ನಂಬಿಕೆ

0

ಡಾ. ಈಶ್ವರಾನಂದ ಸ್ವಾಮೀಜಿ

ನಂಬಿಕೆ ಎನ್ನುವುದು ಪ್ರತಿಯೊಬ್ಬ ಮಾನವನಲ್ಲಿ ಇರಬೇಕಾದ ಒಂದು ಉತ್ತಮ ಗುಣ. ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದು ಅನುಭವಿಗಳ ಮಾತಿನಿಂದ ಅರಿಯಬೇಕು. ಅದಕೆಂತೆಲೇ ದಾಸರು “ನಂಬಿ ಕೆಟ್ಟವರಿಲ್ಲ” ಎಂದು ಹಾಡಿದ್ದಾರೆ. ನಂಬಿಕೆ ಎನ್ನುವುದು ಬಾಹ್ಯ ವಸ್ತುವಲ್ಲ. ಅದು ಆಂತರಿಕ ಶಕ್ತಿ. ಅದು ಶರಣರ, ಸಂತರ, ಮಹಾತ್ಮರ, ಮತ್ತು ಜ್ಞಾನಿಗಳ ಮನದಲ್ಲಿ ಮನೆ ಮಾಡಿಕೊಂಡಿದೆ. ನಂಬಿಕೆ ತನ್ನ ಹಾಗೂ ಜನರ ಮೇಲಿರುವುದಕ್ಕಿಂತ ದೇವರ ಮೇಲಿರಲಿ ಎನ್ನುವುದು ಅವರ ಆಶಯ. ಯಾಕೆಂದರೆ ದಾಸರು ಹೇಳಿರುವಂತೆ “ಯಾರು ಹಿತವರು ಈ ಮೂವರೊಳಗೆ” ಎಂದಿದ್ದಾರೆ. ಹೆಂಡತಿ ಮಕ್ಕಳೋ? ದನಕರು ಹೊಲಮನೆಗಳೋ? ಅಥವಾ ಬಂಧುಜನರೋ? ತಿಳಿಯದಾಗಿದೆ. ಆದುದರಿಂದ ಅವರ ಅನುಭಾವದ ಮಾತುಗಳಲ್ಲಿ ನಂಬಿಕೆ ಹೀಗೆ ವ್ಯಕ್ತವಾಗಿದೆ-

ನೆರೆ ನಂಬಿ ಕರೆದಡೆ ನರಿ ಕುದುರೆಯಾಗಿ ಹರಿವೆ?
ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗ
ಕರೆದಡೆ ಬಂದುದು ಕರಸ್ಥಲಕ್ಕೆ
ನಂಬದೆ ಕರೆದವರ ಹಂಬಲನೊಲ್ಲನಮ್ಮ ರಾಮನಾಥ.

ದೇವರ ದಾಸಿಮಯ್ಯನವರ ಈ ವಚನದಲ್ಲಿ ನಂಬಿಕೆಯಿಂದ ಏನೇಲ್ಲ ಸಾಧಿಸಬಹುದು ಎಂಬುವುದನ್ನು ಕಾಣುತ್ತೇವೆ. ಭಗವಂತನನ್ನು ಚನ್ನಾಗಿ ನಂಬಿ ಕರೆದರೆ ಓ ಎನ್ನವನು. ನೆಲಕ್ಕೆ ಜಾರಿ ಬಿದ್ದ ಲಿಂಗ(ದೇವರು) ಕರೆದಕೂಡಲೇ ಕರಸ್ಥಲಕ್ಕೆ ಬಂದಿದೆ ಎಂಬುವುದನ್ನು ಹಿಂದೆ ನೂಲಿಯ ಚಂದಯ್ಯನವರ ಜೀವನದಲ್ಲಿ ನಡೆದ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಮನುಷ್ಯ ದೇವರ ಮೇಲಿ ಇಟ್ಟಿರುವ ನಂಬಿಕೆಯಿಂದ ಅವನು ಸೇವಕನಾಗಿ ಕೆಲಸಮಾಡುತ್ತಾನೆಂದು ಇನ್ನೊಂದು ವಚನದಲ್ಲಿ ಕಾಣುತ್ತೇವೆ.

ನಂಬಿದ ಚನ್ನನ ಅಂಬಲಿಯನುಂಡ.
ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ.
ಕುಂಬದ ಗತಿಗೆ ಕುಕ್ಕಿಲಿರಿದು ಕುಣಿದ.
ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ

ನಂಬಿಕೆ ವ್ಯಕ್ತಿಯ ಜೀವನದ ಒಂದು ಅಂಗ. ಅದು ಇಲ್ಲದೆ ಅವನು ಬದುಕಲಾರ. ಭಗವಂತನ ದೃಷ್ಟಿಯಲ್ಲಿ ಎಲ್ಲವು ಒಂದೇ. ಆದರೆ ಅವೆಲ್ಲ ಅವನ ಆಧಿನಕ್ಕೆ ಒಳಪಟ್ಟಿವೆ. “ತೆನ ವಿನಹ ತೃಣನಪೀ ನಚಲತಿ” ಎಂಬ ಮಾತು ನೂರಕ್ಕೂ ನೂರರಷ್ಟು ಸತ್ಯ ಎನ್ನಬಹುದು. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿ ನೋಡಬಹುದು.

ಆಸ್ತಿಕ ಮತ್ತು ನಾಸ್ತಿಕ ಇಬ್ಬರು ಸ್ನೇಹಿತರು. ಒಂದು ದಿನ ಇಬ್ಬರ ಜೇಬೂ ಖಾಲಿಯಾಗಿತ್ತು. ಹೋಟೆಲಿನಲ್ಲಿ ಊಟಾ ಮಾಡಲು ಇಪ್ಪತ್ತು ರೂಪಾಯಿಗಳು ಬೇಕಾಗಿತ್ತು. ಆಸ್ತಿಕ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ನಮಗೆ ಊಟಾ ಸಿಕ್ಕೇಸಿಗುವುದು ಎಂದ. ನಾಸ್ತಿಕ ಇಂದು ನಾವು ಯಾರನ್ನೂ ಕೇಳಬಾರದು ಹಾಗೂ ಕದಿಯಬಾರದು. ಹಾಗೇನಾದರೂ ಸಿಕ್ಕರೇ ಇಂದಿನಿಂದ ನಾನು ದೇವರನ್ನು ನಂಬುತ್ತೇನೆ ಎಂದು ಇಬ್ಬರು ಒಂದು ಮರದ ಕೆಳಗೆ ಕುಳಿತರು. ಅಲ್ಲಿ ಮಹಿಳೆಯರ ಗುಂಪು ಅದರಲ್ಲಿ ಒಂದು ಮಗು ಅದಕ್ಕೆ ಸಮಾಧಾನ ಮಾಡಲು ಪ್ರಯತ್ನಿಸಲು ತಿಂಡಿ ಕೊಡಿಸಲು ಹೋಟೆಲಿನಲ್ಲಿ ಕರೆದೊಯ್ದರು. ಅಷ್ಟರಲ್ಲಿ ಅಲ್ಲೊಂದು ತಮಟೆ ಶಬ್ದ ಕೆಳಿಸಿತು. ಒಂದು ಮಗು ಕಳೆದು ಹೋಗಿದೆ.

ಹುಡುಕಿ ಕೊಟ್ಟವರಿಗೆ ಒಂದು ನೂರು ರೂಪಾಯಿ ಬಹುಮಾನ ಕೊಡಲಾಗುವುದು ಎಂದು ಘೋಷಿಸಿದರು. ಜೋತೆ ಮಗುವಿನ ತಂದೆ ಮತ್ತು ಆ ಮಗುವಿನ ಭಾವಚಿತ್ರವಿತ್ತು. ಅದನ್ನು ಗಮನಿಸಿದ ಇಬ್ಬರು, ಮಹಿಳೆಯರ ಗುಂಪು ಹೋಟೆಲ್ಗೆ ಕರೆದುಕೊಂಡು ಹೋದ ಮಗು ಆಗಿತ್ತು. ಆ ಯಜಮಾನರಿಗೆ ಮಗು ತೋರಿಸಿದರೆ ಇಪ್ಪತ್ತು ರೂಪಾಯಿ ಕೊಡುವಿರಾ? ಎಂದಾಗ ನೂರು ರೂಪಾಯಿ ಕೊಡುತ್ತೇನೆ ಎಂದನು. ಮಗುವಿನ ತೋರಿಸಿದಾಗ ಸಂತೋಷ ಹೊಂದಿದ ಮಗು ಅಪ್ಪಾ ಎಂದು ಓಡಿ ಬಂದಿತು ತಂದೆಗೂ ಖುಷಿಯಾಯಿತು. ನೂರು ರೂಪಾಯಿ ಕೊಟ್ಟು ಹೋದನು. ಅವರಿಬ್ಬರು ದೇವರನ್ನು ಸ್ಮರಿಸುತ್ತ ಊಟಾ ಮಾಡಿ ಹೋದರೂ ಅಂದಿನಿಂದ ಅವರಿಬ್ಬರ ದೇವರ ಮೇಲಿರುವ ಭಕ್ತಿ ಇಮ್ಮಡಿಯಾಯಿತು. ಅಂದರೆ ದೇವರನ್ನು ನಂಬಿದವರಿಗೆ ಎಂದಿಗೂ ಕೈಬಿಡುವುದಿಲ್ಲ. “ಹುಟ್ಟಿಸಿದವನು ಹುಲ್ಲು ಮೇಯಿಸುವುದಿಲ್ಲ” ಎನ್ನುವ ಮಾತು ನಿಜವಾಯಿತು.

ಇನ್ನೊಂದು ದೃಷ್ಟಾಂತ ಇಲ್ಲಿ ನೆನಪಿಸಿಕೊಳ್ಳಬಹುದು. ಒಮ್ಮೆ ವಿವೇಕಾನಂದರು ರೈಲಿನಲ್ಲಿ ಪ್ರಯಾಣ ಮಾಡುತಿದ್ದರು. ಎದುರಿನ ಸೀಟಿನಲ್ಲಿ ಒಬ್ಬ ಗೃಹಸ್ಥ. ಅವನು ಮಧ್ಯಾಹ್ನದ ಊಟದ ಸಮಯದಲ್ಲಿ ತನ್ನ ಊಟದ ಬುತ್ತಿ ಬಿಚ್ಚಿ ಊಟಮಾಡತೊಡಗಿದನು. ಅದನ್ನು ವಿವೇಕಾನಂದರು ನೋಡಿ ಸುಮ್ಮನಿದ್ದರು. ಆದರೆ ಆ ಗೃಹಸ್ಥ ಸ್ವಾಮಿಯವರನ್ನು ಕುರಿತು ಕವಿಧಾರಿ ಸನ್ಯಾಸಿಗಳು ಸಮಾಜಕ್ಕೆ ಹೊರೆ ಎಂದು ಹಿಯಾಳಿಸುತ್ತ ಅವರಿಗೊಂದು ರೊಟ್ಟಿ ಕೊಡದೆ ಊಟ ಮಾಡಿದನು. ನಂತರ ರೈಲ್ವೆ ಮುಂದಿನ ಸ್ಟೇಷನ್ನಲ್ಲಿ ನಿಂತಾಗ ಒಬ್ಬ ಓಡೋಡಿ ಬಂದು ವಿವೇಕಾನಂದರಿಗೆ ಹಣ್ಣು ಸಿಹಿ ಪದಾರ್ಥಗಳು ಊಟ ಎಲ್ಲವನ್ನು ತಂದು ಕೊಟ್ಟನು. ಸ್ವಾಮೀಜಿ ತಾವು ಯಾರು ಅಂತ ಗೊತ್ತಿಲ್ಲ ಆದರೆ ನಿನ್ನೆ ನನ್ನ ಕನಸಿನಲ್ಲಿ ನನ್ನ ದೇವರು ಬಂದು ನಾಳೆ ರೈಲಿನಲ್ಲಿ ಬರುವ ಸಂತನಿಗೆ ಕೊಡು ಎಂದು ಹೇಳಿ ಮಾರೆಯಾದ.

ಆ ದೇವರು ಹೇಳಿದ ಸಂತ ನೀವೇ ಆಗಿರಿ ಇದನ್ನು ಸ್ವೀಕರಿಸಿ ನನ್ನನ್ನು ಆಶೀರ್ವದಿಸಿರಿ ಎಂದು ಬೇಡಿಕೊಂಡನು. ಇದನ್ನೆಲ್ಲ ಗೃಹಸ್ಥ ನೋಡಿ ಗಾಬರಿ ಹಾಗೂ ಆಶ್ಚರ್ಯಪಟ್ಟನು. ವಿವೇಕಾನಂದರು ಊಟ ಮಾಡುವಾಗ ಸ್ವಾಮೀಜಿಯವರು ಪ್ರೀತಿಯಿಂದ ಯಜಮಾನರೆ “ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ”. ನೀವು ಆಗ ಬರೆ ರೊಟ್ಟಿ ಪಲ್ಯಾ ತಿಂದಿರಿ ಇದೊ ತಗೊಳ್ಳಿ ಹಣ್ಣು ಮತ್ತು ಸಿಹಿ ತಿಂಡಿಗಳು ಎಂದಾಗ ಅವನ ಕಣ್ಣಲ್ಲಿ ನೀರು ತನ್ನಷ್ಟಕ್ಕೆ ತಾನೇ ಹರಿದು ಹೋದವು. ಇದರಿಂದ ನಾವು ತಿಳಿದುಕೊಳ್ಳಬುಹುದಾದ ವಿಚಾರವೆಂದರೆ ನಾವು ಯಾರೊಬ್ಬರನ್ನು ಹಿಯಾಳಿಸದೆ, ಇದ್ದುದರಲ್ಲಿ ಹಂಚಿ ತಿನ್ನಬೇಕು, ದೇವರನ್ನ ನಂಬಿದವರಿಗೆ ಹೇಗೇ ಎಲ್ಲಿಂದಲೋ ಸಹಾಯ ಒದಗುತ್ತದೆ ಮರೆಯದಿರೋಣ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply