ಗರ್ವಬೇಡ

0

ಡಾ. ಈಶ್ವರಾನಂದ ಸ್ವಾಮೀಜಿ

ಸಾಮಾನ್ಯವಾಗಿ ಮಾನವನಲ್ಲಿ ಗರ್ವ, ಅಹಂಕಾರ, ಮಾತ್ಸರ್ಯ, ಅಸೂಯೆ ಮೊದಲಾದ ಗುಣಗಳು ಇರುತ್ತವೆ ಎಂಬುವುದನ್ನು ಅರಿತ ಬಸವಣ್ಣನವರು ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಎಂಬ ಮೊದಲಾದ ಸಪ್ತ ಸೂತ್ರಗಳನ್ನು ತಮ್ಮ ವಚನದಲ್ಲಿ ಹಿಡಿದಿಟ್ಟು ಉಪದೇಶ ಮಾಡಿರುವುದು ಕಾಣುತ್ತೇವೆ. ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿ ಮಾಡಿಕೊಳ್ಳಲು ಸಾಧನೆ ಅವಶ್ಯಕ. ಈ ಎಲ್ಲ ಕೆಟ್ಟ ಗುಣಗಳಲ್ಲಿ ಅಹಂಕಾರ ತುಂಬಾ ಅಪಾಯಕಾರಿ ಎನ್ನಬಹುದು. ಇದು ಇದ್ದರೆ ಏನಾಗುವುದು ಎಂಬುವುದನ್ನು ಅಲ್ಲಮಪ್ರಭುದೇವರು ತಮ್ಮ ಅನುಭವದ ವಾಣಿಯಲ್ಲಿ ಹೀಗೆ ಹೇಳಿದ್ದಾರೆ.

ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ, ನಾಬಲ್ಲೆ,
ಬಲ್ಲಿದರೆಂಬ ಅರುಹಿರಿಯರೆಲ್ಲರು ತಾಮಸಕ್ಕೊಳಗಾಗಿ
ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.
ಅಲ್ಲಮಪ್ರಭುದೇವರು ಅಹಂಕಾರದಿಂದ ನಮ್ಮಲ್ಲಿರುವ ಜ್ಞಾನ ನಾಶವಾಗಿ ಮತ್ತೆ ಈ ಲೋಕದಲ್ಲಿ ಜನಿಸಿ ಜನನ ಮರಣ ಚಕ್ರದಲ್ಲಿ ಸಿಲುಕಬೇಕಾಗುತ್ತದೆ ಎಂಬುದು ಈ ವಚನದಲ್ಲಿ ಸಾರರೂಪವಾಗಿ ತಿಳಿಸಿದ್ದಾರೆ. ಇದಕ್ಕೊಂದು ಸುಂದರ ದೃಷ್ಟಾಂತ ಹೀಗೆ ನೋಡಬಹುದು.

ಒಂದು ದಿನ ಬೇಸಿಗೆಯ ಕಾಲದಲ್ಲಿ ಕಾಡಿನ ರಾಜ ಸಿಂಹ ಭರ್ಜರಿ ಬೇಟೆಯಾಡಿ, ಹೊಟ್ಟೆ ತುಂಬ ತಿಂದು ಮರದ ನೆರಳನಲ್ಲಿ ಮಲಗಿತ್ತು. ಗಾಡನಿದ್ರೆಯಲ್ಲಿದ್ದ ಸಿಂಹಕ್ಕೆ ಥಟ್ಟನೆ ಎಚ್ಚರವಾಯಿತು. ಇದಕ್ಕೆ ಕಾರಣ ಅದರ ಕಿವಿಯ ಹತ್ತಿರ ಗುಂಯ್ ಗುಡುತ್ತಿದ್ದ ಒಂದು ನೊಣ. ಚೆನ್ನಾಗಿ ನಿದ್ರೆ ಮಾಡಬೇಕೆಂದಿದ್ದ ಸಿಂಹಕ್ಕೆ ಭಾರಿ ಕೋಪ ಬಂತು. ನೊಣವನ್ನು ಓಡಿಸಲು ತನ್ನ ಕೂದಲನ್ನು ಪಟಪಟನೇ ಝಾಡಿಸಿತು. ನೊಣ ಸರ್ರನೇ ಹಾರಿ ಗರಗರನೇ ಸುತ್ತಿ ಬಂದು ಸಿಂಹವನ್ನು ರೇಗಿಸುವಂತೆ ಅದರ ಮೂಗಿನ ಮೇಲೆಯೇ ಕುಳಿತುಕೊಂಡಿತು. ಅದರ ಉದ್ಧಟತನವನ್ನು ಕಂಡು ಸಿಂಹಕ್ಕೆ ಇನ್ನೂ ಸಿಟ್ಟು ಹೆಚ್ಚಾಯಿತು. ತನ್ನ ಬಲಗಾಲನ್ನೆತ್ತಿ ಫಟ್ಟನೇ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು. ಆದರೆ ಜಾನ ನೊಣ ಅಲ್ಲಿಂದ ಪಾರಾಗಿ ಮೇಲೆ ಹಾರಿದಾಗ ಸಿಂಹದ ಕಾಲು ಅದರ ಮುಖಕ್ಕೆ ಅಪ್ಪಳಿಸಿ ಭಯಂಕರ ನೋವಾಯಿತು. ಕಣ್ಣಲ್ಲಿ ನೀರು ಬಂದಿತು. ನೊಣ ಗಹಗಹಿಸಿ ನಕ್ಕಿತು. ನೀನೆಂಥ ರಾಜನಯ್ಯಾ ? ನನ್ನಂಥ ಸಣ್ಣ ಪ್ರಾಣಿಯನ್ನು ಹಿಡಿಯಲೂ ಆಗುವುದಿಲ್ಲ ಎಂದಿತು. ಈಗ ಸಿಂಹ ಎದ್ದು ನಿಂತು ಹೋರಾಟಕ್ಕೆ ಮುಂದಾಯಿತು.

ನೊಣಕ್ಕೂ ಈ ಯುದ್ಧ ಇಷ್ಟವೇ ? ಸುಯ್ಯೆಂದು ಸಿಂಹದ ತಲೆಯನ್ನು ಸುತ್ತುತ್ತ, ಕ್ಷಣಮಾತ್ರದಲ್ಲಿ ಅದರ ಕಣ್ಣಿನ ಹತ್ತಿರ ಬಂದು, ಮತ್ತೆ ಅದರ ಕಿವಿಯಲ್ಲಿ ಸೇರಿ, ಹೊರನುಗ್ಗಿ ತೀರ ಬಾಯಿಯ ಹತ್ತಿರವೇ ಬಂದಿತು. ಅದನ್ನು ಕಚ್ಚಿ ಬಿಡಬೇಕೆಂದು ಸಿಂಹ ಬಾಯ್ತೆರೆದು ಮುನ್ನುಗ್ಗಿದಾಗ, ಮುಂದಿದ್ದ ಮರಕ್ಕೆ ಮುಖ ಜೋರಾಗಿ ಬಡಿದು ಕುಸಿದು ಬಿತ್ತು. ಕೆಳಗೆ ಬಿದ್ದು ಸಿಂಹವನ್ನು ನೋಡಿ ನೊಣಕ್ಕೆ ಭಾರಿ ಮಜವಾಯಿತು. ಹೇ, ಹೇ, ಹೇ, ಎಂಥ ಮಜ ಇದು ? ಕಾಡಿನ ರಾಜ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಾನೆ. ಒಂದು ನೊಣದಿಂದ ಪಾರಾಗುವುದು ಸಾಧ್ಯವಿಲ್ಲ, ನನ್ನ ಶಕ್ತಿ ಎಂಥದ್ದು ತಿಳಿಯಿತೇ ? ಎಷ್ಟು ದೊಡ್ಡದು ನಿನ್ನ ದೇಹ ? ಏನು ಶಕ್ತಿ ನಿನ್ನ ಕಾಲಿನಲ್ಲಿ ? ಎಷ್ಟು ಅಬ್ಬರದ ಘರ್ಜನೆ ನಿನ್ನದು, ನಿನ್ನನ್ನು ಕಂಡರೆ ದೊಡ್ಡ ದೊಡ್ಡ ಪ್ರಾಣಿಗಳು ಹೆದರುತ್ತಾವಂತೆ. ಅವೆಷ್ಟು ಹೇಡಿಗಳಿರಬೇಕು, ಛೇ ನಿನ್ನ ಶಕ್ತಿ ಪುಟ್ಟ ರೆಕ್ಕೆಗಳಿಗೂ ಸಮನಲ್ಲ ನಿನ್ನಂಥ ಹತ್ತಾರು ಸಿಂಹಗಳನ್ನು ಕ್ಷಣದಲ್ಲಿ ಸೋಲಿಸಬಲ್ಲೆ ನಾನು. ಹೀಗೆಯೇ ಅದರ ಬಡಾಯಿ ನಡೆದಿತ್ತು.

ಇದರ ಚಲ್ಲಾಟವನ್ನು ಮರದ ಮೇಲಿಂದ ಗಮನಿಸುತ್ತಿದ್ದ ಗಿಳಿಯೊಂದು ನೊಣದ ಹತ್ತಿರ ಹಾರಿ ಬಂದು, ಗೆಳೆಯಾ, ನಿನ್ನ ಶಕ್ತಿ ನಿಜವಾಗಿಯೂ ಅದ್ಭುತವೇ. ಆದರೆ, ನನ್ನೊಂದಿಗೆ ಈ ಮರದ ಕೆಳಗಿನ ಕೊಂಬೆಯವರೆಗೆ ಬರುತ್ತೀಯಾ ? ಎಂದು ಕೇಳಿತು. ಈಗ ತಾನೇ ಸಿಂಹವನ್ನು ಸೋಲಿಸಿದ ಅಮಲಿನಲ್ಲಿದ್ದ ನೊಣ ಅದೇ ಅಹಂಕಾರದಿಂದ ಗಿಳಿಯೊಂದಿಗೆ ಹಾರಿತು, ಅದನ್ನೇ ಹಿಂಬಾಲಿಸಿತು. ಗಿಳಿ ಮೇಲೆ ಹಾರುತ್ತ, ಹಾರುತ್ತ ಸರಕ್ಕನೇ ಬದಿಗೆ ಸರಿಯಿತು. ಅದರ ಹಿಂದಯೇ ಸಾಗುತ್ತಿದ್ದ ನೊಣ ಗಮನಿಸದೆ ಮುನ್ನುಗ್ಗಿದಾಗ ಅಲ್ಲಿ ಹರಡಿಕೊಂಡಿದ್ದ ಜೇಡರ ಬಲೆಗೆ ಸಿಕ್ಕಿಕೊಂಡಿತು. ಏನೆಲ್ಲ ಒದ್ದಾಡಿದರೂ ಪಾರಾಗುವುದು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಜೇಡರ ಹುಳ ತನ್ನ ಬಲೆಯನ್ನು ಬಿಗಿದು ಇದರ ಪ್ರಾಣವನ್ನು ಹೀರ ತೊಡಗಿತು.

ಆಗ ಗಿಳಿ ಹೇಳಿತು. ‘ಅಯ್ಯಾ, ಕಾಡಿನರಾಜ ಸಿಂಹವನ್ನು ಸೋಲಿಸಿದೆ ಎಂದು ಬೀಗುತ್ತಿದ್ದ ನೀನು ಪುಟ್ಟ ಬಲೆಯಿಂದ, ಜೇಡರ ಹುಳದಿಂದ ಪಾರಾಗಲಾರೆ. ಇನ್ನು ನಿನ್ನ ಅಹಂಕಾರಕ್ಕೆ ಅವಕಾಶವಿಲ್ಲ. ಹೀಗೆ ಹೇಳಿ ಹಾರಿ ಹೋಯಿತು. ಯಾವುದೋ ಪುಣ್ಯ ವಿಶೇಷದಿಂದ ಕೆಲವೊಮ್ಮೆ ದೊಡ್ಡ ಸಾಧನೆಯಾಗುತ್ತವೆ. ದೊಡ್ಡವರ ಸಾಧನೆ ಸರಿಗಟ್ಟುವ ಅವಕಾಶಗಳು ಬರುತ್ತವೆ. ಆ ಸಾಧನೆ ನಮ್ಮ ತಲೆ ತಿರುಗಿಸಬಾರದು. ಯಾವಾಗಲೂ ಅದೇ ಮಟ್ಟದ ಸಾಧನೆ ಮಾಡಲು ಸಾಧ್ಯವಾಗದೇ ಹೋಗಬಹುದು. ಹಿಂದಿನ ಸಾಧನೆಯನ್ನೇ ತಲೆಯಲ್ಲಿಟ್ಟುಕೊಂಡು ಗರ್ವಪಡುತ್ತಿದ್ದರೆ ಒಂದಲ್ಲ ಒಂದು ದಿನ ತೀರ ಸಣ್ಣವರಿಂದಲೇ ಸೋಲು ಕಂಡು ಮುಖಭಂಗಪಡುವಂತಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರಾಗುತ್ತೇವೆ.

ಆದುದರಿಂದ ಅಹಂಕಾರದಿಂದ ದೂರವಿದ್ದು ಎಲ್ಲರನ್ನು ಗೌರವಿಸುವ, ಪ್ರೀತಿಸುವ ಮನೋಭಾವವಿದ್ದರೆ ಖಂಡಿತ ನಾನು ಮತ್ತು ನೀನು ಅಳಿದು ಒಂದೆಯಾಗುತ್ತದೆ ಎಂದಿದ್ದಾರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು.

ನಾನೆಂಬುದು ಅಹಂಕಾರ, ನೀನೆಂಬುದು ಮಾಯೆ.
ನಾನು, ನೀನೆಂಬುಭಯವಳಿದರೆ,
ನಾನೆಂಬುದನು ನೀನೆಂಬವನು ನೀನೇ ಅಯ್ಯಾ,
ಈ ಎರಡರ ಭೇದವೆಲ್ಲಿಯದೋ? ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೇ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply