ಲೇಖನ ಡಾ. ಈಶ್ವರಾನಂದ ಸ್ವಾಮೀಜಿ
ಕಣ್ಣು ಮೀಸಲು ಶಿವನ, ಕೈ ಮೀಸಲು ಶಿವನ,
ಕಾಲು ಮೀಸಲು ಶಿವನ, ನಾಲಿಗೆ ಮೀಸಲು ಶಿವನ,
ಕಿವಿ ಮೀಸಲು ಶಿವನ, ನಾಸಿಕ ಮೀಸಲು ಶಿವನ,
ತನು ಮನವೆಲ್ಲ ಮೀಸಲು ಶಿವನ,
ಈ ಮೀಸಲ ಬೀಸರವೊಗದಂತಿದ್ದರೆ
ಆತನೇ ಜಗದೀಶ ಕಾಣಾ ರಾಮನಾಥ.
ಶುಭ ಎನ್ನುವುದಕ್ಕೆ ಮಂಗಲ, ಕಲ್ಯಾಣ, ಪುಣ್ಯ, ಶಿವ ಎಂದು ಮೊದಲಾದ ಅರ್ಥಗಳನ್ನು ಹೇಳಬಹುದು. ಕಣ್ಣಿನಿಂದ ಶುಭವಾದುದನ್ನು ನೋಡಬೇಕು. ಕೈಗಳಿಂದ ಶುಭವಾದುದನ್ನು ಮಾಡಬೇಕು. ಶುಭವಾದುದರ ಕಡೆಗೆ ಕಾಲುಗಳು ಚಲಿಸುತ್ತಿರಬೇಕು. ಕಿವಿಯಿಂದ ಶುಭವಾದುದನ್ನೇ ಕೇಳಬೇಕೆಂದು ಮೊದಲಾಗಿ ಹೇಳುತ್ತ ಇಡೀ ಶರೀರ ಮತ್ತು ಮನಸ್ಸುಗಳಿಂದ ಶುಭವಾದುದನ್ನೇ ಮಾಡಬೇಕು. ಶುಭವಾದುದನ್ನೇ ಬಯಸಬೇಕು. ಶುಭಕಾರ್ಯಕ್ಕೆ ಮೀಸಲಾಗಿಡಬೇಕೆನ್ನುವರು ದೇವರ ದಾಸಿಮಯ್ಯನವರು.
ಪುಣ್ಯಾತ್ಮರಿರ್ವರು ಸ್ವರ್ಗಲೋಕದಲ್ಲಿ ವಿಹರಿಸುತ್ತ ಅಲ್ಲಿನ ಕೆಲವು ಸನ್ನಿವೇಶಗಳ ಬಗೆ ಚಿಂತನೆಗೈಯುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅವರಿಗೆ ಕೆಲವು ಆಶ್ಚರ್ಯದ ವಸ್ತುಗಳು ಕಂಡುಬಂದವು. ಶರೀರರಹಿತವಾಗಿ ಕೇವಲ ಕಿವಿಗಳು ಒಂದು ಕಡೆ ಇದ್ದರೆ ಮತ್ತೊಂದು ಕಡೆಗೆ ನಾಲಿಗೆಗಳು, ಇನ್ನೊಂದು ಕಡೆ ಕೈಗಳು ಹೀಗೆ ದೇಹದ ವಿವಿದ ಅಂಗಗಳು ಬೇರೆ ಬೇರೆಯಾಗಿ ಬಿದ್ದಿರುವುದನ್ನು ಕಂಡು ಈಶ್ವರನಿಗೆ ಕೆಳಿದರು. ಆಗ ಈಶ್ವರನು ಸ್ವರ್ಗಲೊಕದಲ್ಲಿರುವ ಜನರು ಕೆಲವರು ಸಂಪೂರ್ಣ ಶರೀರ, ಇಂದ್ರಿಯ, ಮನಸ್ಸುಗಳಿಂದ ಪುಣ್ಯಕಾರ್ಯ ಮಾಡಿದ್ದರೆ ಮತ್ತೆ ಕೆಲವರು ತಮ್ಮ ಕೆಲವು ದೇಹದ ಅಂಗಗಳಿಂದ ಮಾತ್ರ ಪುಣ್ಯ ಕಾರ್ಯ ಅಥವಾ ಶುಭವಾದುದನ್ನು ಮಾಡಿರುವುದರಿಂದ ಅವುಗಳಷ್ಟೇ ಸ್ವರ್ಗಲೋಕ ಪಡೆದಿವೆ ಎಂದನು. ಅದರಿಂದ ನಾವು ಇಡೀ ಶರೀರೇಂದ್ರಿಗಳೊಂದಿಗೆ ಸ್ವರ್ಗಕ್ಕೆ ತೆರಳಬೇಕಾದರೆ ದೇವರ ದಾಸಿಮಯ್ಯನವರು ಹೇಳಿದಂತೆ ಶರೀರದ ಪ್ರತಿಯೊಂದು ಅಂಗವು ಸಹ ಪುಣ್ಯ (ಶುಭ) ಕಾರ್ಯಕ್ಕೆ ಮೀಸಲಿಡೋಣ.