ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ

ಎತ್ತು ಬೆಳೆದ ಧಾನ್ಯವನುಂಬ

ದೇವರ್ಕಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ! ರಾಮನಾಥ.

ಈ ಜಗತ್ತಿಗೆ ಈಶ್ವರನೊಬ್ಬನೆ ಒಡೆಯನು. ಅವನ ವಾಹನ ಎತ್ತು(ನಂದಿ). ಈಶ್ವರನ ಪ್ರಸಾದ ರೂಪವಾದ ಧಾನ್ಯವನ್ನು ಬೆಳೆಯಲು ಎತ್ತು ಅವಶ್ಯಕ. ಇದನ್ನು ಕರುಣಿಸಿದವನನ್ನು ಕುರಿತು ಪ್ರಾರ್ಥನೆ ಮಾಡಲು ಮರೆಯಬಾರದು. ಈಶ್ವರನು ಘನದಯಾಳುವಾದರೂ ಕೃತಘ್ನರಾದವರು ಅವನನ್ನು ನೆನೆಯಲಾರರು. ಮಾನವರು ದುಃಖ ಅಥವಾ ಸಂಕಟ ಪರಂಪರೆಗೆ ಸಿಕ್ಕಾಗ ಮಾತ್ರ ಈಶ್ವರನ ನೆನಪಾಗುವುದೆಂದಿದ್ದಾರೆ ದಾಸಿಮಯ್ಯನವರು ಈ ಮುಂದಿನ ವಚನದಲ್ಲಿ.-

ಎಡರಡಿಸೆ ಮೃಡ ನಿಮ್ಮ ನೆನೆವರು

ಎಡರಡಿಸಿದ ವಿಪತು ಕಡೆಯಾಗಲೊಡನೆ

ಮೃಡ ನಿಮ್ಮ ನೆಡಹಿಯೂ ಕಣರು ರಾಮನಾಥ.

ಮಾನವಜೀವಿಯ ಸ್ವಭಾವವನ್ನು ದಾಸಿಮಯ್ಯನವರು ತೆರೆದಿಟ್ಟಿದ್ದಾರೆ. ಮಾನವನಿಗೆ ಸಂಕಟ ಕಾಲದಲ್ಲಷ್ಟೆ ಈಶ್ವರನ ಸ್ಮರಣೆ ಬರುವುದು. ಉಳಿದ ವೇಳೆಯಲ್ಲಿ ಅವನನ್ನು ಎಡಹಿ ಬಿದ್ದರೂ ಕಣ್ಣೆತ್ತಿ ನೀಡುವುದಿಲ್ಲ. ಪ್ರಾರ್ಥನೆ ಸತ್ಯ ಶುದ್ಧ ಮನಸ್ಸಿನ ಅಂತರಾಳದಿಂದ ಹೊರಹೊಮ್ಮಬೇಕು. ಲೋಭಿಗೆ, ವಿಕಾರಿಗೆ, ಈಶ್ವರ ಒಲಿಯನು, ಅವರ ಪೂಜಾದಿಗಳು ವ್ಯರ್ಥ.

ಅಡವಿಯಾರಣ್ಯಗಳಲ್ಲಿ ಮಡಿವನಕ್ಕ ತಪವಿದ್ದು

ಮಡಿವಾಗ ಮೃಡನ ಮರೆದಡೆ ತುಂಬಿದ ಸಕ್ಕರೆಯ

ಮಡುವಿನೊಳಗೆ ಹೊಕ್ಕಂತೆ ರಾಮನಾಥ.105

ಇಡೀ ಆಯುಷ್ಯವನ್ನೆಲ್ಲ ಅರಣ್ಯದಲ್ಲಿದ್ದು, ಜಪ-ತಪಗಳನ್ನಾಚರಿಸಿ, ಸಾವು ಸಮೀಪಿಸಿದಾಗ ಈಶ್ವರ ಧ್ಯಾನ ಮಾಡದಿದ್ದರೆ, ಸಕ್ಕರೆ ತೆಗೆದುಕೊಂಡು ನೀರಿನ ಮಡುವಿನಲ್ಲಿ ಹೊಕ್ಕ ಹಾಗೆ ವ್ಯರ್ಥವಾಗುವುದೆಂದು ದಾಸಿಮಯ್ಯನವರು ಮಾರ್ಮಿಕವಾಗಿ ತಿಳಿಸಿದ್ದಾರೆ. ಪ್ರಾರ್ಥನೆ ಸದಾ ನಡೆಯುತ್ತಿರಬೇಕು. ಪವಿತ್ರ ಮನಸ್ಸಿನಿಂದ ಸಾಗಬೇಕು. ಶ್ರದ್ಧೆ-ನಿಷ್ಠೆಯಿಂದ ಈಶನ ಅಸಾಮಾನ್ಯ ಸಾಮಥ್ರ್ಯವನ್ನು, ಉದಾರಭಾವವನ್ನು ಮನದಲ್ಲಿ ತಂದು, ನಾನಾ ವಿಧವಾಗಿ ಜೀವಿಗಳು(ಭಕ್ತ) ಸ್ತುತಿಸಬೇಕು. ಇಂತಹ ಭಕ್ತರು ಅಡವಿಯಲ್ಲಿರಲಿ ಅಥವಾ ಮನೆಯಲ್ಲಿರಲಿ ಅದು ಅವನಿಗೆ ಸ್ವರ್ಗಸಮಾನವಾಗುತ್ತದೆ. ಕಪಟಿ, ವಿಕಾರಿ, ಭಾವನೆÀಯ ಭಕ್ತ ಎಲ್ಲಿದ್ದರೂ ಅದು ನರಕಕ್ಕೆ ಸಮಾನ ಎನ್ನುವರು ದಾಸಿಮಯ್ಯನವರು ಈ ಕೆಳಗಿನ ವಚನದಲ್ಲಿ-

ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು

ಅದು ಪಟ್ಟಣವೆಂದೆನಿಸುವುದು

ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದರೂ

ಅದು ನಟ್ಟಡವಿ ಕಾಣಾ ರಾಮನಾಥ.

ದೇವರ ದಾಸಿಮಯ್ಯನವರು ಮಾನವರ ಸ್ವಭಾವವನ್ನು ತಮ್ಮ ವಚನದಲ್ಲಿ ತೆರೆದಿಟ್ಟಿದ್ದಾರೆ. “ಸಂಕಟ ಬಂದಾಗ ವೆಂಕಟರಮಣ” ಎಂಬ ಆಡುನುಡಿಯಂತೆ, ಕಷ್ಟ ಬಂದಾಗ ಮಾತ್ರ ದೇವರ ನೆನಪಾಗುವುದು ಸಹಜ. ಅಂಥ ತಾಮಸಿಕ ಭಕ್ತರು ಆಪತ್ತಿನಲ್ಲಿದ್ದಾಗ “ಕಾಯಯ್ಯ, ಈಯಯ್ಯ” ಎಂದು ದೇವರಿಗೆ ಮೊರೆಯಿಡುವವರಲ್ಲದೆ, ಬಂದ ಆಪತ್ತು (ಕಷ್ಟ) ಬದಿಗೆ ಸರಿದಾಗ ಆ ದೇವರನ್ನು ಎಡವಿದರೂ ಗಮನಹರಿಸರು. ಇಂಥ ಜನರ ನಡತೆಯನ್ನು ದೇವರ ದಾಸಿಮಯ್ಯನವರು ಹೇಳಿದ್ದಾರೆ.

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,

ಸುಳಿದು ಬೀಸುವ ಗಾಳಿ ನಿಮ್ಮ ದಾನ,

ನಿಮ್ಮ ದಾನವನುಂಡು ಅನ್ಯರ ಹೊಗಳುವ

ಕುನ್ನಿಗಳನೇನಂಬೆ? ರಾಮನಾಥ.

ಭೂಮಿ, ಬೆಳೆ, ಬೀಸುವ ಗಾಳಿ, ಮೊದಲಾದವುಗಳು ಜೀವನಕ್ಕೆ ಅವಶ್ಯಕವೆನಿಸಿವೆ. ಇವನ್ನೆಲ್ಲ ಜೀವಿಯ ಮೇಲಿನ ಅನುಕಂಪೆಯಿಂದ ಈಶ್ವರನು ದಯಪಾಲಿಸಿದ್ದಾನೆ. ಈ ಮಹಾದಾನದÀ ಲಾಭವನ್ನು ಹೊಂದಿಯೂ ಅವನನ್ನು ಮರೆತು ಮತ್ತಾರನ್ನೋ ಸ್ಮರಿಸುವ ಕುನ್ನಿಗಳಲ್ಲದೆ ಮತ್ತಿನ್ನೇನು? ಎನ್ನುವರು ದಾಸಿಮಯ್ಯನವರು.

ಕಾಯ ನಿಮ್ಮ ದಾನ, ಜೀವ ನಿಮ್ಮ ದಾನ,

ಕಾಯ ಜೀವವುಳ್ಳಲ್ಲಿಯೆ ನಿಮ್ಮ ಪೂಜಿಸದ

ನಾಯಿಗಳನೇನೆಂಬೆ ಹೇಳಾ? ರಾಮನಾಥ.

ಜೀವ, ಮತ್ತು ಕಾಯಗಳೆರಡು ಈಶ್ವರನ ಕೊಡುಗೆಗಳಾಗಿವೆ. ಇವುಗಳನ್ನು ಪಡೆದ ನಂತರ ಅವುಗಳು ಸಾರ್ಥಕವಾಗಬೇಕು. ಈಶ್ವರನನ್ನು ಪೂಜಿಸುವ ಕಾಯ(ದೇಹ)ದ ಗುಣಧರ್ಮವಾದರೆ, ಮನದಿಂದ ಅವನನ್ನು ಸ್ಮರಿಸುವ ಜೀವದ ಗುಣಧರ್ಮವಾಗಿದೆ. ಇದು ಕಾಯ, ಜೀವಗಳನ್ನು ಪಡೆದುದರ ಸಾರ್ಥಕ್ಯ. ಕರುಣಾಸಾರನಾದ ಈಶ್ವರನು ಜೀವಿಗಳು ಉಂಡುಟ್ಟು ಚೆನ್ನಾಗಿರಲೆಂದು ಪಂಚ ಮಹಾಭೂತಗಳನ್ನೂ, ಅನ್ನಧಾನ್ಯಗಳನ್ನೂ, ಅವುಗಳನ್ನು ಬಿತ್ತಿ ಬೆಳೆಯಲಿಕ್ಕೆ ಎತ್ತು ಮೊದಲಾದವುಗಳನ್ನು ದಾನವನ್ನಾಗಿ ಕೊಟ್ಟಿದ್ದಾನೆ.

ಎತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ,

ಸುತ್ತಿ ಹರಿವ ಸಾಗರ ನಿಮ್ಮ ದಾನ,

ನಿಮ್ಮ ದಾನವನುಂಡು ಅನ್ಯರ ಹೊಗಳುವ

ಕುನ್ನಿಗಳನೇನಂಬೆ? ರಾಮನಾಥ.

ದೇವರ ದಾಸಿಮಯ್ಯನವರು ತಮ್ಮ ವಚನದಲ್ಲಿ, ಈಶ್ವರನು ಜೀವಿಗಳಿಗಾಗಿ ಅಥವಾ ಮಾನವನಿಗಾಗಿ ಎತ್ತು, ಬಿತ್ತು, ನೀರನ್ನು ಅನುಗ್ರಹಿಸಿದ್ದಾನೆ. ಇವಿಲ್ಲದೆ ಮಾನವನು ಬದುಕುವುದು ಅಸಾಧ್ಯ. ಈಶ್ವರನ ಕಾರುಣ್ಯ ಎಂಥದ್ದು! ಅಂತಹವನನ್ನು ಕೃತಜ್ಞತಾಭಾವದಿಂದ ಪೂಜಿಸದೆ, ಪ್ರಾರ್ಥಿಸದೆ, ಭಜಿಸದೆ ಇದ್ದರೆ ಉಪಕಾರಗೇಡಿಯಾಗುತ್ತಾನೆ.

ಕರ್ತಾರನ ಕಮ್ಮಟವಾದ ಈ ವಿಶ್ವದಲ್ಲಿ ಜೀವಿಗಳಿಗೆ ಬೇಕಾದ ಇಳೆ, ಬೆಳೆ ಮೊದಲಾದವುಗಳನ್ನು ಸೃಷ್ಟಿಕರ್ತನಾದ ಈಶ್ವರನು ಕರುಣಿಸಿದ್ದಾನೆ. ಇದೆಲ್ಲವನ್ನು ಅನುಭವಿಸಿ ಭೋಗಿಸಿದ ಮನುಷ್ಯನು ಉಪಕೃತನಾಗಿದ್ದಾನೆಂಬುವುದನ್ನು ಮನನೀಯ ವಿಚಾರ. ಅನುಕೂಲಸಿಂಧು ನೀತಿಯನ್ನು ತೋರೆದು, ಆತನ ಅಸ್ತಿತ್ವವನ್ನು ಒಪ್ಪಿಕೊಂಡು ಜೀವಿಸುವುದರಲ್ಲಿಯೇ ಆನಂದವಿದೆ. ನಂದಿ ಹೋಗುವ ನಂದಾದೀಪವನ್ನು ಹಚ್ಚುವ ಬದಲು ಭಗವಂತನ ಸ್ಮರಣೆಯೆಂಬ ನಂದಾದೀಪವನ್ನು ಹೃನ್ಮಂದಿರದಲ್ಲಿ ಹಚ್ಚಿ, ಅದು ಆರದಂತೆ ನೋಡಿಕೊಳ್ಳಬೇಕು.

 

About Author

Priya Bot

Leave A Reply