ಅನುಭಾವ

0

ಡಾ. ಈಶ್ವರಾನಂದ ಸ್ವಾಮೀಜಿ

ಕೆಲವರು ತಾವು ಅನುಭಾವಿಗಳೆಂದು ಬಾಹ್ಯ ರೂಪದಲ್ಲಿ ಮಾತ್ರ ಜಂಭ ಕೊಚ್ಚಿಕೊಳ್ಳುವರು. ಹೇಗೆಂದರೆ ತಾವು ಆಧ್ಯಾತ್ಮವಾದಿಗಳು, ಸಂಸ್ಕಾರವಂತರು, ಉತ್ತಮ ಕುಲದಲ್ಲಿ ಜನಿಸಿದವರು, ಹೀಗೆ ಮೊದಲಾದವುಗಳನ್ನು ಮುಂದೆ ಮಾಡಿಕೊಂಡು ಸಭೆ-ಸಮಾರಂಭಗಳಲ್ಲಿ ತಾವೇ ಮುಂದಿನ ಕುರ್ಚಿಯಲ್ಲಿ ಕುಳಿತು ಇದೆಲ್ಲ ನಾನೇ ಮಾಡಿದ್ದೇನೆಂದು ಬಡಾಯಿ ಕೊಚ್ಚಿಕೊಂಡು ತಾನು ಹಿರಿಯ, ಶಿವಭಕ್ತ, ಶ್ರೀಮಂತ, ಅನುಭಾವಿ ಎಂದು ತನ್ನನ್ನೇ ತಾನು ಹೊಗಳಿಕೊಳ್ಳುವನು. ಇಂಥವರನ್ನು ಕಂಡು ದೇವರ ದಾಸಿಮಯ್ಯನವರ ಹಾಗೂ ಬಸವಾದಿ ಶಿವಶರಣರು ತಮ್ಮ ವಚನಗಳಲ್ಲಿ ಬಹು ಸುಂದರವಾಗಿ ವ್ಯಕ್ತಪಡಿಸಿರುವುದನ್ನು ಕಾಣುತ್ತೇವೆ.

ಅನುಭಾವ ಅನುಭಾವವೆಂದಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ
ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣೀರೋ
ಅನುಭಾವವೆಂಬುದು ರಚ್ಚೆಯ ಮಾತೇ?
ಅನುಭಾವವೆಂಬುದು ಸಂತೆಯ ಸುದ್ಧಿಯೇ?
ಅನುಭಾವವೆಂಬುದೇನು ಬೀದಿಯ ಪಸರವೆ?
ಏನೆಂಬೆ ಹೇಳಾ ಮಹಾಘನವ!
ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗುದಲ್ಲದೆ?
ಕಂಡ ಕಂಡಲ್ಲಿ ಗೊಷ್ಟಿ ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ನಿರ್ಬುದ್ಧಿ ನೀಚರ ಮೆಚ್ಚ ಕೂಡಲಚನ್ನಸಂಗಮದೇವ.

ಕೆಲವರು ಕೇವಲ ಮಾತಿನಲ್ಲಿ ಅನುಭಾವ ಅನುಭಾವ ಎನ್ನುವರು ಆದರೆ ಅನುಭಾವ ವೆಂದರೆ ಬರಿ ಮಾತಲ್ಲ. ಅದು ನೆಲದ ಮರೆಯಲ್ಲಿ ಹುದುಗಿದ ಸಂಪತ್ತು. ಅದು ಎಲ್ಲರಿಗೂ ಸಿಗುವಂತದಲ್ಲ. ಅನುಭಾವ ಶಿಶು ಕಂಡ ಕನಸಿನಂತೆ, ಅದು ಕೇವಲ ವ್ಯರ್ಥಾಲಾಪವಾಗಿದೆ. ಅದು ಸಂತೆಯಲ್ಲಿ ಸಿಗುವ ಮಾತಲ್ಲ. ಅನುಭಾವ ಬೀದಿಯಲ್ಲಿಟ್ಟು ಮಾರುವ ವಸ್ತುವಲ್ಲ. ಅದು ಎಲ್ಲಕ್ಕಿಂತಲೂ ಶ್ರೇಷ್ಟವಾದ ವಸ್ತು, ಅದು ಘನಕ್ಕೆ ಘನವಾಗಿದೆ. ಅಂದರೆ ಅನುಭಾವವು ಕೇವಲ ಮಾತಿಗೆ ಸಿಗದಿರುವಂತದ್ದು ಎಂದು ಚನ್ನಬಸಣ್ಣನವರು ತಮ್ಮ ಅನುಭಾವದಿಂದ ವ್ಯಕ್ತವಾದ ಅನುಭಾವದ ವಚನವಿದು.

ಅರುಹಿನ ವೃತ್ತಿಗೆ ಅನುಭಾವವಾಶ್ರಯ
ಲಿಂಗದ ಅನುಭಾವದಿಂದ ನಿಮ್ಮ ಕಂಡೆನು
ನಿಮ್ಮ ಕಂಡೆನ್ನ ಮರೆದೆ ಕಾಣಾ ಪ್ರಭುವೇ
ಕೂಡಲಚನ್ನಸಂಗಮದೇವಾ.

ಅರುವಿನ ವೃತ್ತಿಗೆ ಅನುಭಾವವೇ ಆಶ್ರಯವೆಂದು ಪ್ರಸ್ತುತ ವಚನದಲ್ಲಿ ಚನ್ನಬಸವಣ್ಣನವರು ಹೇಳಿರುವುದು ಕಾಣಬಹುದು. ಚನ್ನಬಸವಣ್ಣನವರು ಷಟ್ಸ್ಥಲಜ್ಞಾನಿಯಾಗಿದ್ದು ಅನುಭಾವಕ್ಕೆ ಹೆಚ್ಚು ಮಹತ್ವ ಹಾಗೂ ಪ್ರಾಧಾನ್ಯತೆ ಕೊಟ್ಟಿರುವುದನ್ನು ಕಾಣುತ್ತೇವೆ. ಅನುಭವದಿಂದ ಲಿಂಗವನ್ನು ಕಾಣಬಹುದು. ಆ ಅನುಭಾವದಿಂದ ದೇವನನ್ನು ಕಂಡು ತನ್ನನ್ನೇ ತಾನು ಮರೆಯಬಹುದು ಎನ್ನಲಾಗಿದೆ ಪ್ರಸ್ತುತ ಈ ಮೇಲಿನ ವಚನದಲ್ಲಿ.

ಅನುಭಾವವಿಲ್ಲದೆ ಈ ತನು ಎಳತಟವಾದುದಯ್ಯಾ
ಅನುಭಾವವೀ ತನುವಿಂಗೆ ಆಧಾರ
ಅನುಭಾವರ ಅನುಭಾವವನು
ಮನವಾರೆ ವೇದಿಸಿದವರಿಗೆ ಜನನವಿಲ್ಲ ಕಾಣಾ! ರಾಮನಾಥ.
ಆದ್ಯವಚನಕಾರರಾದ ದೇವರ ದಾಸಿಮಯ್ಯನವರು ಅನುಭಾವವು ಈ ತನು ಮನಗಳಿಗೆ ಆಶ್ರಯವಾಗಿ, ಭಕ್ತಿಗೆ ಆಧಾರವಾಗಿ ಭವಬಂಧನದಿಂದ ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ,
ಅನುಭಾವ ಭಕ್ತಿಗಾಧಾರ, ಅನುಭಾವ ಭಕ್ತಿಗೆ ನೆಲೆವನೆ
ಅನುಭಾವ ಉಳ್ಳವರ ಕಂಡು
ತುರ್ಯ ಸಣಭಾಷಣೆಯ ಬೆಸಗೊಳ್ಳದಿದ್ದಡೆ
ನರಕದಲ್ಲಿಕ್ಕಯ್ಯಾ ರಾಮನಾಥ.

ಶಿವಶರಣರು ತಮಗೆ ಅನಿಸಿದ್ದು ಹಾಗೂ ಹೇಳಬೇಕೆಂದಿದ್ದು ಆಮೂಲಗ್ರವಾಗಿ ತಿಳಿದು ತಾವೂ ಅಳವಡಿಸಿಕೊಂಡು ಇನ್ನೊಬ್ಬರಿಗೆ ಸೂತ್ರ ರೂಪದಲ್ಲಿ ಸರಳ, ಸ್ಪಷ್ಟ, ಸಂಕ್ಷಿಪ್ತವಾಗಿ ಹೇಳುವ ಕೌಶಲ್ಯ ಬುದ್ಧಿ ಅವರಲ್ಲಿತ್ತು. ಅನುಭವವನ್ನು ಕರತಾಮಲಕ ಮಾಡಿಕೊಂಡು ಅದೇ ಮಾರ್ಗದಲ್ಲಿ ನಡೆದಿರುವುದನ್ನು ಅವರ ವಚನಗಳ ರೂಪದಲ್ಲಿ ವ್ಯಕ್ತಪಡಿಸಿದ್ದು ಕಾಣಬಹುದು. ಈ ಕೆಳಗಿನ ವಚನದಲ್ಲಿ ಭಕ್ತನಾಗಲು ಭಕ್ತಿಯೊಂದೇ ಸಾಲದು ಅದಕ್ಕೆ ಅನುಭಾವ ಬೇಕೆನ್ನುವರು ಚನ್ನಬಸವಣ್ಣನವರು. ಭಕ್ತಿಗೆ ಅನುಭಾವವೇ ಬೀಜ. ಅನುಭಾವಕ್ಕೆ ಆಚಾರವೇ ಬೀಜ. ಅನುಭಾವ ಹಾಗೂ ಆಚಾರವಿಲ್ಲದ ಭಕ್ತಿ ವ್ಯರ್ಥವೆನ್ನುವರು. ಅನುಭವ ಮಾಡಿಕೊಳ್ಳಲು ಅನುಭಾವಿಗಳ ಜೊತೆಗೆ ವಿನಯದಿಂದ ವರ್ತಿಸಬೇಕು. ಇಲ್ಲವೇ ಅದಕ್ಕೆ ವಿರೋಧವಾಗಿ ನಡೆದರೆ ಅಘೋರ ನರಕದಲ್ಲಿ ಬಿಳುವನೆಂದು ನಿಷ್ಠುರವಾಗಿ ಹೇಳಿದ್ದಾರೆ.
ಭಕ್ತಿಗೆ ಅನುಭಾವವೇ ಬೀಜ ಕಾಣಿರೋ,
ಭಕ್ತಿಗೆ ಅನುಭಾವವೇ ಆಚಾರ ಕಾಣಿರೋ,
ಅನುಭಾವವಿಲ್ಲದವನ ಭಕ್ತಿ ಎಳತಟಗೋಳಿಸಿತ್ತು.
ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ,
ಕೂಡಲಚನ್ನಸಂಗಮದೇವರು ಅಘೋರನರಕದಲ್ಲಿಕ್ಕುವ.

ಭಕ್ತಿಗೆ ಅನುಭಾವವೇ ಆಶ್ರಯವೆಂದು ಚನ್ನಬಸವಣ್ಣನವರು ಬಹುಸುಂದರವಾಗಿ ತಮ್ಮ ವಚನದಲ್ಲಿ ವ್ಯಕ್ತಪಡಿಸಿರುವದು ಕಾಣಬಹುದು. ಶಿವನ ಸ್ವರೂಪ ಅರಿಯಲು ಅನುಭವ ಅತ್ಯವಶ. ಸಾಧಕನ ಹೃದಯದಲ್ಲಿ ಭಕ್ತಿಯನ್ನು ಅಂಕುರಿಸಲು ಅನುಭಾವಿಗಳ ಆಶ್ರಯ ಅಗತ್ಯ. ಅನುಭವಕ್ಕೆ ಭಕ್ತಿಯೇ ಬೀಜ. ಭಕ್ತಿಗೆ ಅನುಭಾವವೇ ಆಚಾರ. ಅದುವೇ ಚೇತನ. ಶರಣರ ಸಂಗದಲ್ಲಿ ಅನುಭಾವ ಅಳವಡಿಸಿಕೊಳ್ಳದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ ಆದುದರಿಂದ ಸಾಧಕನು ಅನುಭವ ಅಥವಾ ಅರಿವು, ಆಚಾರವನ್ನು ಅಳವಡಿಸಿಕೊಳ್ಳಬೇಕು.
ಅನುಭಾವದಿಂದ ಹುಟ್ಟಿತ್ತು ಲಿಂಗ,
ಅನುಭಾವದಿಂದ ಹುಟ್ಟಿತ್ತು ಜಂಗಮ,
ಅನುಭಾವದಿಂದ ಹುಟ್ಟಿತ್ತು ಪ್ರಸಾದ,
ಅನುಭಾವದನುವಿನಲ್ಲಿ ಗುಹೇಶ್ವರಲಿಂಗ ಅನುಪಮ.
ಹೀಗೆ ಅನೇಕ ವಚನಗಳಲ್ಲಿ ಶಿವಶರಣರು ಅನುಭಾವದ ವಿಚಾರವನ್ನು ವ್ಯಕ್ತಪಡಿಸಿದುದಲ್ಲದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದನ್ನು ತಮ್ಮ ಅನುಭಾವವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply