ಗುರುವಿನ ಮಹಿಮೆ

0

ಡಾ. ಈಶ್ವರಾನಂದ ಸ್ವಾಮೀಜಿ

 

“ಗು” ಎಂದರೆ ಅಂಧಕಾರ, “ರು” ಎಂದರೆ ದೂರಿಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವನೇ “ಗುರು” ಎಂಬ ಅರ್ಥವಾಗುತ್ತದೆ. ಸಂಸ್ಕøತದಲ್ಲಿ “ಗುರು” ಪದಕ್ಕೆ “ಭಾರ” ಎನ್ನುವ ಅರ್ಥವೂ ಇದೆ. ಅಂದರೆ ಯಾರು ಜ್ಞಾನದಿಂದ ಭಾರವಾಗಿರುವರೋ ಅವನೇ ಗುರು ಎಂದು ಅರ್ಥೈಸಿಕೊಳ್ಳಬಹುದು. ಇಂತಹ ಜ್ಞಾನದ ಗಣಿಯಾಗಿರುವ ಗುರುವಿನ ಮಹಿಮೆಯನ್ನು ಅರಿಯಲು ಹಾಗೂ ಹೇಳಲು ಸಾಧ್ಯವಿಲ್ಲ, ಎನ್ನುವರು ಅನೇಕ ಮಹಾತ್ಮರು, ಶಿವಶರಣರು, ಅನುಭಾವಿಗಳು. ಗುರುವಿನ ಮಹಿಮೆಯನ್ನು ಹೇಳಲು ಅಥವಾ ಬರೆಯಲು ಪ್ರಾರಂಭಿಸಿದರೆ ಅದು ಮುಗಿಯುದಿಲ್ಲ ಎಂಬುವುದನ್ನು ಸಂತ ಕಬೀರ ದಾಸರು ತಮ್ಮ ದೋಹೆ ಒಂದರಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.-

ಸಬ ಧರತೀ ಕಾಗಜ ಕರು, ಲೇಖನೀ ಸಬ ಬನರಾಯ |
ಸಾತ ಸಮುಂದರ ಕೀ ಮಸಿ ಕರು, ಗುರು ಗುಣ ಲಿಖಾ ನ ಜಾಯ ||
ಗುರು ಮಹಿಮೆ ಅಪಾರ. ಅವನ ಮಹಿಮೆ ಅಥವಾ ಅವನ ಶಕ್ತಿಯನ್ನು ಕುರಿತು ಬರೆಯಲು ಪ್ರಾರಂಭಿಸಿದರೆ ವಾಕ್ಯ, ಪದಗಳು ಸಾಕಾಗುವುದಿಲ್ಲ. ಎನ್ನುವುದನ್ನು ಈ ಭೂಮಿಯನ್ನೆಲ್ಲ ಕಾಗದವನ್ನಾಗಿ ಮಾಡಿ, ಇಲ್ಲಿರುವ ಮರಗಿಡಗಳನ್ನು ಲೇಖನಿಯಾನ್ನಾಗಿಸಿ, ಇಲ್ಲಿರುವ ಸಪ್ತ ಸಾಗರದ ಜಲವನ್ನು ಮಸಿಯನ್ನಾಗಿ ಉಪಯೋಗಿಸಿದರೂ ಇನ್ನೂ ಗುರು ಮಹಿಮೆ ಬರೆಯದೇ ಉಳಿಯುವುದು ಎಂದಿದ್ದಾರೆ.

ಗುರು ನಮಗೆ ಜೀವನದಲ್ಲಿ ಸರಿಯಾದ ದಾರಿ ತೋರಿಸುವವನಾಗಿದ್ದಾನೆ. ನಮ್ಮನ್ನು ಕೈಹಿಡಿದು ನಡೆಸುತ್ತ ಜೀವನದ ಅರಿವು ಹಾಗೂ ನಮ್ಮಲ್ಲಿ ಅಡಗಿರುವ ಆತ್ಮ ಶಕ್ತಿಯನ್ನು ಜಾಗೃತಗೊಳಿಸುವನು. ಬೆಳಕಿನ ದಾರಿಯಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಗುರಿ ಮುಟ್ಟಲು ಸಹಾಯ ಮಾಡುವನು. ಗುರು ಹುಡುಕಿದರೆ ಸಿಗುವವನಲ್ಲ. ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗಿ ನಮ್ಮ ಬಳಿಗೆ ಬರುವನು. ನಾವು ಗುರುವಿನ ಮೂಲಕ ಜೀವನದ ಅರಿವನ್ನು ಮಾಡಿಕೊಳ್ಳಬೇಕಾದರೆ ಅನುದಿನ, ಅನುಕ್ಷಣ ಗುರುವನ್ನು ಅಂತರಂಗದಲ್ಲಿ ಧ್ಯಾನಿಸುತ್ತ, ಪೂಜಿಸುತ್ತ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ನನ್ನದೇನು ಈ ಜಗದಲ್ಲಿ ಏನೂ ಇಲ್ಲ ಎಂಬ ಭಾವವನ್ನು ಮನದಲ್ಲಿ ಜಾಗೃತವಾಗಿಸಿಕೊಂಡು ಗುರುವಿನಲ್ಲಿ ಶರಣಾದಾಗ ಮಾತ್ರ ನಾವು ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುವುದು.

ಗುರು ಮತ್ತು ಗುರಿ ಇವು ಮಾನವ ಜೀವನದ ಮಹತ್ವದ ಅಂಶಗಳಾಗಿವೆ. ಮಾನವನು ತನ್ನ ಗುರಿಯನ್ನು ಸಾಧಿಸಲು ಗುರುವಿನ ಆಶೀರ್ವಾದ ಹಾಗೂ ಅನುಗ್ರಹ ಅತ್ಯಂತ ಅವಶ್ಯಕವಾಗಿದೆ. ಅಂದು, ಇಂದು ಮತ್ತು ನಾಳೆಯೂ ಸಹ ಈ ಪಾತ್ರ ಅತ್ಯಂತ ಆದರ್ಶಪ್ರಾಯಗಳಾಗಿವೆ. ಇವುಗಳಿಲ್ಲದೆ ಮಾನವನು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಭಾರತೀಯ ಸಂಪ್ರದಾಯ, ಸಂಸ್ಕøತಿಗಳು ಗುರುವಿನ ಶಕ್ತಿ, ಮಹಿಮೆ, ಮಾರ್ಗದರ್ಶನದ ಬಗ್ಗೆ ತಿಳಿಸಿವೆ. ಆದುದರಿಂದ ಗುರುವಿಗೆ ಭಾರತೀಯ ಸಂಸ್ಕøತಿ ಹಾಗೂ ಸಂಪ್ರದಾಯವು ಉನ್ನತವಾದ ಸ್ಥಾನವನ್ನು ಕೊಟ್ಟು ಗೌರವಿಸಿದೆ. ಗುರುವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರಿಗೂ ತಿಳಿದ ವಿಷಯವಾಗಿದೆ. “ಹಿಂದೆ ಗುರು ಇರಬೇಕು ಮುಂದೆ ಜೀವನದ ಗುರಿಯಿರಬೇಕು” ಎನ್ನುವುದನ್ನು ಅರಿತ ಸಂಪ್ರದಾಯವು. ಇಂತಹ ಗುರು-ಶಿಷ್ಯರನ್ನು ಇತಿಹಾಸದ ಪುಟಗಳಲ್ಲಿ ಚರಿತ್ರ ನಾಯಕರಾಗಿ ಉಳಿದಿದ್ದಾರೆ. ಇದಕ್ಕೆ ಗುರುಗಳು ಅಂತಃಕರಣದ ಮೂಲಕ ಶಿಷ್ಯನಿಗೆ ಮಾಡಿದ ಆಶೀರ್ವಾದವೇ ಕಾರಣವಾಗಿದೆ.

ನಮ್ಮ ವೇದ, ಉಪನಿಷತ್ತು, ಪುರಾಣಗಳು, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವ ಸ್ಥಾನವಿದೆ. ಧರ್ಮ, ಆಚಾರ-ವಿಚಾರ, ನೀತಿತತ್ತ್ವ ಮೊದಲಾದವುಗಳನ್ನು ಗುರುಗಳು ಉಪದೇಶಿಸುವರು. ಆದುದರಿಂದ ಅವರಿಗೆ ಪ್ರಥಮ ಸ್ಥಾನವಿದೆ. ಏಕೆಂದರೆ ಉತ್ತಮ ಕಾರ್ಯವನ್ನು ಪ್ರಾರಂಭಿಸಲು ಅಥವಾ ಮಂಗಲಾಚರಣೆಗೆ ಗುರುವಿನ ಸ್ಮರಣೆ, ಧ್ಯಾನ, ಸ್ತುತಿಯನ್ನು ಮಾಡುವುದು ನಮ್ಮ ಧಾರ್ಮಿಕ ಪರಂಪರೆಯಾಗಿದೆ. ಹೀಗೆ ಅನೇಕ ಸಂತರು, ಮಹತ್ಮರು, ಶರಣರು ಗುರುವಿನ ಬಗ್ಗೆ, ಅವನ ಮಹಿಮೆ, ಶಕ್ತಿಯ ಬಗ್ಗೆ ಸ್ಮರಿಸಿರುವುದನ್ನು ಕಾಣಬಹುದು.

ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು.
ಮಾಯಾ ಪ್ರಪಂಚ ಬಿಟ್ಟಿತ್ತು.
ಮುಂದಣ ಹುಟ್ಟರತು ಹೋಯಿತ್ತು.
ನೆಟ್ಟಗೆ ಗುರು ಪಾದವ ಮುಟ್ಟು ಭವಗೆಟ್ಟೆನು ಕಾಣಾ ರಾಮನಾಥ.
ದಾಸಿಮಯ್ಯನವರು ಜೀವಿಯ ಪರಮ ಗುರಿಯನ್ನು ಈ ವಚನದಲ್ಲಿ ವ್ಯಕ್ತಪಡಿಸುವುದರ ಜೊತೆಗೆ ಆತ್ಮ ಸಾಕ್ಷಾತ್ಕಾರದ ಮಾರ್ಗ ತೋರಿದ್ದಾರೆ. ಅದಕ್ಕಾಗಿ ಮಾನವ ಎಲ್ಲೆಲ್ಲಿಯೂ ಸುತ್ತಾಡದೆ ಗುರುವಿಗೆ ಶರಣಾಗಿ, ಗುರುವಿನಿಂದ ಎಲ್ಲವೂ ಸಾಧ್ಯವೆಂದಿದ್ದಾರೆ. ಆದುದರಿಂದ ಗುರುವನ್ನು ಪಡೆದು, ಅವರ ಮಾರ್ಗದರ್ಶದಲ್ಲಿ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳೊಣ ಬನ್ನಿ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply