ಬಳ್ಳಾರಿ- ಜಿಲ್ಲಾ ಖನಿಜ ನಿಧಿ ಅಡಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ಗರ್ಭಿಣಿ ಬಾಣಂತಿಯರು, ಮಕ್ಕಳು, ವಯಸ್ಸಾದವರು ಹಳ್ಳಿಗಳಿಂದ ಪಟ್ಟಣಕ್ಕೆ ಬರಲು ಸಮಸ್ಯೆಯಾಗುತ್ತದೆ ಎಂದು ಅರಿತು ಅಮೃತ ವಾಹಿನಿ ಅಡಿ ಮೊಬೈಲ್ ಮೆಡಿಕಲ್ ಯೂನಿಟ್ ಒದಗಿಸಲಾಗುತ್ತಿದ್ದು, ಈ ಯೂನಿಟ್ಗಳು ಹಳ್ಳಿ-ಹಳ್ಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಿವೆ ಎಂದು ಅರಣ್ಯ,ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಹೇಳಿದ್ದಾರೆ.

ಸಂಡೂರು ಪಟ್ಟಣದ ಬಸ್ ಡಿಪೋ ಆವರಣದಲ್ಲಿ ಜಿಲ್ಲಾಡಳಿತ,ಜಿಪಂ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್ಎಂಡಿಸಿ ಸಿಎಸ್ಆರ್ ನಿಧಿಯಲ್ಲಿ ಅಮೃತ ವಾಹಿನಿ ಯೋಜನೆಯಡಿ ಸಂಚಾರಿ ಆರೋಗ್ಯ ಘಟಕಗಳನ್ನು ಇಂದು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು , ಸಂಡೂರು ತಾಲೂಕಿನ ಜನರು ಈ ಸಂಚಾರಿ ಆರೋಗ್ಯ ಘಟಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗಣಿಗಾರಿಕೆಯಿಂದ ಸಂಡೂರು ತಾಲೂಕು ಜಿಲ್ಲೆಯ ಅಕ್ಷಯ ಪಾತ್ರೆಯಾಗಿದೆ. ಖನಿಜ ನಿಧಿಯಿಂದ ಅನೇಕ ತಾಲೂಕುಗಳು ಅಭಿವೃದ್ದಿ ಅನುದಾನ ಪಡೆಯುತ್ತಿವೆ. 1956ರಿಂದಲೂ ಸಂಡೂರು ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಮಾಲಿನ್ಯರಹಿತ ತಂತ್ರಜ್ಞಾನ ಆಧಾರಿತ ಗಣಿಗಾರಿಕೆ ನಡೆಯುವಂತಾಗಬೇಕು ಎಂದು ಹೇಳಿದ ಸಚಿವ ಸಿಂಗ್ ಅವರು ಕುದುರೆಮುಖ ಗಣಿ ಕಂಪನಿಗೆ  470 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಉತ್ತರ ಕರ್ನಾಟಕದ ಮಲೆನಾಡು ಎಂದು ಖ್ಯಾತಿ ಗಳಿಸಿರುವ ಸಂಡೂರು ಕೂರ್ಗ್ ಮಾದರಿಯಲ್ಲಿ ಪ್ರವಾಸಿ ತಾಣವಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅರಣ್ಯ ಸಚಿವ ಆನಂದ್ಸಿಂಗ್ ಅವರು ಪಕ್ಕದಲ್ಲೆ ವಿಶ್ವ ಪಾರಂಪರಿಕ ತಾಣ ಹಂಪಿಯಿದ್ದು, ಸಂಡೂರು ಸಹ ಪ್ರವಾಸಿ ತಾಣವಾದರೆ ಪ್ರವಾಸೋದ್ಯಮ ಅಭಿವೃದ್ದಿಯ ಜೊತೆಗೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಮುಂದಿನ ದಿನಗಳಲ್ಲಿ ಹೊಸಪೇಟೆ-ಸಂಡೂರು ಅವಳಿ ನಗರಗಳಾಗಲಿವೆ ಎಂದು ಭವಿಷ್ಯ ನುಡಿದರು.

Leave A Reply