ಬಾಗಲಕೋಟೆ: ದೇಶ ವಿದೇಶಗಳಲ್ಲಿ ಕೊರೊನಾ ರೂಪಾಂತರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೊರೊನಾ ಮಾದರಿಗಳ ಸಂಗ್ರಹವನ್ನು ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಿವಯೋಗಿ ಕಳಸ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಕೋವಿಡ್, ಮತದಾರರ ಪರೀಷ್ಕರಣೆ, ಪ್ರವಾಹ ಹಾಗೂ ಅತೀವೃಷ್ಠಿ ಕುರಿತ ಪರಿಹಾರ ಸೇರಿದಂತೆ ಇತರೆ ವಿಷಯಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನ ಹೆಚ್ಚಾಗಿ ಸೇರುವ ಬಸ್ ನಿಲ್ದಾಣ, ಮದುವೆ ಮಂಟಪ ಸೇರಿದಂತೆ ಇತರೆ ಸ್ಥಳಗಳಲ್ಲಿ ಕೊರೊನಾ ಸ್ಯಾಂಪಲ್ ಸಂಗ್ರಹ ಕೌಂಟರ್‍ಗಳನ್ನು ತೆರೆಯುವಂತೆ ಸೂಚಿಸಿದರು. ಕೋವಿಡ್ ಲಸಿಕೆ ಸದ್ಯದಲ್ಲಿಯೇ ಪರಿಚಯಿಸಲಿದ್ದು, ಮೊದಲ ಹಂತದ ಫಲಾನುಭವಿಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಅಮೇರಿಕಾದಿಂದ ಲಂಡನ ಮಾರ್ಗವಾಗಿ ಇಲಕಲ್ಲ ನಗರಕ್ಕೆ 4 ಜನ ಬಂದಿದ್ದು, ಅವರೆಲ್ಲರನ್ನು ಪರೀಕ್ಷಿಸಿದಾಗ ನೆಗಟಿವ್ ವರದಿಯಾಗಿದೆ. ಆದರೆ ಅವರ ಮನೆಯಲ್ಲಿದ್ದ ಮಹಿಳೆಗೆ ಕೋವಿಡ್ ಪಾಜಿಟಿವ್ ದೃಡಪಟ್ಟಿದೆ. ಬ್ರಿಟನ್‍ನಿಂದ ಜಮಖಂಡಿಗೆ ಆಗಮಿಸಿದ ಮಹಿಳೆಯ ಕೋವಿಡ್ ವರದಿ ನೆಗಟಿವ್ ಬಂದಿದ್ದು, ಆದರೆ ಅವರ ಮನೆಯ ಓರ್ವ ಮಹಿಳೆಗೆ ಕೋವಿಡ್ ದೃಡಪಟ್ಟಿರುವುದಾಗಿ ತಿಳಿಸಿದರು. ಕೋವಿಡ್ ಲಸಿಕೆ ಸಂಗ್ರಹಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ಸಿ ಕೆಟಗರಿಯ 4367 ಮನೆಗಳಿಗೆ ತಲಾ 50 ಸಾವಿರ ರೂ.ಗಳಂತೆ ಒಟ್ಟು 21.83 ಕೋಟಿ ರೂ.ಗಳನ್ನು ಪರಿಹಾರವನ್ನು ಪಾವತಿಸಲಾಗಿದೆ. ಕೈಮಗ್ಗ ಹಾನಿಗೊಳಗಾದ 117 ಫಲಾನುಭವಿಗಳಿಗೆ 7 ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ. ಎ ಮತ್ತು ಬಿ ಮಾದರಿಯ 960 ಮನೆಗಳನ್ನು ಆರ್‍ಜಿಎಚ್‍ಸಿಎಲ್ ನಿಗಮದಿಂದ ಪರಿಹಾರ ಪಾವತಿಗೆ ಕ್ರಮವಹಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಹಾನಿಗೊಳಗಾದ ಕಾಮಗಾರಿ ದುರಸ್ಥಿಗೆ 33 ಕೋಟಿ ಅನುದಾನ ಬಿಡುಗಡೆಯಾಗಿದ್ದು, 32 ಕಾಗಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 22 ಪ್ರಗತಿಯಲ್ಲಿರುವುದಾಗಿ ತಿಳಿಸಿದರು.

Leave A Reply