲ್ಲ ಆತನ ಹೆಸರು. ಜಪಾನದ ಉತ್ತರ ಭಾಗದಿಂದ ಒಬ್ಬ ಮನುಷ್ಯ ಆ ಗುರುವಿನ ಹತ್ತಿರ ಬಂದ. ಆತನ ವಯಸ್ಸು ನಲ್ವತ್ತು ವರ್ಷ. ಸಿರಿ ಸಂಪತ್ತಿಗೇನೂ ಕೊರತೆ ಇರಲಿಲ್ಲ. “ಬುದ್ಧಂ ಶರಣಂ ಗಚ್ಛಾಮಿ” ಎಂದು ಗುರುಗಳಿಗೆ ನಮಿಸಿ ಕುಳಿತ. “ಏನು ವಿಶೇಷ ?” ಎಂದು ಗುರುಗಳು ಕೇಳಿದರು.
ನನಗೆ ಧನ, ಕನಕ, ಸತಿ ಸುತರು, ಕೀರ್ತಿವಾರ್ತೆ ಯಾವುದಕ್ಕೂ ಕೊರತೆ ಇಲ್ಲ. ಆದರೆ ಒಂದೇ ಒಂದಾಶೆ ನಿರ್ವಾಣ ಹೊಂದಬೇಕು. ಸತ್ಯದರ್ಶನ ಮಾಡಿಕೊಳ್ಳಬೇಕು. ಆಯುಷ್ಯ ಇರುವುದರಲ್ಲಿ ಅದೊಂದಾದರೆ ನನ್ನ ಜೀವನ ಸಾರ್ಥಕ, ಏನು ಮಾಡಲಿ ಹೇಳಿ ಗುರುಗಳೇ ? ಎಂದ ಶಿಷ್ಯ.
ಏನಿಲ್ಲ ಇದೊಂದು ಬಡಿಗೆ ಹಿಡಿ. ನಿನಗೆ ನಿರ್ವಾಣವಾಗುತ್ತದೆ. ಎಂದು ಹೇಳಿ ಗುರುಗಳು ಐದಡಿ ಮನುಷ್ಯನಿಗೆ ಆರಡಿ ಎತ್ತರದ ಬಡಿಗೆ ಕೊಟ್ಟರು. ಆತ ಯೋಗ ಧ್ಯಾನಾದಿಗಳು ಮಾಡಬೇಕಿಲ್ಲ. ಸುಮ್ಮನೆ ಬಡಿಗೆ ಹಿಡಿದರೆ ಮುಕ್ತರಾಗುವುದಾದರೆ ಎಂಥ ಆನಂದ ? ಆದರೆ ಅದರಿಂದ ನಿರ್ವಾಣ ಹೇಗಾಗುತ್ತದೆ. ಎಂದಾಗುತ್ತದೆ ಎಂದು ಶಿಷ್ಯನೂ ಕೇಳಲಿಲ್ಲ. ಗುರುಗಳೂ ಹೇಳಲಿಲ್ಲ. ಅಂದಿನಿAದ ಸಿರಿವಂತನು ಕೂತರೆ ನಿಂತರೆ ಬಡಿಗೆ ಹಿಡಿದುಕೊಂಡೇ ಇರುತ್ತಿದ್ದ. ಮಕ್ಕಳಾದವು. ಮೊಮ್ಮಕ್ಕಳಾದವು ಇನ್ನೂ ಬಡಿಗೆ ಹಿಡಿದೇ ಇದ್ದ. ಸತ್ಯ ಇವನಿಗೆ ಕಾಣಲಿಲ್ಲ. ಇಪ್ಪತ್ತು ವರ್ಷಗಳಾದರೂ ನಿರ್ವಾಣವೂ ಹೊಂದಲಿಲ್ಲ. ಮೊಸವಾಯಿತೆಂದು ಮುದುಕ ಕ್ರೋಧತಪ್ತನಾದ. ಕುದಿಯುತ್ತಲೇ ಗುರುವಿನ ಬಳಿಗೆ ಬಂದು ಬಡಿಗೆ ಒಗೆದ. ಗುರುಗಳು ಸುಮ್ಮನೇ ನಕ್ಕರು.
ಇದೆಂಥ ಮೋಸ ಗುರುಗಳೇ ? ಸತ್ಯ ಕಾಣಲಿಲ್ಲ ಗುರುಗಳೆ ನನ್ನ ಜೀವನ ಹಾಳಾಯಿತು. ಎಂದ ಶಿಷ್ಯ. ಅವಸರವೇಕೆ ? ಕಾಣುತ್ತದೆ. ಹಾಗೇ ಹಿಡಿದಿರು ಬಡಿಗೆ ಎಂದರು ಗುರುಗಳು. ಇಪ್ಪತ್ತು ವರ್ಷಗಳಾದವು ಕಂಡಿಲ್ಲವಲ್ಲ. ಎಂದ ಶಿಷ್ಯ. “ಹೀಗೆ ಹಿಡಿದರೆ ಇಪ್ಪತ್ತು ಜನ್ಮವಾದರೂ ಸತ್ಯ ಕಾಣುವುದಿಲ್ಲ ಮೊಕ್ಷವಾಗುವುದಿಲ್ಲ” ಎಂದರು ಗುರುಗಳು. ಈ ಬಡಿಗೆ ಸತ್ಯಕ್ಕೆ ಏನು ಸಂಬAಧವೆAದು ನೀನು ಒಂದು ದಿನವೂ ವಿಚಾರಿಸಲಿಲ್ಲ. ಆ ವಿಚಾರ ನಿನಗೆ ಬರಲೆಂದೇ ಈ ಬಡಿಗೆ ನಿನಗೆ ಕೊಟ್ಟೆ. ಈ ಜಿಜ್ಞಾಸೆಗೆ ನೀನು ಬರುವಿ ಎಂದು ದಾರಿ ಕಾಯ್ದೆ. ಶಿಷ್ಯನೇ ಇಪ್ಪತ್ತು ವರ್ಷ ನೀನು ಕತ್ತಲೆಯಲ್ಲಿ ಕಳೇದೆ ಎಂದರು ಗುರುಗಳು. ಆಗ ಶಿಷ್ಯನು ತಲೆಯಲ್ಲಿ ಸತ್ಯದ ಅರುವಿನ ಜ್ಯೋತಿ ಬೆಳಗಿತು.
ಅದಕ್ಕೆಂತಲೇ ಅಲ್ಲಮಪ್ರಭುದೇವರು ಅದ್ಭುತವಾಗಿ ಒಂದು ವಚನ ಹೇಳಿರಬಹುದು. ಜ್ಯೋತಿ ಇದ್ದರೂ ಕತ್ತಲೆ ಕಂಡೆ, ಸಂಪತ್ತು ಇದ್ದರೂ ಬಡತನ ಅನುಭವಿಸಿದೆ, ಎಂದು ಮುಂತಾಗಿ ಈ ಮುಂದಿನ ವಚನದಲ್ಲಿ ಹೇಳಿರುವುದನ್ನು ಕಾಣಬಹುದು. –
ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ,
ನಿಧಾನ ಕಂಡಾ, ಇರಲು ಬಡತನ ಕಂಡಾ,
ಪ್ರಸಾದ ಕಂಡಾ ಕೊಂಡಡೆ ಪ್ರಳಯ ಕಂಡಾ,
ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ.
ಪ್ರಸ್ತುತ ವಚನದಲ್ಲಿ ಅಲ್ಲಮರು ಜ್ಞಾನವೆಂಬ ಜ್ಯೋತಿ ನಮ್ಮಲ್ಲಿದ್ದು ಅರಿಯದೆ ಕತ್ತಲೆ ಕಾಣುತಿದ್ದೇವೆ. ದೇವನ ಜ್ಞಾನ ಸಂಪತ್ತು ಎಲ್ಲಾ ಕಡೆಗೂ ಇದೆ ಅದನ್ನರಿಯದೆ ಬಡತನದಿಂದ ನರಳುತಿದ್ದೇವೆ. ದೇವರು ಪ್ರಸಾದವೆಂಬ ಜ್ಞಾನವನ್ನು ಕೊಟ್ಟಿರುವಾಗ ಭ್ರಾಂತಿಯ ಸಂಸಾರದಲ್ಲಿದ್ದು ಜನನ ಮರಣಗಳ ಚಕ್ರದಲ್ಲಿ ಸಿಕ್ಕಿ ದುಃಖವನ್ನು ಅನುಭವಿಸುತ್ತಿದ್ದೇವೆ. ಎಂದಿದ್ದಾರೆ. ಆದ್ದರಿಂದ ಮಾನವನು ಅರಿವಿನ ಜ್ಯೋತಿಗಾಗಿ ಹಂಬಲಿಸಬೇಕು.
ಡಾ. ಈಶ್ವರಾನಂದ ಸ್ವಾಮೀಜಿ
ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮಹಾಸಂಸ್ಥಾನ ಮಠ ಟ್ರಸ್ಟ್ (ರಿ)
ಸಸ್ತಾಪೂರ ಬೀದರ ಜಿಲ್ಲೆ
ಅಧ್ಯಕ್ಷರು ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ (ರಿ)
ಮುದನೂರು ಯಾದಗಿರಿ ಜಿಲ್ಲೆ.
ಮೊ- ೯೩೪೧೧೩೭೮೮೨.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply