ನವದೆಹಲಿ- ಜನಸಾಮಾನ್ಯರಿಂದ ಚಿಕ್ಕಚಿಕ್ಕ ಕಂತುಗಳಲ್ಲಿ ಹಣ ಸಂಗ್ರಹಿಸಿ ದೊಡ್ಡ ಮೊತ್ತದ ಬಡ್ಡಿ ನೀಡುವ ಆಸೆ ತೋರಿಸಿ ಬಡ ಜನರ ಜೀವನದೊಂದಿಗೆ ಆಟವಾಡಿರುವ ಐಎಂಎ ಹಗರಣದಲ್ಲಿ ಹಲವಾರು ಪ್ರಭಾವಿಗಳು ಭಾರಿ ಮೊತ್ತದ ಹಣ ಪಡೆದಿರುವುದು ಪದೇ, ಪದೇ ಸಾಬೀತಾಗುತ್ತಿದೆ. ಈ ಕೂಡಲೇ ಈ ಹಗರಣದಲ್ಲಿ ಕೇಳಿ ಬಂದಿರುವ ಪ್ರಭಾವಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಕೂಡಲೇ ಹಣ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದರು.

ಸೋಮವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಶಾಸಕ ಜಮೀರ್ ಅಹಮದ್ ಖಾನ್ 34 ಕೋಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ 5 ಕೋಟಿ, ಕುಮಾರಸ್ವಾಮಿ, ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಸೇರಿದಂತೆ ಇತರೇ ಪ್ರಭಾವಿಗಳು ಹಣ ಮಡೆದಿರುವುದಾಗಿ ಹೇಳಿಕೆ ನೀಡಿರುವ ಮನ್ಸೂರ್ ಖಾನ್ ಆಪ್ತ ನಿಜಾಮುದ್ದೀನ್ ಹೇಳಿಕೆ ಮೇಲೆ ಈ ಕೂಡಲೇ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಡ ಜನರು ಬೆವರು ಸುರಿಸಿ ದುಡಿದ ದುಡ್ಡನ್ನು ಈ ರೀತಿ ಕೊಳ್ಳೆ ಹೊಡೆದಿರುವ ಪ್ರಭಾವಿಗಳಿಗೆ ಜನ ಸಾಮಾನ್ಯರ ಶಾಪ ತಟ್ಟದೆ ಇರದು, ರಾಜ್ಯ ಬಿಜೆಪಿ ಸರ್ಕಾರ ಹಣ ಪಡೆದಿರುವ *ಪ್ರಭಾವಿಗಳ ವಿರುದ್ದ ಸೂಕ್ತ ತನಿಖೆ ನಡೆಸದಿದ್ದರೆ ಇವರುಗಳ ಮನೆಗೆ ಮುತ್ತಿಗೆ ಹಾಕುತ್ತದೆ* ಎಂದು ಎಚ್ಚರಿಕೆ ನೀಡಿದರು.

ಮನ್ಸೂರ್ ಖಾನ್ ಆಪ್ತ ನಿಜಾಮುದ್ದೀನ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸರ್ಕಾರ ಕ್ರಮ ಜರುಗಿಸಲು ಮುಂದಾಗಬೇಕು ಹಾಗೂ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೆ ಹೆಚ್ಚಿನ ಮಟ್ಟದ ಅಧಿಕಾರ ನೀಡಬೇಕು, ಇಂತಹ ಪ್ರಾಮಾಣಿಕ ಅಧಿಕಾರಿಯ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಎಳೆದಾಡುತ್ತಿರುವ ಈ ಪ್ರಕರಣವನ್ನು ಮುಕ್ತಾಯಗೊಳಿಸುವ ತಾಕತ್ತು ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೆ ಜನರ ಮುಂದೆ ನಿಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಂಡು ಬಿಡಿ ಎಂದು ಲೇವಡಿ ಮಾಡಿದರು.

ಪಕ್ಷದ ಮುಖಂಡ ಹಬೀಬ್ ಅವರು ಮಾತನಾಡಿ, ಮನ್ಸೂರ್ ಖಾನ್‌ನನ್ನು ಅರ್ಧ ದೋಚಿರುವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿರುವ ಪ್ರಭಾವಿಗಳೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರ ಮರ್ಜಿಗೂ ಒಳಗಾಗದೇ ಬಡ ಜನರಿಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದಲ್ಲಿ ಬಡ ಜನರ ಶಾಪ ನಿಮ್ಮೆಲ್ಲರನ್ನು ತಟ್ಟದೆ ಬಿಡುವುದಿಲ್ಲ ಎಂದು ನುಡಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

Email

Jyothish kumar

About Author

Jyothish Kumar

Leave A Reply