ಧಾರವಾಡ – ಸದ್ಯ ಬಿಜೆಪಿಯಲ್ಲಿ ಇರುವ ಬಹುತೇಕ ಶಾಸಕರು ನಮ್ಮ ಜೆ ಡಿ ಎಸ್ ಪಕ್ಷದಿಂದ ಹೋದವರೇ ಆಗಿದ್ದಾರೆ. ಜೆ ಡಿ ಎಸ್ ಒಂದು ರೀತಿಯಲ್ಲಿ ಪ್ರೊಟೆಕ್ಷನ್ ಹೌಸ್ ಇದ್ದಹಾಗೆ. ಕಾಂಗ್ರೆಸ್ ನಲ್ಲೂ ಸಹ ನಮ್ಮ ಶಾಸಕರಿದ್ದಾರೆ. ಮೊದಲು ಬೆಳೆಯಲು ಇವರಿಗೆ ನಮ್ಮ ಪಕ್ಷ ಬೇಕಿತ್ತು ಆದ್ರೆ ಈಗ ನಮ್ಮ ಪಕ್ಷ ಅವರಿಗೆ ಬೇಡವಾಗಿದೆ ಎಂದು ನವಲಗುಂದ ಮಾಜಿ ಶಾಸಕ ಎನ್ ಎಚ್ ಕೋಣರೆಡ್ಡಿ ಗರಂ ಆಗಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲ ಈಗ ನಮ್ಮ ಪಕ್ಷಕ್ಕೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶೇ. 60ಕ್ಕೂ ಹೆಚ್ಚು ಜನ ಜೆಡಿಎಸ್ ಮೂಲದವರೇ ಸಚಿವರಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರಡ್ಡಿ ತಿಳಿಸಿದ್ದಾರೆ.
ಜೆಡಿಎಸ್ ಬಗ್ಗೆ ಎಚ್.ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ನವರು ವಿಶ್ವನಾಥ್ ಅವರಿಂದ ಕಲಿಯಬೇಕಾಗಿಲ್ಲ. ವಿಶ್ವನಾಥ್ ಈಗ ದೊಡ್ಡ ರಾಷ್ಟ್ರೀಯ ಪಕ್ಷ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಮಾತನಾಡಬಾರದು. ಅವರು ಯಾವ ವಿಚಾರಕ್ಕೆ ಬಿಜೆಪಿ ಸೇರಿದರು? 17 ಜನ ಎಲ್ಲರೂ ಸ್ವಾರ್ಥ ಇಲ್ಲದೆಯೇ ಬಿಜೆಪಿಗೆ ಹೋದರಾ ಎಂದು ಪ್ರಶ್ನೆ ಮಾಡಿದ್ದಾರೆ.
ಪಾಪ ವಿಶ್ವನಾಥ್ ಅವರು ಈಗ ಮಂತ್ರಿಯೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಿರುವಾಗ ಅವರೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜೆಡಿಎಸ್ ಬಗ್ಗೆ ದಯವಿಟ್ಟು ಇನ್ನು ಮುಂದೆ ಹಗುರವಾಗಿ ಮಾತನಾಡಬಾರದು. ಬಿಟ್ಟು ಹೋದ ಪಕ್ಷದ ಬಗ್ಗೆ ಮಾತನಾಡಬೇಡಿ, ವಿಶ್ವನಾಥ್ ಅಧಿಕಾರಕ್ಕಾಗಿ ಆ ಪಕ್ಷಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಕಿಡಿಕಾರಿದರು.