ಜಿಲ್ಲಾದ್ಯಂತ ಬಸ್ ಸಂಚಾರ ಆರಂಭ

0

ವಿಜಯಪುರ – ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ. 5ಕ್ಕಿಂತ ಕಡಿಮೆ ಇದ್ದರೂ ಅನಲಾಕ್ ಮಾಡಿಲ್ಲ. ಆದರೂ ಜಿಲ್ಲಾದ್ಯಂತ ಬಸ್ ಸಂಚಾರ ಆರಂಭವಾಗಿದೆ.  ಬೆಳಿಗ್ಗೆಯಿಂದಲೇ ಬಸ್ಸುಗಳ ಓಡಾಟ ಬಹಳ ದಿನಗಳ ನಂತರ ಪುನಾರಂಭವಾಗಿದ್ದು, ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ವಿಜಯಪುರ ನಗರದಲ್ಲಿರುವ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಸೇವೆ ಬೆಳಿಗ್ಗೆ 6 ಗಂಟೆಯಿಂದಲೇ ಪುನಾರಂಭವಾಗಿದೆ.

ಲಾಕಡೌನ್ ನಂತರ ಬಸ್ಸುಗಳು ಸಂಚಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ಸುಗಳಿಗೆ ತಳಿರು ತೋರಣ, ಹೂವುಗಳೊಂದಿಗೆ ಅವುಗಳನ್ನು ಸಿಂಗರಿಸಲಾಗಿದೆ. ಸಿಬ್ಬಂದಿಗಳು ಬಸ್‌ಗಳನ್ನು ಸಿಂಗರಿಸಿಕೊಂಡು ನಿಲ್ದಾಣಕ್ಕೆ ತೆಗೆದುಕೊಂಡು ಬಂದಿದ್ದಾರೆ. ತೆಂಗಿನಗರಿ, ಹೂವಿನಿಂದ ಸಿಂಗರಿಸಿಕೊಂಡಿರುವ ಬಸ್ಸುಗಳು ನಿಲ್ದಾಣಗಳಲ್ಲಿ ಗಮನ ಸೆಳೆಯುತ್ತಿವೆ. ವಿಜಯಪುರ ಜಿಲ್ಲೆಯಿಂದ ರಾಜ್ಯದ ನಾನಾ ಭಾಗಗಳಿಗೆ ಬಸ್ ಸಂಚಾರ ಆರಂಭವಾಗಿದೆ.

ಕೊರೊನಾ ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಎನ್ ಇ ಕೆ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸಿದ್ದು, ಈಗಾಗಲೇ ಸ್ಯಾನಿಟೈಸ್ ಮಾಡಿದೆ. ಸೀಟುಗಳ ಮೇಲೆ ಮಾರ್ಕ್ ಹಾಕಲಾಗಿದ್ದು, ಯಾವ ಸೀಟಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬಹುದು? ಯಾವ ಸೀಟಿನಲ್ಲಿ ಕುಳಿತುಕೊಳ್ಳಬಾರದು ಎಂದು ಮಾರ್ಕ್ ಹಾಕಲಾಗಿದೆ.

ಪ್ರಯಾಣಿಕರು ಮಾಸ್ಕ್ ಧರಿಸಿಕೊಂಡು ಬಂದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಮಾರಾಟಕ್ಕೂ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಬಸ್ ಚಾಲಕರು ಮತ್ತು ನಿರ್ವಾಹಕರು ಕೊರೊನಾ ಲಸಿಕೆ ಎರಡೂ ಡೋಸ್ ಹಾಕಿಸಿಕೊಂಡಿರುವ ಪ್ರಮಾಣ ಪತ್ರ ತಂದರೆ ಮತ್ತು ಒಂದು ಡೋಸ್ ಮಾತ್ರ ಹಾಕಿಸಿಕೊಂಡಿದ್ದರೆ ಆರ್ ಟಿ ಪಿ ಸಿ ಆರ್ ನೆಗೆಟಿವ್ ರಿಪೋರ್ಟ್ ತಂದರೆ ಮಾತ್ರ ಅವರಿಗೆ ಬಸ್ಸುಗಳನ್ನು ಓಡಿಸಲು ಮತ್ತು ಟಿಕೆಟ್ ನೀಡಲು ಅವಕಾಶ ನೀಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ಪ್ರಯಾಣಿಕರಲ್ಲಿ ಸಂತಸ ಮೂಡಿದೆ.  ಮೊದಲ ದಿನ ಸುಮಾರು 650 ಬಸ್ಸುಗಳು ನಾನಾ ಮಾರ್ಗಗಳಲ್ಲಿ ಸಂಚಾರ ನಡೆಸಲಿದ್ದು, ಈಗಾಗಲೇ ಸುಮಾರು 100 ಬಸ್ಸುಗಳು ಓಡಾಟ ಆರಂಭಿಸಿವೆ. ವಿಜಯಪುರದಿಂದ ಬಾಗಲಕೋಟೆ, ಹುಬ್ಬಳ್ಳಿ, ಕಲಬುರಗಿ ಮತ್ತು ಮಹಾರಾಷ್ಟ್ರಗಳಿಗೆ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ ಎಂದು ಎನ್ ಇ ಕೆ ಆರ್ ಟಿ ಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply