ಅಂತರಂಗದ ಅರಿವು

0

ಡಾ. ಈಶ್ವರಾನಂದ ಸ್ವಾಮೀಜಿ.

ಆಡಬಾರದ ಬಯಲು ಸುಡಬಾರದ ಬಯಲು,
ನುಡಿಯಬಾರದ ಬಯಲು ಹಿಡಿಯಬಾರದ ಬಯಲು,
ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ
ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.

ಈಶ್ವರನ ಸ್ವರೂಪ ಮಾತಿಗೆ ನಿಲುಕದ, ಸಾಧಿಸಲು ಸಾಧ್ಯವಾಗದ, ನಿರಾಕಾರನೂ, ಸಗುಣನಲ್ಲದ ನಿರ್ಗುಣನಾಗಿರುವ ಈಶ್ವರನನ್ನು ಜೀವಿಗಳು ಅರಿಯರು. ಎಂದು ಮುಂದಿನ ವಚನದಲ್ಲಿ ಕಾಣಬಹುದು. ದಾಸಿಮಯ್ಯನವರು ಈಶ್ವರನು ಬಯಲು ರೂಪನಾಗಿದ್ದಾನೆ. ಅವನ ಬಗ್ಗೆ ಹೇಳೋಣವೆಂದರೆ, ನಾಲಿಗೆಗೆ ಸಿಗನು. ನೋಡೋಣವೆಂದರೆ ಕಣ್ಣಿಗೆ ಕಾಣನು. ನುಡಿಗೆ ಸಿಗದೆ ಇರುವುದರಿಂದ ಆಡಲುಬಾರದು. ಚಕ್ಷುವಿಗೆ ಕಾಣದೆ ಇರುವುದರಿಂದ ನೋಡಲುಬಾರದು. ಎಂದು ಮೊದಲಾಗಿ ತಮ್ಮ ವಚನದಲ್ಲಿ ಹೇಳಿದ್ದಾರೆ. ರಾಮನಾಥನು ನಿರಾಕಾರ, ನಿರ್ಗುಣ, ಅಚಿಂತ್ಯ, ಅವಿನಾಶಿ, ನಾಮರೂಪರರಹಿತನಾಗಿದ್ದಾನೆ. ಹೀಗಿದ್ದೂ ಎಲ್ಲದರಲ್ಲೂ ತುಂಬಿಕೊಂಡಿದ್ದಾನೆ. ಅವನನ್ನು ಜ್ಞಾನನೇತ್ರದಿಂದ ನೋಡಬೇಕು. ಅವನು ಸುಳಿದಾಡುವುದಿಲ್ಲ. ಮಾತಿಗೆ ಸಿಲುಕುವುದಿಲ್ಲ.

ಕಣ್ಣಿಗೆ ಕಾಣುವುದಿಲ್ಲ. ಕೈಗೆ ಸಿಗುವುದಿಲ್ಲ. ಮನಕ್ಕೆ ಅತೀತನಾಗಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಮಾನವನ ಇಂದ್ರಿಯಗಳಿಗೆ ಅವನು ಅಗೋಚರನಾಗಿದ್ದಾನೆ. ಅವನು ಬಯಲಾಗಿದ್ದು ಬಯಲೊಳಗೆ ಅಡಗಿದ ಭೇದವ ಬಲ್ಲವರಾರು? ಎಂದು ಪ್ರಶ್ನಿಸಿದ್ದಾರೆ ದಾಸಿಮಯ್ಯನವರು.
ನಿರ್ಗುಣ, ನಿರಾಕಾರವಾಗಿರುವ ಈಶ್ವರನನ್ನು ತಿಳಿಯದ ಸಾಮಾನ್ಯ ಜನರು ವಿಗ್ರಹಾರಾಧನೆಯಲ್ಲಿ ಕಾಣಹೊರಟಿದ್ದಾರೆ. ಅವರನ್ನು ಕುರಿತು ದಾಸಿಮಯ್ಯನವರು ಹೇಳಿರುವ ವಚನವಿದು. ಈಶ್ವರನು ಒಡಲಿಲ್ಲದ ಬಯಲು. ಅದನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ಆಡಲು ಬಾರದು, ಹಿಡಿಯಲು ಬಾರದು, ಸೂಡಲು ಬಾರದು, ಎಂದು ಶೂನ್ಯತ್ವದ ಮಹತ್ವವನ್ನು ತಿಳಿಸಿದ್ದಾರೆ. ಶೂನ್ಯರೂಪದಲ್ಲಿ ಅಂತರ್ಗತನಾಗಿರುವ ಈಶ್ವರನನ್ನು ತಿಳಿಯದ ಅಜ್ಞಾನಿಗಳ ಅಜ್ಞಾನವ ಕಂಡು ವ್ಯಥೆಪಟ್ಟಿದ್ದಾರೆ.

ದಾಸಿಮಯ್ಯನವರ ವಚನದ ಸಾರವನ್ನು ಉಪನಿಷತ್ತಿನ ಈ ಮುಂದಿನ ಮಂತ್ರದಲ್ಲಿ ಕಾಣಬಹುದು.
ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ|
ನ ವಿದ್ಮೋ ನ ವಿಜಾನೀಮೋ ಯಥೈದನುಶಿಷ್ಯಾತ್||
ಭಗವದ್ಗೀತೆಯಲ್ಲಿ ಸಹ- ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ|
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ||
ನ ಜಾಯತೇ ಮ್ರಿಯತೇ ವಾ ಕದಾಚಿನ್ನಾಯಂ ಭೂತ್ವಾ ಭವಿತಾ ವಾ ನ ಭೂಯಃ|
ಅಜೋ ನಿತ್ಯಃ ಶಾಶ್ವತೋ„ಯಂ ಪುರಾಣೋ ನ ಹನ್ಯಂತೇ ಹನ್ಯಮಾನೇ ಶರೀರೇ||
ಪರಮಾತ್ಮನ ಇರುವಿಕೆಯು ಅಂತರಂಗದಲ್ಲಿ ಅರಿವಾಗಿ ಕರಗತವಾಗಬೇಕಾದರೆ ಶಂಕರರ ಜೀವನದಲ್ಲಿ ನಡೆದ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಇದು ವಿಶೇಷವಾಗಿ ಅರಿವಿನ ಕಣ್ಣನ್ನು ತೆರೆಯಿಸುವುದು.

ಶಂಕರಾಚಾರ್ಯರು ಪರಮಜ್ಞಾನಿಗಳು. ಒಂದು ದಿನ ಅವರು ಸಂಚಾರ ಮಾಡುತ್ತ ಹೊರಟಿದ್ದರು. ಅದು ಊರಿಂದೂರಿಗೆ ನಡೆದು ಹೋಗುವ ಕಾಲ. ದಣಿವಾರಿಸಿಕೊಳ್ಳಲೆಂದು ಒಂದು ಮರದಡಿಯಲ್ಲಿ ಕುಳಿತರು. ಪಕ್ಕದ ಹೊಲದ ರೈತನು ಊಟಕ್ಕೆ ಕುಳಿತುಕೊಂಡನು. ಅದೇ ಮರದಡಿಯಲ್ಲಿ ಕುಳಿತಿದ್ದ ಶಂಕರಾಚಾರ್ಯರನ್ನು ನೋಡಿ ಅನಾಯಾಸವಾಗಿ ದೊರೆತ ಅತಿಥಿಗಳಿಗೆ ಊಟೋಪಚಾರ ಮಾಡಿಸಿ ಬಳಿಕ ತಾವು ಯಾರು? ಎಂದು ಕೇಳಿದ. ಹಸಿದವರಿಗೆ, ನೀರಡಿಸಿದವರಿಗೆ ನೀವು ಯಾರು? ಎಂದು ಕೇಳಬಾರದು ಇದು ಭಾರತೀಯ ಸಂಸ್ಕøತಿ, ಅತಿಥಿ ಸತ್ಕಾರ ಮಾಡಿದ ಮೇಲೆಯೇ ರೈತನು ತಾವು ಯಾರು? ಎಂದು ಕೇಳಿದ. ಕೂಡಲೇ ಅವರು ಸಂತಸದಿಂದ ‘ನಾನು ಶಂಕರಾಚಾರ್ಯ’ ಎಂದು ಹೇಳಿದರು. ಇದನ್ನು ಕೇಳಿದ ರೈತ ಅತ್ಯಾನಂದದಿಂದ ನಾನು ಬಹಳ ದಿನಗಳಿಂದ ತಮ್ಮ ದರ್ಶನಕ್ಕಾಗಿ ಹಂಬಲಿಸುತ್ತಿದ್ದೆ. ಯೋಗಾಯೋಗ ನನಗೆ ದರ್ಶನವಾಯಿತು. ದಯವಿಟ್ಟು ನನಗೆ ಬ್ರಹ್ಮೋಪದೇಶ ಮಾಡಿರಿ ನಾನೂ ತಮ್ಮಂತೆಯೇ ಆತ್ಮಜ್ಞಾನಿಯಾಗಬೇಕೆಂದು ಹಂಬಲ ಇದೆ. ಆದರೆ ನಾನು ಪ್ರಾಪಂಚಿಕ. ನನಗೆ ಸಮಯವಿಲ್ಲ, ಎತ್ತುಗಳು ನನಗಾಗಿ ದಾರಿ ಕಾಯುತ್ತಲಿವೆ. ಬೇಗ ಉಪದೇಶ ಮಾಡಿರಿ’ ಎಂದ. ಆಗ ಆತ್ಮಜ್ಞಾನ ಮಾಡಿಕೊಳ್ಳುವುದು ಸುಲಭವಲ್ಲ. ಅದಕ್ಕೆ ತುಂಬಾ ಸಮಯಾವಕಾಶ ಬೇಕಾಗುತ್ತದೆ. ಎಂದು ಶಂಕರಚಾರ್ಯರು ಹೇಳಿದರು.

ಅರಿತವರಿಗೆ ತಿಳಿಸುವುದಕ್ಕೆ ಸಮಯ ಏಕೆ ಬೇಕು? ತಮಗಾದರೂ ಸರಿಯಾಗಿ ತಿಳಿದಿದೆಯೋ ಇಲ್ಲವೋ ನೋಡಿ. ಎಂದ ರೈತ. ಇಂಥ ಶಿಷ್ಯನನ್ನು ಆಚಾರ್ಯರು ಇದೇ ಮೊದಲ ಬಾರಿ ನೋಡಿದ್ದರು. ಇವನಿಗೆ ಬ್ರಹ್ಮೋಪದೇಶ ಮಾಡಿಯೇ ಬಿಡಬೇಕೆಂದು ರೈತನ ಆಹ್ವಾನ ಸ್ವೀಕರಿಸಿದರು. ಒಂದು ಸುಂದರವಾದ ಚಿಕ್ಕ ದೃಷ್ಟಾಂತದ ಮೂಲಕ ಆಚಾರ್ಯರು ರೈತನಿಗೆ ಆತ್ಮೋಪದೇಶ ಮಾಡಿದರು. ಆಗ ಅವರೀರ್ವರ ಮಧ್ಯದಲ್ಲಿ ನಡೆದ ಸಂಭಾಷಣೆ ತುಂಬಾ ಸುಂದರವಾಗಿದೆ.
ಶಂಕರರು :- ನೀನು ಹಗಲು ಹೊತ್ತಿನಲ್ಲಿ ಈ ಜಗತ್ತನ್ನು ಯಾವ ಬೆಳಕಿನಲ್ಲಿ ನೋಡುತ್ತೀ?
ರೈತ :- ಹಗಲು ಹೊತ್ತು ನಾನು ಸೂರ್ಯನ ಬೆಳಕಿನಲ್ಲಿ ಈ ಜಗತ್ತನು ನೋಡುತ್ತೇನೆ.
ಶಂಕರರು :- ರಾತ್ರಿ ಹೊತ್ತು ಯಾವ ಬೆಳಕಿನಲ್ಲಿ ನೀನು ಈ ಜಗತ್ತನ್ನು ಮೋಡುತ್ತಿ?
ರೈತ :- ರಾತ್ರಿ ಹೊತ್ತು ಚಂದಿರ, ನಕ್ಷತ್ರ ಹಾಗೂ ದೀಪದ ಬೆಳಕಿನಲ್ಲಿ ನಾನು ಈ ಜಗತ್ತು ನೋಡುತ್ತೇನೆ.
ಶಂಕರರು :- ಈ ಸೂರ್ಯ ಚಂದ್ರರನ್ನು ಯಾವ ಬೆಳಕಿನಲ್ಲಿ ನೋಡುತ್ತಿ?
ರೈತ :- ನನ್ನ ಕಣ್ಣಿನ ಬೆಳಕಿನಲ್ಲಿ ನೋಡುತ್ತೇನೆ.
ಶಂಕರರು :- ಕಣ್ಣು ಮುಚ್ಚಿದಾಗ ನಿನ್ನೊಳಗಿರುವುದನ್ನೆಲ್ಲ ಯಾವ ಬೆಳಕಿನಲ್ಲಿ ನೋಡುತ್ತಿ?
ರೈತ :- ಬುದ್ಧಿಯ ಬೆಳಕಿನಲ್ಲಿ ನನ್ನೊಳಗಿರುವುದನ್ನು ನಾನರಿಯುತ್ತೇನೆ.
ಶಂಕರರು :- ಬುದ್ಧಿಯನ್ನು ಯಾವ ಬೆಳಕಿನಲ್ಲಿ ತಿಳಿಯುತ್ತಿ?
ರೈತ :- ಇನ್ನಾ ಬೆಳಕಿನಲ್ಲಿ? ನನ್ನ ಬೆಳಕಿನಲ್ಲೇ ಎಲ್ಲವನ್ನು ನೋಡುತ್ತೇನೆ.
ಶಂಕರರು :- ನಿನ್ನೊಳಗಿರುವ ಆ ಮಹಾಬೆಳಗೇ, ಅರಿವಿನ ಜ್ಯೋತಿಯೇ ನೀನು. ಅದೇ ನಿನ್ನಾತ್ಮ.
ಶಂಕರಾಚಾರ್ಯರ ಈ ಪರಮಾನುಭವದ ನುಡಿಗಳನ್ನು ಆಲಿಸಿದ್ದೇ ತಡ ಆಮುಗ್ದ ರೈತನಿಗೆ ತನ್ನ ಅಂತರಂಗದಲ್ಲಿರುವ ಅರಿವಿನ ಬೆಳಕೇ ಆ ಪರಂಜ್ಯೋತಿ ಪರಮಾತ್ಮನೆಂಬ ಅರಿವಾಗಿತ್ತು.
ಅರುಹು ಅರಿಯಲೆಂದು
ಕುರುಹ ಕೈಯಲ್ಲಿ ಕೊಟ್ಟ,
ಅರುಹನೆ ಮರೆದು ಕುರುಹನೆ ಹರಿದ,
ಈ ಕುರುಂಬರಿಗಿನ್ನೆತ್ತಣ ಮುಕ್ತಿಯೋ? ರಾಮನಾಥ.
ಅಂಗುಷ್ಠ ಮಾತ್ರ ಆಕಾರವುಳ್ಳ ಆತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಅವನು ಧೂಮರಹಿತನಾಗಿದ್ದಾನೆ. ಅಂದರೆ ಕಲ್ಮಶರಹಿತನಾಗಿದ್ದಾನೆ. ಅವನು ಇಂದು, ನಾಳೆ ಎಂದಿಗೂ ಆರದ ಶಾಶ್ವತವಿರುವ ಭಗವಂತನು ಜ್ಯೋತಿಸ್ವರೂಪನಾಗಿದ್ದಾನೆ. ಅವನು ಪರಿಪೂರ್ಣನಾಗಿ ಎಲ್ಲ ಜೀವಕೋಟಿಗಳ ಶರೀರದಲ್ಲಿ ಅಂಗುಷ್ಠ ಗಾತ್ರದಲ್ಲಿದ್ದು ಆತ್ಮಜ್ಯೋತಿ ಎಂದೆನಿಸಿಕೊಂಡಿದ್ದಾನೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply