*ಪ್ರಾಣ ಪಣಕ್ಕಿಟ್ಟು ಜನರ ಜೀವ ಉಳಿಸಿದ ಕೊರೋನಾ ವಾರಿಯರ್ಸ್ಗಳಿಗೆ ಪರಿಹಾರ ನೀಡದ ಅಸಮರ್ಥ ರಾಜ್ಯ ಬಿಜೆಪಿ ಸರ್ಕಾರ: ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಕಿಡಿ*
ಸರ್ಕಾರ ಅಳೆದು ತೂಗಿ ಸರ್ಕಾರಿ ನೌಕರರನ್ನೂ ಕೊರೋನಾ ವಾರಿಯರ್ಸ್ಗಳೆಂದು ಘೋಷಿಸಿತು ಆದರೆ ಪ್ರಾಣಪಣಕ್ಕಿಟ್ಟು ಕೆಲಸ ಮಾಡಿದ ಇವರುಗಳಿಗೆ ಕನಿಷ್ಟ ಗೌರವ, ನ್ಯಾಯಯುತ ಪರಿಹಾರ ನೀಡದೆ ರಾಜ್ಯ ಬಿಜೆಪಿ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ, ಇದೊಂದು ಅಸಮರ್ಥ, ನಾಲಾಯಕ್ ಸರ್ಕಾರ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಕಿಡಿಕಾರಿದರು.
ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರವೇ ಘೋಷಿಸಿದ್ದ 30 ಲಕ್ಷ ರೂಪಾಯಿ ಪರಿಹಾರವನ್ನು ಬಿಬಿಎಂಪಿಯ 17 ಸಿಬ್ಬಂದಿಗಳ ಕುಟುಂಬದವರಿಗೆ ಇನ್ನೂ ತಲುಪಿಸದಿರುವುದು ಅಮಾನವೀಯ ವರ್ತನೆ. ಅಲ್ಲದೇ, ಕೊರೋನಾ ಸಂದರ್ಭದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದಿಂದ ತನ್ನ ಜೇಬು ತುಂಬಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿ, ತಾವೇ ಘೋಷಿಸಿದ ಪರಿಹಾರ ನೀಡಲು ಹಣವಿಲ್ಲದಷ್ಟು ಈ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದ್ದಾರೆ ಎಂದು ಆರೋಪಿಸಿದರು.
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೊರೋನಾ ಯೋಧರು ಮೃತಪಟ್ಟ ಮರುಕ್ಷಣವೇ 1 ಕೋಟಿ ರೂಪಾಯಿ ಪರಿಹಾರ ನೀಡುತ್ತಿದ್ದಾರೆ. ಕಳೆದ ಗುರುವಾರ ಮೃತಪಟ್ಟ ಇಬ್ಬರು ಕೊರೋನಾ ಯೋಧರ ಕುಟುಂಬಗಳನ್ನು ಖುದ್ದಾಗಿ ಭೇಟಿ ನೀಡಿ ಚೆಕ್ ಹಸ್ತಾಂತರಿಸಿದ್ದಾರೆ. ಕೇವಲ 60 ಸಾವಿರ ಕೋಟಿ ಬಜೆಟ್ ಹೊಂದಿರುವ ರಾಜ್ಯ ಇಷ್ಟು ಪ್ರಮಾಣದಲ್ಲಿ ಪರಿಹಾರ ನೀಡುವುದಾದರೆ, ಲಕ್ಷ ಕೋಟಿ ಲೆಕ್ಕದಲ್ಲಿ ಬಜೆಟ್ ಮಾಡುವ ನಿಮಗೆ ಪರಿಹಾರ ನೀಡಲು ಯಾವ ಅಡೆ ತಡೆ ಇದೆ ಎಂದು ಪ್ರಶ್ನಿಸಿದರು.
ಈ ಕೂಡಲೇ ಬಿಬಿಎಂಪಿ ಹಾಗೂ ಇತರೇ ಇಲಾಖೆಗಳಲ್ಲಿ ಕೊರೋನಾ ಯೋಧರಾಗಿ ದುಡಿದು ಮೃತಪಟ್ಟ ಸಿಬ್ಬಂದಿಗಳ ಕುಟುಂಬದವರಿಗೆ ಈ ಕೂಡಲೇ 30 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದ ಪಕ್ಷದಲ್ಲಿ ಎಲ್ಲಾ ಕುಟುಂಬದ ಸದಸ್ಯರನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬಿಬಿಎಂಪಿ ನೌಕರರ ಜತೆ ಆಮ್ ಆದ್ಮಿ ಪಕ್ಷ ಯಾವಾಗಲೂ ಇರುತ್ತದೆ ಎಂದರು.
ದತ್ತಾತ್ರೇಯ ನಗರ ವಾರ್ಡ್ ಮಹಿಳಾ ಘಟಕದ ಅಧ್ಯಕ್ಷರಾದ ಉಷಾ ಮೋಹನ್ ಹಾಜರಿದ್ದರು.
Jyothish kumar