ಮೈಸೂರು- ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನದ ಸಂಸ್ಥಾಪಕರಾದ ಶ್ರೀ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ೧೦೬೧ನೆಯ ಜಯಂತಿ ಮಹೋತ್ಸವದಲ್ಲಿ ನಾವೆಲ್ಲ ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಹತ್ತು ಶತಮಾನಗಳ ಹಿಂದೆ ಲೋಕಕಲ್ಯಾಣಕ್ಕಾಗಿ ಕಪಿಲಾ ನದಿಯ ದಡದಲ್ಲಿ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಹಾಸಂಸ್ಥಾನ ಸ್ಥಾಪಿಸಿದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಶ್ರೇಷ್ಠ ಸಂತರಲ್ಲಿ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ಗಂಗರು ಮತ್ತು ಚೋಳರ ನಡುವೆ ಸಂಭವಿಸಲಿದ್ದ ಯುದ್ಧವನ್ನ ತಡೆದು ಘೋರ ಅನಾಹುತವನ್ನ ತಪ್ಪಿಸಿದ ಶ್ರೀಗಳ ದೂರ ದೃಷ್ಟಿಗೆ ಸಾಟಿಯಿಲ್ಲ. ಶತಮಾನಗಳಿಂದ ಮಠದ ಪರಂಪರೆಯಿAದ ಬಂದ ಎಲ್ಲಾ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕ್ಕೆ ತಮ್ಮದೇ ಆದ ಭವ್ಯ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ನಾಡಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗಲೆಲ್ಲ ಶ್ರೀಮಠ ನೇರವಿನ ಹಸ್ತ ಚಾಚಿದೆ. ಕೋರೊನ ಲಾಕ್‌ಡೌನ್ ಸಂದರ್ಭದಲ್ಲೂ ಶ್ರೀಮಠ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಿದೆ. ತ್ರಿವಿಧ ದಾಸೋಹಗಳ ಮೂಲಕ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ ಎಂದರು.

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಮಠಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಬದುಕಿನಲ್ಲಿ ನೀಡಿರುವ ಕೊಡುಗೆ ಅನನ್ಯವಾದದ್ದು. ಸುತ್ತೂರು ಮಠವು ಇತರೆ ಮಠಗಳಿಗೆ ಮಾದರಿಯಾಗಿದೆ. ಮಠದ ಜನಪರ ಚಟುವಟಿಕೆಗಳಿಗಾಗಿ ಸರ್ಕಾರದ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ನಡೆಯುತ್ತಿದ್ದು, ಆದರೆ ತಂತ್ರಜ್ಞಾನದ ನೆರವಿನಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಮನೆಮನೆಗೆ ತಲುಪುತ್ತಿರುವುದು ಔಚಿತ್ಯ ಪೂರ್ಣವಾಗಿದೆ ಎಂದು ಮಾತನಾಡಿದರು.

About Author

Priya Bot

Leave A Reply