ಅಕ್ಷರದಾತೆ ಅಕ್ಕರೆಯ ಮಾತೆ

0

ಡಾ. ಈಶ್ವರಾನಂದ ಸ್ವಾಮೀಜಿ

 

ಅಕ್ಷರದಾತೆ ಅಕ್ಕರೆಯ ಮಾತೆ
ಸಾವಿತ್ರಿಬಾಯಿ ಫುಲೆ

ಅನಾದಿಕಾಲದಿಂದಲೂ ಪುರುಷ ಪ್ರಧಾನವಿರುವ ಈ ಸಮಾಜದಲ್ಲಿ ಸ್ತ್ರೀಯನ್ನು ತನ್ನ ಭೋಗದ ವಸ್ತುವನ್ನಾಗಿ ಮಾಡಿಕೊಂಡು, ನಾಲ್ಕು ಗೋಡೆಗಳ ಮಧ್ಯೆ ಇಟ್ಟು ಸಂಸಾರದ ಭಾರವನ್ನು ಹೊರಸಿ ಅನೇಕ ಕಷ್ಟಗಳನ್ನು ಕೊಟ್ಟು ಶೂದ್ರಳಂತೆ ನೋಡಿಕೊಳ್ಳುತ್ತಿದ್ದರು. ಆಕೆಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ಭಾಗವಹಿಸಲು ಅನುಮತಿಸುತ್ತಿರಲಿಲ್ಲ. “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ”ವೆಂಬ ಸ್ಮøತಿಕಾರರ ಮಾತು ನೂರಕ್ಕೆ ನೂರರಷ್ಟು ಪ್ರಚಾರಕಾಲ ಅದಾಗಿತ್ತು. ಸ್ಮøತಿಕಾರರು ಹೇಳಿದ ಅರ್ಥ ಒಂದಾಗಿದ್ದರೆ, ಪುರುಷರು ತಿಳಿದದ್ದೆ ಬೇರೆಯೇ ಆಗಿದೆ. ಸ್ಮøತಿಕಾರನಾದ ಮನು ಹೆಣ್ಣು ಬಾಲ್ಯದಲ್ಲಿ ತಂದೆ/ತಾಯಿಗಳ ಆಶ್ರಯದಲ್ಲಿ ಬೆಳೆಯುತ್ತಾಳೆ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ ಜೀವಿಸುತ್ತಾಳೆ. ವೃದ್ಧಾಪ್ಯದಲ್ಲಿ ಮಕ್ಕಳಾಶ್ರಯದಲ್ಲಿ ಬದುಕುತ್ತಾಳೆ. ಆದ್ದರಿಂದ ಇವಳು ಸ್ವತಂತ್ರ್ಯವಾಗಿ ಬದುಕಲು ಅರ್ಹತೆ ಹೊಂದಿಲ್ಲ. ಇಡೀ ಜೀವನವೆಲ್ಲ ಇನ್ನೊಬ್ಬರ ಆಶ್ರಯದಲ್ಲಿ ಕಳೆಯುತ್ತಾಳೆ ಎಂಬ ಅರ್ಥವನ್ನು “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ವೆಂಬ ವಾಕ್ಯದ ಅಭಿಪ್ರಾಯವಾಗಿದೆ. ಆದರೆ ಪುರುಷ ಪ್ರಧಾನವಾದ ಸಮಾಜವಾದುದರಿಂದ ತಮಗೆ ತಿಳಿದಂತೆ ಅರ್ಥವನ್ನು ಮಾಡಿಕೊಂಡು ಆಕೆಯನ್ನು ಸೇವಕಿಯಂತೆ ನಡೆಸಿಕೊಳ್ಳುತ್ತಾರೆ. ಸಮಾಜದ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಅವಳಿಗೆ ಭಾಗವಹಿಸಗೊಡದೆ ಅಯೋಗ್ಯಳು ಸ್ವತಂತ್ರ್ಯಹೀನಳು ಎನ್ನುತಿದ್ದರು.

ವೇದೋಪನಿಷತ್ತು ಕಾಲದಲ್ಲಿ ಸ್ತ್ರೀಗೆ ಅಲ್ಪಸ್ವಲ್ಪ ಸ್ವಾತಂತ್ರ್ಯ ದೊರೆತಿದ್ದನ್ನು ಕಾಣುತ್ತೇವೆ. ಉಪನಿಷತ್ತಿನ ಕಾಲದಲ್ಲಿ ಗಾರ್ಗಿ, ಮೈತ್ರೆಯಿ ಮೊದಲಾದ ಸ್ತ್ರೀ ರತ್ನಗಳು ಆತ್ಮಜ್ಞಾನವನ್ನು ಪಡೆದುದ್ದನ್ನು ಕಾಣುತ್ತೇವೆ. ನಂತರ 11/12 ನೆಯ ಶತಮಾನದಲ್ಲಿ ಶರಣ ಸಂಪ್ರದಾಯದಲ್ಲಿ ಸ್ತ್ರೀಯು ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಹಿಂದಿನ ಶತಮಾನಗಳಿಗಿಂತಲೂ ಈ ಶತಮಾನದಲ್ಲಿ ಎಲ್ಲರಿಂದ ಗೌರವಕ್ಕೆ ಪಾತ್ರಳಾಗಿರುವುದನ್ನು ಕಾಣುತ್ತೇವೆ. “ಯತ್ರ ನಾರ್ಯಸ್ತು ಪೂಜ್ಯತೇ ತತ್ರ ರಮಂತೆ ದೇವತಾ” (ಎಲ್ಲಿ ಸ್ತ್ರೀಯರಿಗೆ ಗೌರವಿಸುತ್ತಾರೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ) ಸ್ಮøತಿಕಾರರ ವಾಣಿಯಂತೆ ಶರಣರು ಮೊಟ್ಟ ಮೊದಲಿಗೆ ಸ್ತ್ರೀಗೆ ಸ್ವಾತಂತ್ರ್ಯ ನೀಡಿ ಗೌರವಿಸಿದ್ದು ಗಮನಾರ್ಹವಾಗಿದೆ. ಶರಣರು, ಸಂತರು, ದಾಸರು, ಋಷಿಗಳು, ಮಹಾತ್ಮರು ಅವತಾರ ಪುರುಷರು “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎಂಬ ವಾಕ್ಯವನ್ನು ಅಜ್ಞಾನದಿಂದ ಕೂಡಿದ ಸಮಾಜದಿಂದ ಅಳಿಸಿ ಹಾಕಿದರು. ಅಲ್ಲದೆ ಸ್ತ್ರೀಗೂ ಪುರುಷನಷ್ಟೆ ಸಮಾನವಾದ ಅರ್ಹತೆಯನ್ನು ಒದಿಗಿಸಿಕೊಟ್ಟರು. ವೇದೋಪನಿಷತ್ತುಗಳನ್ನು ಓದುವ, ತಿಳುದುಕೊಳ್ಳುವ ಅರ್ಹತೆಯನ್ನು ಋಷಿಗಳ ಕಾಲದಲ್ಲಿಯೇ ಕಾಣುವಂತೆ ಶರಣರು ಅದೇ ಸೂತ್ರವನ್ನೇ ಅನುಸರಿಸಿಕೊಂಡು ಸ್ತ್ರೀಗೆ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ, ರಾಜಕೀಯ, ಶೈಕ್ಷಣಿಕ ಮೊದಲಾದ ಸ್ಥಾನಗಳಲ್ಲಿ ಸ್ವಾತಂತ್ರತೆಯನ್ನು ಕೊಟ್ಟರು.

ಆನಂತರ ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಸಂಚಿಯ ಹೊನ್ನಮ್ಮಳು, ಒಬ್ಬ ಮಹಿಳಾ ಕವಿತ್ರಿ. ಇವಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬಾಳಿಬೆಳಗಿದ ಅಪರೂಪದ ವ್ಯಕ್ತಿತ್ವ ಹಾಗೂ ಹೆಂಗಳೆಯರಿಗೆ ಮಾರ್ಗದರ್ಶಕಳಾಗಿದ್ದಳು. ಇವಳು ತನ್ನದೇ ಆದ ದಾಟಿಯಲ್ಲಿ ಹೆಣ್ಣಮಕ್ಕಳ ಗೌರವ ಹೆಚ್ಚಿಸಲು ಹಾಗೂ ಗಂಡಸರನ್ನು ಉದ್ದೇಶಿಸಿ –
ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು
ಅಂದರೆ ನಮ್ಮನ್ನೆಲ್ಲ ಹಡೆದ ತಾಯಿ ಹೆಣ್ಣೆಲ್ಲವೆ? ನಮ್ಮನ್ನು ಸಾಕಿದವಳು ಹೆಣ್ಣೆಲ್ಲವೆ? ಕಣ್ಣು ಕಾಣದ ಮೂರ್ಖರು ಹೆಣ್ಣು ಹೆಣ್ಣು ಎಂದು ಹೀನವಾಗಿ ಏಕೆ ಕಾಣುವರೋ ತಿಳಿಯದು ಎಂದಿದ್ದಾರೆ. ಇಂಥವರ ಸಾಲಿನಲ್ಲಿ ಸಾವಿತ್ರಿಬಾಯಿ ಫುಲೆ ಸೇರುತ್ತಾಳೆ. ಇಂದು ಈ ದೇಶದ ಪ್ರತಿ ಹೆಣ್ಣು ಮಕ್ಕಳು ಸ್ಮರಿಸಬೇಕಾದ ಹೆಸರು ಮಾಹಾಮಾಣಿಕ್ಯ ಸಾವಿತ್ರಿಬಾಯಿ ಫುಲೆ. ಏಕೆಂದರೆ, ಸುಮಾರು ಒಂದು ನೂರಾ ಐವತ್ತು ವರ್ಷಗಳ ಹಿಂದೆ ಪೂನಾ ನಗರದಲ್ಲಿ ಮೊದಲ ಮಹಿಳಾ (ಕನ್ಯಾ) ಶಾಲೆಯನ್ನು ಸ್ಥಾಪಿಸಿ, ಈ ದೇಶದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದಳು.

ಅಕ್ಷರ ಕಲಿಸಲು ಹೋಗುವಾಗ ದುಷ್ಟ ಬ್ರಾಹ್ಮಣವಾದಿಗಳು ಇವರ ಮೇಲೆ ಸೆಗಣಿ, ಕೊಳಚೆ ಮತ್ತು ಕಲ್ಲುಗಳನ್ನು ಎಸೆಯುತ್ತಿದ್ದರು. ಕಾರಣ ಏನೆಂದರೆ ಹೆಣ್ಣು ಮಕ್ಕಳು ಅಕ್ಷರ ಕಲಿಯುವುದು ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಬ್ರಹ್ಮಣವಾದಿಗಳದ್ದಾಗಿತ್ತು. ಹೀಗಾಗಿ ಸಾವಿತ್ರಿಬಾಯಿ ಫುಲೆಯವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆದರೂ ಸಹ ಈ ಮಹಾಮಾತೆ ಕಣ್ಣೀರು ಹಾಕುತ್ತ ಹೋಗಿ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದಳು. ಪ್ರತಿದಿನ ಆಕೆಯ ಮೇಲೆ ಸೆಗಣಿ ಎಸೆಯುವುದು, ಕಲ್ಲಿನಿಂದ ಹೊಡೆಯುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿತ್ತು ಇಷ್ಟೆಲ್ಲಾ ಕಷ್ಟಗಳಿದ್ದರೂ ಸಹ ಈಕೆ ಮಾತ್ರ ತನ್ನ ಛಲ ಬಿಡಲಿಲ್ಲ. ಮರುದಿನ ಮತ್ತೆ ಶಾಲೆಗೆ ಹೋಗಲು ಸಿದ್ಧರಾಗಿರುತ್ತಿದ್ದಳು.

ಕ್ರಮೇಣ ಈ ಮಾತೆಯ ಕೈಯಲ್ಲಿ ಒಂದು ಚೀಲ ಬಂತು. ಆ ಚೀಲದಲ್ಲಿ ಒಂದು ಹೆಚ್ಚುವರಿಯಾಗಿ ಸೀರೆ ಇರುತ್ತಿತ್ತು. ಎಂದಿನಂತೆ ಬ್ರಾಹ್ಮಣವಾದಿಗಳು ಅವಾಚ್ಯ ಬೈಗುಳಗಳ ಜೊತೆಗೆ ಸೆಗೆಣಿ ಎಸೆಯತ್ತಿದ್ದರು. ಈ ಎಲ್ಲ ಅವಮಾನ, ಅಪಮಾನ ಸಹಿಸಿಕೊಂಡು ಶಾಲೆಗೆ ಬಂದ ನಂತರ ಸೀರೆಯನ್ನು ಬದಲಾಯಿಸಿಕೊಂಡು ಫಾತೀಮಾ ಶೇಖ್ ಜೊತೆಗೂಡಿ ಹೆಣ್ಣು ಮಕ್ಕಳಿಗೆ ವಿದ್ಯೆ ನೀಡುತ್ತಿದ್ದಳು. ಈ ಸ್ಥಿತಿ ಹೀಗೆ ಅನೇಕ ದಿನಗಳ ಕಾಲ ಮುಂದುವರೆಯಿತು. ಕೊನೆಯಲ್ಲಿ ಬ್ರಾಹ್ಮಣವಾದಿಗಳೇ ಬೇಸರಿಸಿ ಸೆಗಣಿ ಎಸೆಯುವುದು ಮತ್ತು ಬೈಯುವುದ್ದನ್ನು ಬಿಟ್ಟರು. ಸಾವಿತ್ರಿಬಾಯಿ ಫುಲೆ ಮಾತ್ರ ತನ್ನ ಗುರಿಯನ್ನು ಸಾಧಿಸಿಯೇ ತೀರುತ್ತಾಳೆ.

ಇದು ಸಾವಿತ್ರಿಬಾಯಿಯ ತಾಕತ್ತು,, ಇದು ಶಿಕ್ಷಣದ ತಾಕತ್ತು, ಈ ತಾಕತ್ತು ಎಂಥದ್ದು ಎಂದರೆ, ಅನೇಕ ಅವಮಾನ ಮತ್ತು ಅಪಮಾನಗಳಿಗಿಂತ ಉತ್ಕøಷ್ಟವಾದದ್ದು. ಸಾವಿತ್ರಿಬಾಯಿ ಫುಲೆ ಇತಿಹಾಸ ಕಂಡ ಮಾಹಮಾಣಿಕ್ಯ. ಈ ಮಾತೆಯ ಮೇಲೆ ಸೆಗಣಿ ಎಸೆದವರು, ಸ್ವತಃ ತಾವೇ ಇತಿಹಾಸದಲ್ಲಿ ಕಸದ ಬುಟ್ಟಿಗೆ ಸೇರಿದ್ದಾರೆ. ಹೆಣ್ಣೊಂದು ಕಲಿತೆ ಶಾಲೆ ತೆರೆದಂತೆ ಎಂಬ ನಾಣ್ನುಡಿಯು ಸಹ ನಾವು ಕಾಣುತ್ತೇವೆ. ಇಂದು ಅಕ್ಕರದಾತೆ ಅಕ್ಕರೆಯ ಮಾತೆ ಸಾವಿತ್ರಿಬಾಯಿ ಫುಲೆ ನಮ್ಮ ಮನೆ ಮನಗಳಲ್ಲಿ ಮಾಸದಂತೆ ಉಳಿದಿದ್ದಾಳೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply