ಎಲ್ಲೋ ಹುಡುಕಿದೆ ಇಲ್ಲದ ದೇವರ

0

ಡಾ. ಈಶ್ವರಾನಂದ ಸ್ವಾಮೀಜಿ

 

ದೇವರು ಮಾತಿಗೆ ನಿಲುಕದ, ಸಾಧಿಸಲು ಸಾಧ್ಯವಾಗದ, ನಿರಾಕಾರನೂ, ಸಗುಣನಲ್ಲದ ನಿರ್ಗುಣನಾಗಿರುವ ಈಶ್ವರನನ್ನು ಅರಿಯಲು ಸಾಧ್ಯವಿಲ್ಲವೆಂಬುದು ದಾಸಿಮಯ್ಯನವರ ಈ ಮುಂದಿನ ವಚನದಲ್ಲಿ ಕಾಣಬಹುದು.
ಆಡಬಾರದ ಬಯಲು ಸುಡಬಾರದ ಬಯಲು
ನುಡಿಯಬಾರದ ಬಯಲು ಹಿಡಿಯಬಾರದ ಬಯಲು
ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ
ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.

ಈಶ್ವರನು ನಿರಾಕಾರ, ನಿರ್ಗುಣ, ಅಚಿಂತ್ಯ, ಅವಿನಾಶಿ, ನಾಮರೂಪರರಹಿತನಾಗಿದ್ದಾನೆ. ಹೀಗಿದ್ದೂ ಎಲ್ಲದರಲ್ಲೂ ತುಂಬಿಕೊಂಡಿದ್ದಾನೆ. ಅವನನ್ನು ಜ್ಞಾನನೇತ್ರದಿಂದ ನೋಡಬೇಕು. ಅವನು ಸುಳಿದಾಡುವುದಿಲ್ಲ. ಮಾತಿಗೆ ಸಿಲುಕುವುದಿಲ್ಲ. ಕಣ್ಣಿಗೆ ಕಾಣುವುದಿಲ್ಲ. ಕೈಗೆ ಸಿಗುವುದಿಲ್ಲ. ಮನಕ್ಕೆ ಅತೀತನಾಗಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಮಾನವನ ಇಂದ್ರಿಯಗಳಿಗೆ ಅವನು ಅಗೋಚರನಾಗಿದ್ದಾನೆ. ಅವನು ಬಯಲಾಗಿದ್ದು ಬಯಲೊಳಗೆ ಅಡಗಿದ ಭೇದವ ಬಲ್ಲವರಾರು? ಎಂದು ಪ್ರಶ್ನಿಸುವುದರಮೂಲಕ ಈಶ್ವರನ ಸ್ವರೂಪವನ್ನು ವ್ಯಕ್ತಪಡಿಸಿದ್ದಾರೆ.

ಬಯಲು ಬಣ್ಣವ ಮಾಡಿ
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ ರಾಮನಾಥ.
ನಿರ್ವಿಕಾರ, ನಿರ್ಮಲನಾಗಿರುವ ಈಶ್ವರನು ಮಾನವನ ಶಕ್ತಿಯ ವರ್ಣನೆಗೆ ಸಿಲುಕುವವನಲ್ಲ. ಈಶ್ವರನು ಅಣುರೇಣುತೃಣಕಾಷ್ಠದಲ್ಲಿ ತುಂಬಿಕೊಂಡಿದ್ದರೂ ಅವನ ಇರುವಿಕೆಯನ್ನು ಕಾಣದಂತಿರುವುದು ನಿಜವಾದ ಸಂಗತಿ. ಆದರೆ ದಾಸಿಮಯ್ಯನವರ ಕಾಡುವ ದೇವರಲ್ಲ ಮೇಲಾಗಿ ಆಸಕ್ತರಿಗೆ ನಿರಾಕಾರದಲ್ಲಿಯೇ ಕಾಣುವ ಹಾಗೂ ಕಾಣಿಸುವ ದೇವರು. ಅವ್ಯಕ್ತ ಮತ್ತು ಅಭಿವ್ಯಕ್ತ. ಸಾಕಾರ-ನಿರಾಕಾರ, ಸಗುಣ-ನಿರ್ಗುಣ ದೇವರು.

ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ.
ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ
ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.
ಇಂತಹ ನಿರ್ಗುಣ, ನಿರಾಕಾರ, ಸರ್ವಜ್ಞನಾದ ಈಶ್ವರನನ್ನು ಅಜ್ಞಾನಿಗಳು ಅರಿಯರು. ಇದನ್ನು ಅರಿತ ದಾಸಿಮಯ್ಯನವರು ಮಾಂಸದಲ್ಲಿ ಅಡಗಿದ ಹಾಲಿನಂತೆ, ಹಾಲಿನೊಳಗಿರುವ ತುಪ್ಪದಂತೆ, ಎಂದು ಉದಹರಿಸಿದ್ದಾರೆ. ಇಂತಹ ಪರಮಾತ್ಮನು ನಮಗೆ ಗೊಚರಿಸಬೇಕಾದರೆ ನಮ್ಮಲ್ಲಿರುವ ಅಜ್ಞಾನದ ಕಸವಾದ ಮೋಸ ವಂಚನೆಗಳನ್ನು ಹೊರಹಾಕಿ ಸ್ವಚ್ಛವಾದ ಮನಸಿಗೆ, ಭಾವಕ್ಕೆ ಹತ್ತಿರವಿದ್ದು, ಕರೆದಾಗ ಓ ಎನ್ನವ ಭಗವಂತ ಎಂದು ಅನುಭಾವಿಗಳು ತಿಳಿಸಿದ್ದಾರೆ.
ಶ್ರೀ ಕೃಷ್ಣನಿಗೆ ರಾಧೆಯನ್ನು ಕಂಡರೆ ಅಪಾರ ಪ್ರೀತಿ. ಇದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ರಾಧೆಗೂ ಶ್ರೀ ಕೃಷ್ಣ ಕಂಡರೆ ಅಷ್ಟೇ ಪ್ರೀತಿಯಿದ್ದರೂ, ಅವನ ಕೈಯಲ್ಲಿರೋ ಕೊಳಲನ್ನು ನೋಡಿ ಆ ಕೊಳಲಿಗಿರುವ ಭಾಗ್ಯ ತನಗಿಲ್ಲ ಎಂದು ಕೊರಗುತಿದ್ದಳು. ಕಾರಣ ಕೃಷ್ಣ ಎಚ್ಚರವಿರುವಾಗ ಕೊಳಲು ಅವನ ಕೈಯಲ್ಲಿದ್ದರೆ ಮಲಗಿರುವಾಗ ಅವನ ಸೊಂಟದಲ್ಲಿ ರಾರಾಜಿಸುತ್ತಿರುತ್ತಿತ್ತು.

ಹೀಗೆ ಶ್ರೀಕೃಷ್ಣ ಮತ್ತು ಕೊಳಲಿನ ಅವಿನಾಭಾವ ಅಂಬಂಧವನ್ನು ನೋಡಿ ರಾಧೆ ತನ್ಗಿಂತ ಹೆಚ್ಚು ಪುಣ್ಯವಂತನಾದ ಕೊಳಲನ್ನು ಇದರ ಬಗ್ಗೆ ಕೇಳಬೇಕು ಎಂದು ಕಾತುರದಿಂದ ಕಾಯುತ್ತಿದ್ದಳು. ಆದರೆ ಆ ಮಾಧವನ ಕೈಯಿಂದ ಕೆಳಗಿಳಿದರೆ ತಾನೇ? ಕೇಳುವ ಅವಕಾಶ? ಅವಕಾಶವೇ ಸಿಗುತ್ತಿಲ್ಲ.
ರಾಧೆಯ ಅಭಿಲಾಷಯನ್ನು ಅರಿತ ಮಾಧವನು ಒಮ್ಮೆ ಕೊಳಲನ್ನು ಪಕ್ಕಕ್ಕಿಟ್ಟು ನಿದ್ರೆ ಬಂದವನಂತೆ ಮಲಗಿದ. ಇದೆ ಒಳ್ಳೆಯ ಸಮಯವೆಂದು ಕಾಯುತ್ತಿದ್ದ ರಾಧೆ ಕೊಳಲನ್ನು ಕೈಗೆತ್ತಿಕೊಂಡು “ಕೊಳಲೇ ನೀನೆಷ್ಟು ಭಾಗ್ಯವಂತ? ಮಾಧವನು ನಿನ್ನನ್ನು ಬಿಟ್ಟು ಒಂದು ಘಳಿಗೆಯೂ ಅಗಲಿರಲಾರ ಆದರೆ ನಿನ್ನ ಭಾಗ್ಯ ನನಗಿಲ್ಲ” ಎಂದು ಕೊರಗುತ್ತ ಕೇಳಿದಳು. ಆಗ ಕೊಳಲು “ಮಹಾತಾಯಿ ಏನಿದು ನಿನ್ನ ಕೊರಗು? ನೀನೇ ನೋಡು ನನ್ನಲ್ಲಿ ಏನಿದೆ? ನಾನೊಂದು ಬಿದರಿನ ಕೋಲು ಮಾತ್ರ. ಆ ಕೋಲೊನಲ್ಲಿ ಹತ್ತಾರು ರಂದ್ರಗಳಿವೆ. ನನ್ನ ದೇಹವೆಲ್ಲ ಖಾಲಿಖಾಲಿ. ಮಾಧವನು ನನ್ನನ್ನು ಕೈಗೆತ್ತಿಕೊಂಡು ನುಡಿಸುವಾಗ ಅವನ ಉಸಿರು ನನ್ನಲ್ಲಿ ಬೆರೆತು ಅವನ ಉಸಿರಲ್ಲಿ ಉಸಿರಾಗುವೆ. ಅವನ ಉಸಿರು ಬೆರೆತ ನನ್ನ ದೇಹ ಅದ್ಭುತ ರಾಗವನ್ನು ಹೊರಸೂಸುತ್ತದೆ. ಇದೆಲ್ಲವೂ ಅವನ ಕೃಪೆಯೇ ಹೊರತು ನನ್ನದೇನಿದೆ? ಆ ಮುರಳೀಧರನು ಎಲ್ಲರ ಸಮೀಪದಲ್ಲಿಯೇ ಇದ್ದಾನೆ. ಆದರೆ ಯಾರ ಹೃದಯದಲ್ಲಿ ಸೇಡು, ಕಪಟ, ಸಿಟ್ಟು ಇರುತ್ತದೆಯೋ ಅವರ ಹೃದಯದಲ್ಲಿ ಅವನು ನೆಲೆಸಲಾರ” ಎಂದಿತು.

ಆ ಕೊಳಲಿನಂತೆ ನಾವು ನಮ್ಮ ಹೃದಯವನ್ನು ಖಾಲಿಖಾಲಿಯಾಗಿಸಿ ಭಗವಂತನಿಗೆ ಅರ್ಪಿಸಿತ್ತೇವೋ ಅಂದೇ ನಮ್ಮ ಜೀವನ ಸಾರ್ಥಕವಾಗುತ್ತದೆ. ಇದನ್ನೇ “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಸ್ನೇಹಗಳ ನಮ್ಮೊಳಗೆ ……..” ಎಂಬ ಹಾಡಿನ ಮೂಲಕ ನೆನೆಯೊಣ, ಸ್ಮರಿಸೋಣ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply