ಆಸೆಯೇ ದುಃಖಕ್ಕೆ ಮೂಲ

0

ಡಾ. ಈಶ್ವರಾನಂದ ಸ್ವಾಮೀಜಿ

ಪ್ರಸ್ತುತ ಪ್ರಪಂಚದಲ್ಲಿ ಆಸೆ-ನಿರಾಸೆಗಳು ಒಂದಕ್ಕೊಂದು ವಿರೋಧ ಪದಗಳಾದರೂ ಹೇಳಲು ಕೇಳಲು ಚಂದವೆನಿಸಿದರೂ ಆಚರಿಸಲೂ ಬಲುಕಷ್ಟ ಎನಿಸಬಹುದು. ಏಕೆಂದರೆ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಆಸೆಯೊಂದಿಗೆ ಜೀವನ ಸಾಗಿಸುತ್ತವೆ. ಆದರೆ ಎಲ್ಲಾ ಜೀವಿಗಳಿಗಿಂತ ಮಾನವ ಕುಲಕೋಟಿ ಆಸೆಯೇ ತನ್ನ ಜೀವನವಾಗಿ ಮಾಡಿಕೊಂಡಿದೆ. ಅವನಿಗಾಗಿ ಈ ಮಾತು. “ಆಸೆಯೇ ದುಃಖಕ್ಕೆ ಮೂಲ” ಎಂಬ ಮಹಾತ್ಮರ ವಾಣಿ ಅಮೃತವಾದರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸದಿದ್ದರೆ ಜೀವನ ವಿಷಮಯವಾಗುವುದು.

ಮಾನವನಿಗೆ ಆಸೆ ಆಮಿಷಗಳು ಸಾಮಾನ್ಯವಾದರೂ ಅದನ್ನು ಎಷ್ಟರಮಟ್ಟಿಗೆ ಇರಬೇಕೆಂಬುವುದು ಶರಣರ ಧ್ಯೇಯ. ಮಾನವನು ಪರಮ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮವನ್ನು ಅನುಭವಿಸುವದರ ಜೊತೆಗೆ ಮೋಕ್ಷ ಹೊಂದಬೇಕಾದದ್ದು ಪರಮ ಗುರಿ. ಇದು ಶರಣರ, ಸಂತರ, ದಾಸರ, ಭಕ್ತರ ಸಂಪ್ರದಾಯವಾಗಿದೆ. ಇದರ ಕಡೆಗೆ ಹೆಚ್ಚು ಗಮನಹರಿಸಿ ಲೌಕಿಕ ವಿಷಯ ವಸ್ತುಗಳ ಕಡೆಗೆ ಅಷ್ಟರಮಟ್ಟಿಗೆ ಆಸೆ ಇರಬೇಕೆನ್ನುವುದು ಅನುಭಾವಿಗಳ ಅನುಭವದ ವಚನಗಳು.

ಆಸೆ ಇರಬೇಕು ಎಲ್ಲಿ ಎಂಬುವುದನ್ನು ದೇವರ ದಾಸಿಮಯ್ಯನವರು ಈ ಮುಂದಿನ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.-
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತು
ಆಶ್ರಯದ ನಿದ್ರೆ ಕೆಟ್ಟಿತ್ತು ಗ್ರಾಸ ಮೆಲ್ಲನಾಯಿತ್ತು
ಸ್ತ್ರೀಯರ ಮೇಲಿನ ಇಚ್ಛೆ ಕೆಟ್ಟಿತ್ತು.
ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ! ರಾಮನಾಥ.

ಆಸೆ ದುಖಃಕ್ಕೆ ಕಾರಣ. ಅದರಿಂದ ಬೇಸತ್ತು ಹೋಗಿದ್ದಾರೆ. ಅದು ಅವರ ನಿದ್ರೆ ಕೆಡಿಸಿದೆ. ಊಟ ಸೇರುವುದಿಲ್ಲ. ಸ್ತ್ರೀ ಮೇಲಿನ ಇಚ್ಛೆಯು ಸಹ ಇಲ್ಲದಾಯಿತು. ಇದೆಲ್ಲವೂ ದೇವರ ಅರ್ಚಿಸುವ ಆಸೆಯಿಂದ ಎಲ್ಲವೂ ಕಳೆದುಕೊಂಡೆ ಎಂದಿದ್ದಾರೆ.
ಶರಣರು, ಸಂತರು, ಮಹಾತ್ಮರು, ದಾರ್ಶನಿಕರು, ತತ್ವಜ್ಞಾನಿಗಳೆಲ್ಲರೂ ಸಂಸಾರಿಕರಾಗಿದ್ದರೂ ಪಾರಮಾರ್ಥಿಕ ಜೀವನ ಆಯ್ಕೆಮಡಿಕೊಂಡಿದ್ದರು. ಪಾರಮಾರ್ಥ ಹಾಗೂ ಪ್ರಪಂಚಗಳೆರಡನ್ನು ಸಮಸಮವಾಗಿ ಅಳವಡಿಸಿಕೊಂಡು ನಿಭಾಯಿಸುತ್ತ ಸತ್ಯದ ದರ್ಶನಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಅದಕ್ಕಾಗಿ ತಮ್ಮ ಜೀವನ ಮೀಸಲಾಗಿಟ್ಟುಕೊಂಡಿದ್ದರು.
ಕಣ್ಣು ಮೀಸಲು ಶಿವನ, ಕೈ ಮೀಸಲು ಶಿವನ,
ಕಾಲು ಮೀಸಲು ಶಿವನ, ನಾಲಿಗೆ ಮೀಸಲು ಶಿವನ,
ಕಿವಿ ಮೀಸಲು ಶಿವನ, ನಾಸಿಕ ಮೀಸಲು ಶಿವನ,
ತನು ಮನವೆಲ್ಲಾ ಮೀಸಲು ಶಿವನ,
ಈ ಮೀಸಲು ಬೀಸರವಾಗದಂತಿರ್ದಡೆ
ಆತನೇ ಜಗದೀಶ ಕಾಣಾ! ರಾಮನಾಥ.

ಜೀವಿಯ ಶರೀರದ ಪ್ರತಿಯೊಂದು ಇಂದ್ರಿಯಗಳ ಹಿಂದೆ ಈಶ್ವರನ ಶಕ್ತಿ ಅಡಗಿರುವುದರಿಂದ ಜೀವಿ ಎನಿಸಿಕೊಂಡ ಜೀವಿ ಶಿವನಾಗಬೇಕಾದರೆ ತನ್ನ ಶರೀರೇಂದ್ರಿಗಳು ಶಿವನಿಗೆ ಸಲ್ಲಿಸಬೇಕು. ಆದುದರಿಂದ ದಾಸಿಮಯ್ಯನವರು ಶಿವಾರ್ಪಣ ಭಾವನೆಯಿಂದ ಕಣ್ಣು ಮೀಸಲು ಶಿವನ, ಕೈ ಮೀಸಲು ಶಿವನ, ಎಂದು ಹೇಳಿರಬಹುದು. ಆಗ ಜೀವಭಾವ ಹೋಗಿ ಶಿವನಾಗುತ್ತಾನೆ ಎನ್ನುವರು. ದೇವರ ದಾಸಿಮಯ್ಯನವರ ಉಪದೇಶದಂತೆ ಸಾಧನೆಗೆ ಅಡ್ಡಿ ಮಾಡುವ ಪ್ರಾಪಂಚಿಕ ಅಸ್ಥಿರ ವಸ್ತುಗಳನ್ನು ದೂರ ಸರಿಸುತ್ತ ಅವುಗಳ ಹಿಂದೆ ಅಡಗಿರುವ ಪರಮ ಸತ್ಯದ ಕಡೆಗೆ ತಮ್ಮ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು.
ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಮಾನವನ ಆಸೆಯು ಹೇಗೆ ಇರುತ್ತದೆಂಬುವುದನ್ನು ವ್ಯಕ್ತಪಡಿಸಿದ್ದಾರೆ. ಆ ವಚನ ಈ ಮುಂದಿನಂತಿದೆ.-
ಆಸೆಗಾಗಿ ಸತ್ತವರು ಕೋಟಿ
ಆಮಿಷಕ್ಕಾಗಿ ಸತ್ತವರು ಕೋಟಿ
ಹೆಣ್ಣು, ಹೊನ್ನು, ಮಣ್ಣಿಗಾಗಿ ಸತ್ತವರು ಕೋಟಿ
ನಿನಗಾಗಿ ಸತ್ತವರು ಒಬ್ಬರೂ ಕಾಣೆ ಗುಹೇಶ್ವರಾ.

ಆಸೆ ಮಾಡುತ್ತ ಮಾಡುತ್ತ ಸತ್ತವರು ಅನೇಕರು. ಅದರಲ್ಲಿ ಕೆಲವರು ಹೆಣ್ಣಿಗಾಗಿ ಮತ್ತೆ ಕೆಲವರು ಮಣ್ಣಿಗಾಗಿ ಇನ್ನೂ ಕೆಲವರು ಹೊನ್ನಿಗಾಗಿ ಸಾಯುತ್ತಿದ್ದಾರೆ. ಇದೆಲ್ಲ ಏಕೆ ಆಸೆ ಸದ್ಭಕ್ತನಿಗೆ ಯೋಗ್ಯವಲ್ಲ. ಎನ್ನುವರು ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮರು. ಇವರು ಬಸವಾದಿ ಶರಣರ ಕಾಲದಲ್ಲಿ ಆಗಿ ಹೋದ ಶಿವದಂಪತಿಗಳು. ಬಸವಣ್ಣನವರು ಅವರ ಪರೀಕ್ಷಾರ್ಥವಾಗಿ ತಮ್ಮ ಅಂಗಳದಲ್ಲಿ ಜಾಸ್ತಿ ಅಕ್ಕಿ ಚಲ್ಲಿದರು. ಮಾರಯ್ಯ ಅವಿಷ್ಟೂ ಅಕ್ಕಿಯನ್ನು ಆಯ್ದುಕೊಂಡು ಹೆಂಡತಿಗೆ ಕೊಟ್ಟಾಗ ದಿನದಕ್ಕಿಂತಲೂ ಹೆಚ್ಚು ಅಕ್ಕಿ ತಂದಿರುವುದನ್ನು ಗಮನಿಸಿದ ಅವಳು ಆಸೆ ದೇವರ ಅನುಗ್ರಕ್ಕೆ ವಿರೋಧವಾದದ್ದು ದೇವರು ಅದನ್ನು ಒಪ್ಪಿಕೊಳ್ಳುವುದಿಲ್ಲ ಮರಳಿ ಚಲ್ಲಿ ಬರಲು ಗಂಡನಿಗೆ ಹೇಳಿ ಕಳಿಸುವಳು.
ಆಸೆಯಂಬುದು ಅರಸಿಂಗಲ್ಲದೆ ಶಿವಭಕ್ತರಿಗೂಂಟೆ ಅಯ್ಯಾ?
ರೋಷಯಂಬುದು ಯಮಧೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಮಗೆಕೆ? ಈಶ್ವರನೊಪ್ಪ ಮಾರಯ್ಯ ಪ್ರೀಯ
ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ.

ಆಸೆ ಇರಬೇಕು ಅರಸರಿಗೆ ಶಿವಭಕ್ತರಿಗಲ್ಲ. ರೋಷವಿರಬೇಕು ಯಮದೂರಿಗೆ ಅಜಾತರಿಗಲ್ಲ ಎಂಬುವುದನ್ನು ಅರಿತ ಲಕ್ಕಮ್ಮ, ಗಂಡ ತಂದಿರುವ ಹೆಚ್ಚಿನ ಅಕ್ಕಿಯನ್ನು ಚಲ್ಲಿಬರಲು ಹೇಳುತ್ತಾಳೆ. ಇಲ್ಲಿ ದಿನನಿತ್ಯ ತರುವಷ್ಟು ಅಕ್ಕಿ ಮಾತ್ರ ತರಬೇಕೆಂಬುದು ಮಹಾಶಿವಶರಣಿ ಲಕ್ಕಮ್ಮಳ ಅಭಿಪ್ರಾಯಾಗಿದೆ.
ಆಸೆ ಇಲ್ಲದ ಬದುಕು ಹೇಗಿರುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹಣೆಯನ್ನು ನಾವು ಹೀಗೆ ನೋಡಬಹುದು. ಒಂದು ಊರಲ್ಲಿ ತಾಯಿ ಮಗು ಇದ್ದರು. ಅವರು ತಮ್ಮ ಒಂದು ಎಕ್ಕರೆಯಷ್ಟು ಇರುವ ಹೊಲದಲ್ಲಿ ಒಂದು ಚಿಕ್ಕ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತಿದ್ದರು. ತಾಯಿಗೆ ವಯಸ್ಸಾಗಿತ್ತು ಮಗನಿಗೆ ಇಪ್ಪತ್ತು ವಯಸ್ಸು. ತಾಯಿ ಮರಣದ ಶಯನದಲ್ಲಿದ್ದಾಳೆ ಮಗುವಿಗೆ ಹತ್ತಿರ ಕರೆದು ಅವನ ಬದುಕಿಗೆ ಆಶ್ರಯವಾಗುವ ಹಾಗೂ ತನ್ನ ಋಣ ತೀರಿಸುವ ಕೊನೆಯ ಮಾತುಗಳು ಹೇಳುವಳು. ಅದರಿಂದ ತಾನು ಸಂತೋಷದಿಂದ ಕಣ್ಣು ಮುಚ್ಚುತ್ತೇನೆಂದು ಮಗನಿಂದ ಭಾಷೆ ಪಡೆದು ಕಣ್ಣು ಮುಚ್ಚಿದಳು. ಅಂದಿನಿಂದ ಮಗನು ತಾಯಿಯ ಮಾತಿನಲ್ಲಿ ಎಳ್ಳಿನಷ್ಟು ಲೋಪ-ದೋಷವಿಲ್ಲದೆ ತನ್ನ ಸಾಧನೆ ಮುಂದುವರೆಸಿದನು. “ಮಗು ನನ್ನ ಆಯುಷ್ಯ ಮುಗಿಯುತ್ತ ಬಂದಿದೆ.

ಇರುವ ಈ ಒಂದು ಎಕ್ಕರೆ ಭೂಮಿಯಲ್ಲಿ ನಾನಾ ತರಹದ ಹಣ್ಣಿನ ಗಿಡಮರಗಳನ್ನು ಬೆಳೆಸು ಅದರಿಂದ ದೊರೆಯುವ ಹಣ್ಣುಗಳನ್ನು ಸಂತೆಗೆ ಒಯ್ದು ಮಾರಲಾರದೆ, ಹಕ್ಕಿ ಪಕ್ಷಿಗಳಿಗೆ ಆಶ್ರಯ ಹಾಗೂ ಆಹಾರವಾಗಿ ಅವುಗಳ ಕಲರವ ಕೇಳುತ್ತ ಆನಂದದಿಂದ ನೂರು ವರುಷ ಬದುಕು. ಮತ್ತು ಈ ದಾರಿಗೆ ಬರುವ-ಹೋಗುವ ಜನರಿಗೆ ಕರೆದು ಹಣ್ಣುಗಳನ್ನು ತಿನ್ನಲು ಕೊಡು. ಬಾವಿಯಲ್ಲಿರುವ ನೀರನ್ನು ಕುಡಿಯಲು ಕೊಡು. ಅವರ ಆಶೀರ್ವಾದಿಸಿ ಹೋಗುವರು. ಅದು ನನ್ನ ಆಶೀರ್ವಾದದವೆಂದು ತಿಳಿ ಅದು ನಿನ್ನ ತಾಯಿಗೆ ಸಲಿಸುವ ಸೇವೆಯಂದು ತಿಳಿ ಅದರಿಂದ ತನ್ನ ಮಗನಾಗಿ ಹುಟ್ಟಿದ್ದಕ್ಕಾಗಿ ಋಣ ತೀರಿಸಿದ ಹಾಗೆ ಆಗುತ್ತದೆಂದು ಹೇಳುತ್ತ ಈ ಮಾತನ್ನು ನಡೆಯಿಸಿ ಕೊಡುತ್ತಿಯಾ?” ಎಂದು ತಾಯಿ ಮಗನಿಂದ ಭಾಷೆ ಪಡೆದು ಹೇಳಿದ ಮಾತುಗಳಾಗಿವೆ. ಅವನು ತಾಯಿಯ ಮಾತಿನಂತೆಯೇ 20 ರಿಂದ 80 ವರ್ಷದವರೆಗೆ ಜನ ಸೇವೆ ಮಾಡುತ್ತ ಯುವಕನಾಗಿಯೇ ಕಾಲ ಕಳೆದನು.

ಒಮ್ಮೆ ಅಲ್ಲಿಗೆ ಒಬ್ಬ ಸಂತ ಮಹಾತ್ಮನು ಬಂದು ಅವನ ಆತಿಥ್ಯ ಸ್ವೀಕರಿಸಿ ತೃಪ್ತನಾದನು. ಒಂದು ದಿನ ಅವನ ಗುಡಿಸಲಿನಲ್ಲಿಯೇ ಇದ್ದು ಮರುದಿನ ಹೋಗುವಾಗ ನಾಳೆ ಬರುವ ರವಿವಾರ ಅಮವಾಸ್ಯೆ ರಾತ್ರಿ 12 ಗಂಟೆಗೆ ನಿನ್ನ ಗುಡಿಸಲಿನ ಪಕ್ಕದಲ್ಲಿರುವ ಮಾವಿನ ಮರದ ಹಣ್ಣನ್ನು ಮರದಿಂದ ಬೆರ್ಪಡಿಸಿದರೆ ಅದು ಚಿನ್ನದ (ಬಂಗಾರದ, ಸುವರ್ಣದ) ಮಾವಿನಕಾಯಿಯಾಗುವುದು ಎಂದು ಹಾರೈಸಿ ಆಶೀರ್ವದಿಸಿ ಪ್ರಯಾಣ ಮುಂದುವರೆಸಿದರು. ಈ ಮಾತನ್ನು ಪಕ್ಕದ ಹೋಲದ ಮಾಲಿಕ ಕೇಳಿದ ಅವನಿಗೆ ತೊಂಭತ್ತು ವಯಸ್ಸು ಆದರೆ ರಾತ್ರಿ ನಿದ್ರೆ ಬರಲಿಲ್ಲ. ತಲೆಯಲ್ಲಿ ಬಂಗಾರದ ಮಾವಿನಕಾಯಿ, ಅಮವಾಸ್ಯೆ, ರವಿವಾರ ರಾತ್ರಿ 12 ಗಂಟೆಗಳೇ ಓಡಾಡುತಿದ್ದವು. ಆ ಸಂತ ಹೇಳಿದ ದಿನವು ಬಂದಿತು ಈ 80 ವರ್ಷದ ಯುವಕ ರೈತ ತನ್ನ ಗುಡುಸಿಲನಲ್ಲಿ ನಿಶ್ಚಿಂತಯಿಂದ ಹಾಯಾಗಿ ಮಲಗಿದ್ದಾನೆ. ಆದರೆ ಪಕ್ಕದ ಹೊಲದ 90 ವರ್ಷದ ಮುದುಕ ಕತ್ತಲೆಯಲ್ಲಿಯೇ ಲ್ಯಾಟಿನು ಹಿಡಿದುಕೊಂಡು ಬಂದು ಈ 80 ವರ್ಷದ ಯುವಕನ ಗುಡಿಲಿನ ಬಾಗಿಲಿನ ಸಂದಿನಲ್ಲಿ ಇಣುಕಿ ನೋಡಿದ ಮಲಗಿ ನಿದ್ರಿಸುತಿದ್ದದ್ದು ಕಂಡು ಯಾವ ಭಯವಿಲ್ಲದೆ ಮಾವಿನ ಮರ 20 ವರ್ಷದ ಯುವಕನಂತೆ ಹತ್ತಿ ಎಂದು ಕಟ್ಟಿಕೊಳ್ಳದ ಗಡಿಯಾರ ಅಂದು ಕಟ್ಟಿಕೊಂಡಿದ್ದ ಸಮಯ ನೋಡಿದ ಮರದಿಂದ ಕಾಯಿ ಬೇರ್ಪಡಿಸಿ ನೋಡಿದ ಆಶ್ಚರ್ಯ ಆನಂದವಾಗಿ ಎಲ್ಲವು ಕಿಳುತ್ತ ನೋಡುತ್ತ ಕಿಳುತ್ತ ನೋಡುತ್ತ ನೆಲಕ್ಕೆ ಹಾಕುತಿದ್ದನು. ಇದರ ಮದ್ಯೆ ಅವನಿಗೆ ಸಂತೋಷ ಎನಿಸಿದರೂ 80 ವರ್ಷದ ಯುವಕ ನಿದ್ರೆಯಿಂದ ಎಚ್ಚೆತ್ತು ಗುಡಿಸಿಲನಿಂದ ಹೋರ ಬಂದರೆ ಹೇಗೆ ಎಂಬ ನಡುಕ ಒಂದು ಕಡೆಯಿತ್ತು. ಇವನಲ್ಲಿ ಭಯ ನಡುಕ ಸುರುವಾಯಿತು ಆದರೂ ಕೆಟ್ಟಧೈರ್ಯದಿಂದ ಮರದಿಂದ ಎಲ್ಲ ಮಾವಿನ ಕಾಯಿಗಳು ನೆಲ್ಲಕ್ಕೆ ಹಾಕುತಿದ್ದ ಆದರೆ ಒಂದೇ ಒಂದು ಉಳಿದಿತ್ತು ಅದು ಎತ್ತರದಲ್ಲಿತ್ತು ಅದನ್ನು ಬಿಡಬಾರದೆಂದು ಮೇಲ್ಹತ್ತಿ ತೆಗೆಯಬೇಕೆನ್ನುವಷ್ಟರಲ್ಲಿ ನಿಂತಿರುವ ಮರದ ಟೊಂಗೆ ಚಿಕ್ಕದಿರುವುದರಿಂದ ಕಾಯಿ ಸಮೇತ ಮರದಿಂದ ಕೆಳಗೆ ಹೆಣವಾಗಿ ಬಿದ್ದನು.

ಬೆಳಿಗ್ಗೆ 80 ವರ್ಷದ ಯುವಕ ನಿದ್ರೆಯಿಂದ ಎಚ್ಚೆತ್ತು ಗುಡಿಸಿಲನಿಂದ ಹೋರ ಬಂದು ಸೂರ್ಯ ದೇವನಿಗೆ ಹಾಗೂ ಭೂದೇವಿಗೆ ನಮಿಸಿ ತನ್ನ ಕಾಯಕದಲ್ಲಿ ತೊಡಗಿದನು. ಹಾಗೆಯೆ ಅವನ ಗಮನ ಆ ಮಾವಿನ ಮರದ ಕಡೆಗೆ ಹೋಯಿತು ಅಲ್ಲಿ ಚಿನ್ನದ ಮಾವಿನ ಕಾಯಿಯು ರಾಶಿಯಾಗಿ ಬಿದ್ದಿದೆ ಅದರಲ್ಲೊಂದು ಹೆಣ. ಹತ್ತಿರ ಬಂದು ನೋಡಿ ಮರುಗಿದ ಆದರೆ ಚಿನ್ನದ ಮಾವಿನಕಾಯಿ ಹಕ್ಕಿ-ಪಕ್ಷಿಗಳಿಗೂ ಜನರಿಗೂ ತಿನ್ನಲೂ ಬಾರವು. ಮಂಚ, ಬೆಡ್ಡ, ಹಾಸಿಗೆ, ಕೊಂಡುಕೊಳ್ಳಬಹುದು ನಿದ್ರೆ ಕೊಂಡುಕೊಳ್ಳಲಾಗದು. ಚಿನ್ನದ ಮಾವಿನ ಕಾಯಿಯ ಆಸೆಯಿಂದ ತನ್ನ ಬಂಗಾರದಂತ ಜೀವನವನ್ನೇ ಕಳೆದುಕೊಂಡ ಆದರೆ ಅದನ್ನು ಮರಳಿ ಪಡೆಯಲಾಗದು. ಸುವರ್ಣಕಾಯಿ ನೋಡಲು ಬಲು ಅಂದ ಆದರೆ ತಿನ್ನಲು ಬಾರವು. ಆದುದರಿಂದ ಆಸೆ ಇರಬೇಕು. ಆದರೆ ಅತಿಯಾಸೆ ಇರಬಾರದು. ಅದರಿಂದ ದುಃಖವೇ ವಿನಹ ಸಂತೋಷವಿಲ್ಲ. ಅದರಿಂದ ಸುಂದರ ಸುವರ್ಣಮಯವಾದ ಜೀವನ ಕಳೆದುಕೊಳ್ಳಬೇಕಾಗುತ್ತದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply