ಒಡಲು

0

ಡಾ. ಈಶ್ವರಾನಂದ ಸ್ವಾಮೀಜಿ

ಒಡಲು ಎಂದರೆ ಶರೀರ, ಕಾಯ, ದೇಹ, ಹೀಗೆ ಮೊದಲಾದ ಹೆಸರುಗಳಿಂದ ಕರೆದಿರುವುದನ್ನು ಶಬ್ದಕೋಶದಲ್ಲಿ ಕಾಣಬಹುದು. ನಮ್ಮ ಭಾರತ ದೇಶದ ಗುರುವರ್ಯರಾದ ಶರಣರು, ಸಂತರು, ಮಹಾತ್ಮರು, ಶಿವಯೋಗಿಗಳು ಈ ಶರೀರಕ್ಕೆ ಹಲವಾರು ಆಧ್ಯಾತ್ಮಿಕ ಹೆಸರುಗಳಿಂದ ಕರೆದು ಅರ್ಥೈಸಿದ್ದಾರೆ. ಶರೀರಕ್ಕೆ ದೇಗುಲ, ಬಂಡಿ, ಲಿಂಗ, ಮಡಿಕೆ, ಹೀಗೆ ಹಲವಾರು ನಾಮಗಳಿಂದ ಕರೆದು, ಅದರ ಗುಣಲಕ್ಷಣಗಳನ್ನು ಹೇಳಿರುವುದನ್ನು ವಚನಗಳಲ್ಲಿ ಕಾಣಬಹುದು. ಪ್ರಸ್ತುತ ಚಿಂತನದಲ್ಲಿ ದೇವರ ದಾಸಿಮಯ್ಯನವರು ಒಡಲಿನ ಗುಣಲಕ್ಷಣಗಳನ್ನು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದನ್ನು ಈ ಮುಂದಿನಂತೆ ಕಾಣಬಹುದು.

ಸಾಮಾನ್ಯವಾಗಿ ದೇಹಧಾರಿಯಾದ ಜೀವಿಯು ಹಸಿಯುತ್ತಾನೆ, ಹುಸಿಯುತ್ತಾನೆ, ಇವುಗಳನ್ನು ಮೀರಿ ನಿಲ್ಲುವುದು ಕಷ್ಟ. ಈ ಕಷ್ಟತನದ ಅನುಭಾವ ನಿನಗೇನು ಗೊತ್ತು? ಎಂದು ರಾಮನಾಥನಿಗೆ ಪ್ರಶ್ನೆ ಹಾಕುತ್ತಾರೆ ದಾಸಿಮಯ್ಯನವರು. ದೇಹದಾರಿಯಾದ ಮಾನವ (ಜೀವಿಯು) ತಪ್ಪು ಮಾಡುವುದು ಸಹಜ. ಹಾಗೆ ತಪ್ಪು ಮಾಡಿದರೂ ಸಹ ತನ್ನನ್ನು ಕ್ಷಮಿಸಿ ಶ್ರೇಷ್ಠವಾದ ಸ್ಥಿತಿಯನ್ನು ಕೊಡಬೇಕೆಂದು ದಾಸಿಮಯ್ಯನವರು ರಾಮನಾಥನಲ್ಲಿ ಪ್ರಾರ್ಥಿಸಿದ್ದಾರೆ.

ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
ಹಸಿವು, ಹುಸಿವುಗಳು ದೇಹದ ಗುಣಧರ್ಮಗಳು. ಆದರೆ ಚೈತನ್ಯದ ಗುಣಧರ್ಮಗಳಲ್ಲ. ದೇಹದ ಗುಣಧರ್ಮವನ್ನು ಮೀರಿನಿಂತಾಗ ಮಾತ್ರ ಜೀವಿಯು ಶಿವನಾಗಲು ಸಾಧ್ಯ. ಸಾಧ್ಯವನ್ನು ಸಾಧಿಸಲು ಜೀವಿಯು ಸಾಧನೆ ಮಾಡಬೇಕು. ಹಸಿವು, ಹುಸಿವು ದೇಹದ ನಿಕಟ ಸಂಬಂಧಿಗಳು. ಶಿವನೇ ಅದು ನಿನಗೇನು ಗೊತ್ತು? ನನ್ನ ಹಾಗೆ ಒಮ್ಮೆ ಶರೀರ ಧಾರಣೆ ಮಾಡಿ ನೋಡು ಗೊತ್ತಾಗುವುದು ಜೀವಿಯ ಸಂಕಟ. ಅರಿತವರೆ ಬಲ್ಲರು. ಒಮ್ಮೆ ಅನುಭವಕ್ಕೆ ಬಂದರೆ ಸಾಕು, ನಿನ್ನ ಹಾಗೆ ನಿಶ್ಚಿಂತರಾಗಿದ್ದು ದೇಹಧಾರಣೆಯ ಗೋಜಿಗೆ ಹೋಗುವುದಿಲ್ಲ.

ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ
ಆನು ಒಡಲುಗೊಂಡಡೇನು? ಕಡಲೊಳಗಣ ಬೊಬ್ಬಳಿಕೆ
ಕಡಲೊಳಗೆ ಅಳಿವಂತೆ ಎನ್ನ ಒಡಲಳಿದು ಹೋದಡೇನು?
ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ, ರಾಮನಾಥ.
ಜೀವಿಯು ಶರೀರ ಹೊಂದಿದರೆ, ವಿರೋಧಿಯಾಗುವುದಿಲ್ಲವೇ? ಶರೀರ ಹೊಂದಿದರೇನಾಯಿತು? ಸಮುದ್ರದಲ್ಲಿರುವ ಗುರುಳೆಗಳು ಸಮುದ್ರದಲ್ಲಿಯೇ ಲಯವಾಗುವಂತೆ, ಶರೀರವು ಪಂಚಭೂತಗಳಲ್ಲಿ ಲಯ ಹೊಂದಿದರೇನು? ಜೀವಿಯ ಚೇತನವು (ಪ್ರಾಣ) ರಾಮನಾಥನಲ್ಲಿಯೇ ಐಕ್ಯವಾಗುವುದು.
ಒಡಲುಗೊಂಡವ ನಾನು, ಪ್ರಾಣವಿಡಿದವ ನೀನು,

ಎನ್ನೊಡಲ ಸಂಚುವ ನೀ ಬಲ್ಲೇ! ನಿನ್ನ ಪ್ರಾಣದ ಸಂಚುವ ನಾ ಬಲ್ಲೆ!
ಇದು ಕಾರಣ ಇದು ಎನ್ನೊಡಲಲ್ಲ, ನಿನ್ನೊಡಲು
ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ ನೀ ಬಲ್ಲೆ ನಾ ಬಲ್ಲೆನೈ, ರಾಮನಾಥ.
ಶರೀರ ಧಾರಣೆ ಮಾಡಿದವನು ನಾನಾದರೇ ಅದರಲ್ಲಿ ಪ್ರಾಣವಿಟ್ಟವನು ನೀನಲ್ಲವೇ? ಇದರ ಲಕ್ಷಣ ನನಗಿಂತಲೂ ನಿನಗೆ ಚನ್ನಾಗಿ ಗೊತ್ತು ರಾಮನಾಥ ಎಂಧಿದ್ದಾರೆ ದಾಸಿಮಯ್ಯನವರು.
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ
ಕುಡಿದ ಉದಕದಲ್ಲಿ ಆ ಕಿಚ್ಚು ನಂದದ ಭೇದವ
ಮೃಡ! ನೀ ಪ್ರಾಣ ಪ್ರಕೃತಿಯೊಳಗೆ ಅಡಗಿದ ಭೇದವ
ಲೋಕದ ಜಡರೆತ್ತ ಬಲ್ಲರೈ? ರಾಮನಾಥ.

ಈ ಶರೀರದೊಳಗಿದ್ದ ಕಿಚ್ಚು ಶಿವನ ಚೈತನ್ಯ. ಅದು ಅರಿವು ಎನಿಸಿದ ರಾಮನಾಥನ ನಿರಂಜನ ಬೆಳಕು. ಈ ಬೆಳಕು ದೇಹವನ್ನು ಸುಡುವುದಿಲ್ಲ. ಹಾಗೂ ಇಂದ್ರ್ರಿಯಗಳನ್ನು ಸುಡದೆ ಪ್ರಕಾಶಮಾನವಾಗಿ ಮಾಡುತ್ತದೆ. ಆ ಚೇತನವು ಜಡ-ಚೇತನÀಗಳೆರಡರಲ್ಲಿ ವ್ಯಾಪಿಸಿ ಮಿಡಿಯುತಿದೆ. ಅಂಥಹ ಕಿಚ್ಚು ರಾಮನಾಥನ ಕಿಡಿಯಾಗಿದೆ. ಅದುವೇ ಜೀವ. ಈ ಅರುವಿನ ಜ್ಞಾನಾಗ್ನಿಯ ಮಹತ್ವ ಈ ಲೋಕದ ಅಜ್ಞಾನಿಗಳು ತಿಳಿಯಲು ಸಾಧ್ಯವಿಲ್ಲ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply