ಹಾವೇರಿ- ಗ್ರಾಮ ಪಂಚಾಯತ್ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇದೇ ಡಿಸೆಂಬರ್ 30 ರಂದು ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ. ಎಣಿಕೆಗಾಗಿ 323 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಪಾಳೆಯಲ್ಲಿ ಪಂಚಾಯತಿಗಳನ್ನು ವಿಂಗಡಿಸಿ ಮತ ಎಣಿಕೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 22 ರಂದು ನಡೆದ 104 ಹಾಗೂ ಡಿಸೆಂಬರ್ 27 ರಂದು ನಡೆದ 105 ಗ್ರಾಮ ಪಂಚಾಯತಿಗಳ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಇದೇ ಡಿಸೆಂಬರ್ 30ರ ಬುಧವಾರ ಬೆಳಿಗ್ಗೆ 8 ರಿಂದ ಜಿಲ್ಲೆಯ ಎಂಟು ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆ ಜರುಗಲಿದೆ ಎಂದು ತಿಳಿಸಿದರು.
ಜಿಲ್ಲೆಯ 209 ಗ್ರಾಮ ಪಂಚಾಯತ್ಗಳ 1056 ಕ್ಷೇತ್ರಗಳ 2967 ಸ್ಥಾನಗಳ ಪೈಕಿ 68 ಕ್ಷೇತ್ರಗಳ 224 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 988 ಕ್ಷೇತ್ರಗಳ 2743 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 7450 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಮೊದಲ ಹಂತದಲ್ಲಿ 84.01 ಹಾಗೂ ಎರಡನೇ ಹಂತದಲ್ಲಿ 85.13 ರಷ್ಟು ಮತದಾನವಾಗಿದೆ. ಶೇ.85.64 ರಷ್ಟು ಪುರುಷರು, ಶೇ.83.46 ರಷ್ಟು ಮಹಿಳೆರು ಹಾಗೂ ಇತರೆ ಶೇ.4.17 ರಷ್ಟು ಸೇರಿ 84.59 ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.