ಜಂತುನಾಂ ನರ ಜನ್ಮ ದುರ್ಲಭಂ

0

ಡಾ. ಈಶ್ವರಾನಂದ ಸ್ವಾಮೀಜಿ

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿ, ಪಶು, ಪಕ್ಷಿಗಳಲ್ಲಿ ಮನುಷ್ಯನಾಗಿ ಜನಿಸುವುದು ಆಕಸ್ಮಿಕ, ಇಲ್ಲವೇ ಪೂರ್ವ ಜನ್ಮದ ಪುಣ್ಯ ಎನ್ನಬಹುದು. ಮಾನವನಾಗಿ ಜನಿಸದ ಮೇಲೆ ಏನು ಮಾಡಬೇಕೆಂಬುವುದನ್ನು ಮಡಿವಾಳ ಮಾಚಿದೇವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ. ಅದು ಈ ಮುಂದಿನಂತೆ ನೊಡಬಹುದು-

ವಾಯುಗುಣವ ಸರ್ಪಬಲ್ಲುದು, ಮಧುರಗುಣವ ಇರುವೆ ಬಲ್ಲುದು,
ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆಯ ಗುಣವ ಕೋಳಿಬಲ್ಲುದು,
ಮಾನವನಾಗಿ ಹುಟ್ಟಿರ್ದ ಬಳಿಕ ಶಿವ ಜ್ಞಾನವನರಿಯದಿರ್ದಡೆ
ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ ಕಲಿದೇವರದೇವ.

ಮಾನವನಾಗಿ ಜನಿಸಿದ ಮೇಲೆ ಶಿವಜ್ಞಾನ, ಶಿವಭಕ್ತಿ, ಶಿವಧ್ಯಾನ ಇರಬೇಕೆಂದು ತಿಳಿಸಿದ್ದಾರೆ. ಆದರೆ ನಾವು ಹಣದಜ್ಞಾನ, ಹೆಂಡತಿಯ ಮೇಲೆ ಭಕ್ತಿ, ಮಕ್ಕಳ ಧ್ಯಾನವನ್ನು ಮಾಡುತ್ತೇವೆ. ಅಲ್ಲದೆ ಮಹಾಶಿವಶರಣೆ ವೈರಾಗ್ಯ ಮೂರ್ತಿ ಅಕ್ಕಮಹಾದೇವಿಯು ಸಹ ಮಾನವನನ್ನು ಕುರಿತು-
ಮರವಿದ್ದು ಫಲವೇನು ನೆರಳಿಲ್ಲದನಕ್ಕ,
ಧನವಿದ್ದು ಫಲವೇನು ಧರ್ಮವಿಲ್ಲದನಕ್ಕ,
ಹಸುವಿದ್ದು ಫಲವೇನು ಹಯನವಿಲ್ಲದನಕ್ಕ,
ರೂಪಿದ್ದು ಫಲವೇನು ಗುಣವಿಲ್ಲದನಕ್ಕ,

ನಾನಿದ್ದು ಫಲವೇನು ನಿಮ್ಮ ಜ್ಞನವಿಲ್ಲದನಕ್ಕ ಚನ್ನಮಲ್ಲಿಕಾರ್ಜುನ.
ನಾವು ಜೀವನವನ್ನು ವ್ಯರ್ಥ ಹರಣ ಮಾಡದೆ ಈಶ್ವರನ ಕೃಪೆಗೆ ಪಾತ್ರರಾಗಬೇಕು. ಅಕ್ಕಮಹಾದೇವಿಯು ಇನ್ನೊಂದು ವಚನದಲ್ಲಿ-
ಊರಸೀರೆಗೆ ಅಗಸ ತಡಬಡಗೊಂಬಂತೆ,
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂದು
ನೆನೆನೆನೆದು ನಿಮ್ಮ ನರಿಯದ ಕಾರಣ
ಕೆಮ್ಮನೆ ಕೆಟ್ಟೆನಯ್ಯ ಚನ್ನಮಲ್ಲಿಕಾರ್ಜುನಯ್ಯ.
ಇದಲ್ಲದೆ ಗಜೇಶ ಮಸಣಯ್ಯನವರ ಈ ಕೆಳಗಿನ ವಚನದಂತೆ “ಅಗಸ ನೀರಲ್ಲಿದ್ದು ನೀರಡಿಸಿ ಸತ್ತಂತೆ” ಆಗುವುದು ನಮ್ಮ ಜೀವನ.

ಹಗಲು ಹಸಿವಿಗೆ ಕುದಿದು, ಇರುಳು ನಿದ್ರೆಗೆ ಕುದಿದು,
ಉಳಿದಾವ ಹೊತ್ತೆಲ್ಲ ಅಸನ ವ್ಯಸನಕ್ಕೆ ಕುದಿದು,
ಅಯ್ಯಾ ನಿಮ್ಮನರಿಯದ ಪಾಪಿನಾನಯ್ಯ
ಅಯ್ಯಾ ನಿಮ್ಮನರಿಯದ ಕರ್ಮಿನಾನಯ್ಯ,
ಮಹಾಲಿಂಗ ಗಜೇಶ್ವರದೇವ ಅಸಗ ನೀಡಸಿದಂತಾಯಿತೆನ್ನ ಸಂಸಾರ.

ಪರಿಸರದ ಸೌಂದರ್ಯದ ಮಡಿಲಲ್ಲಿ ಇರುವ ವಿಶಾಲವಾದ ನೀರಿನ ಕೆರೆಯಲ್ಲಿ ಒಂದು ಕಪ್ಪೆ ತನ್ನ ಹೆಂಡತಿ ಮಕ್ಕಳೊಂದಿಗೆ ಬಹು ದಿನಗಳಿಂದ ವಾಸಿಸುತಿತ್ತು. ಅದು ದಿನಾಲು ನೀರಿನಲ್ಲಿರುವ ಹುಳುಗಳನ್ನು ಆರಿಸಿಕೊಂಡು ತಿಂದು ಜೀವನ ನಡೆಸತಿತ್ತು. ಹೀಗೆ ಕೆಲವು ವರ್ಷಗಳು ಗತಿಸಿದವು. ಒಂದು ದಿನ ಆ ಕಪ್ಪೆ ಆ ಕೆರೆಯ ದಂಡೆಯ ಮೇಲೆ ವಾಯುವಿಹಾರಕ್ಕೆಂದು ಬಂದಾಗ ಅಲ್ಲಿಗೆ ಎಲ್ಲಿಂದಲೋ ಒಂದು ಜೇನು ನೋಣದ ಗುಂಯಿ ಎನ್ನುವ ಶಬ್ದ ಕೇಳಿ ಅದರ ಕಡೆ ನೋಡಿ ಕಪ್ಪೆ ಹೀಗೆ ಕೇಳಿತ್ತು- ನಿಲ್ಲು ಯಾರು ನೀನು? ಎಲ್ಲಿಗೆ ನಡೆದಿದೆ? ಎಂದು ಪ್ರಶ್ನಿಸಿದಾಗ ಇಲ್ಲಿಂದ ಎರಡು/ಮೂರು ಕಿ.ಮಿ ದೂರವಿರುವ ಅರಣ್ಯದಲ್ಲಿ ವಾಸಮಾಡಿದ್ದೇನೆ. ನನ್ನ ಹೆಸರು ಜೇನು ನೋಣವೆಂದು ಕರೆಯುತ್ತಾರೆ.

ಇಲ್ಲಿಗೆ ನಾನು ಅಮೃತ (ಮಧು, ಮಕರಂದ) ಕುಡಿಯಲು ವಬಂದಿದ್ದೇನೆ ಎಂದಾಗ ಆ ಕಪ್ಪೆಗೆ ಆಶ್ಚರ್ಯವಾಯಿತು. ಸುರಸುರರು ಹಿಂದಿನ ಕಾಲದಲ್ಲಿ ಸಮುದ್ರ ಮಥನ ಮಾಡಿದ್ದಾರೆ ಅದು ಇಂದು ಸಿಗಲು ಸಾಧ್ಯಯವೇ? ಅದನ್ನು ಅವಾಗಲೇ ಕುಡಿದು ಮುಗಿಸಿದ್ದಾರೆ. ಈಗ ಇಲಿ ಕೇವಲ ಹೊಲಸದ ನೀರು ಮಾತ್ರ. ಈ ನೀರಿನ ಕೆರೆಯಲ್ಲಿ ನಿನಗೆ ಅಮೃತ ಸಿಗುವುದು ಹೇಗೆ? ಎಂದು ಪ್ರಶ್ನಿಸಿದಾಗ ಆ ನೋಣವು ಕಪ್ಪೆಯನ್ನು ಕರೆತಂದು ಇಗೋ ಇಲ್ಲಿ ನೋಡು ಎಂದು ಸುಂದರವಗಿ ಅರಳಿ ನಿಂತಿರುವ ಕಮಲವನ್ನು ತೋರಿಸಿತು. ಆಗ ಕಪ್ಪೆ ನಿನಗೇನು ತಲೆ ಕೆಟ್ಟಿದೆಯಾ? ಇದು ಅಮೃತವಲ್ಲ, ಒಂದು ಹೂವು ಇದರ ಕೆಳಗಡೆಯೇ ನನ್ನ ಮನೇಯಿದೆ. ಇದು ಅಮೃತವಾಗಿದ್ದರೆ ನಾನು ಬಿಡುತಿದ್ದೇನೆಯೇ? ಇದನ್ನು ಕೇಳಿದ ಜೇನು ನೋಣ ಅಮೃತ ಕೆಳಗಡೆ ಇರುವುದಿಲ್ಲ, ಒಳಗಡೆ ಇರುತ್ತದೆ. ನಾನು ಎಲ್ಲಿಂದಲೋ ಹುಡುಕಿಕೊಂಡು ಬಂದಿದ್ದೇನೆ ನೀನಗೇನಾಗಿದೆ? ಎಂದಾಗ ಕಪ್ಪೆ ತಾನು ಇಲ್ಲಿಯೇ ಇದ್ದುಕೊಂಡು 90 ವರ್ಷ ಜೀವನ ವ್ಯರ್ಥವಾಗಿ ಕಳೆದುಕೊಂಡಿಯಲ್ಲ ಎಂದು ಹಳಹಳಿಸಿತು. ಆ ಜೇನುನೋಣ ಇಗ ಚಿಂತಿಸಿ ಫಲವೇನು ಎಂದು ಸಮಧಾನ ಹೇಳಿ ಅಮೃತ (ಮಕರಂದ) ಸವಿದು ಹೋಯಿತು. ಇಗೋ ನಾಳೆಯೋ ಸಾಯುವ ಸ್ಥಿತಿಯಲ್ಲಿತ್ತು ಕಪ್ಪೆ.

ಹಾಗೆಯೇ ನಾವು ಸಹ ಈ ಧರ್ಮಕ್ಷೇತ್ರವಾದ ಪುಣ್ಯಸ್ಥಳದಲ್ಲಿ ಜನಿಸಿದ್ದೇವೆ. ನಮ್ಮ ಸುತ್ತ ಮುತ್ತಲೂ ಅನೇಕ ಸಾಧು, ಸಂತರು, ಮಹಾತ್ಮರು, ಶರಣರು, ಜ್ಞಾನಿಗಳು, ಪಂಡಿತರು ಮೊದಲಾದವರು ಇದ್ದಾರೆ. ಅವರಿಂದ ಪ್ರಯೋಜನವನ್ನು ಪಡೆದುಕೊಳ್ಳದೆ ಜೀವನ ವ್ಯರ್ಥ ಹರಣ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ದಾಸರು “ಮಾನವ ಜನ್ಮ ದೊಡ್ಡದು ಇದು ಹಾನಿ ಮಡಲು ಬೇಡಿ ಹುಚ್ಚಪ್ಪಗಳಿರಾ” ಎಂದು ಹಾಡಿ ಜಗತ್ತಿಗೆ ಎಚ್ಚರಿಸಿದ್ದಾರೆ. ಈ ಜನ್ಮದಲ್ಲಿ ಏನೆಲ್ಲಾ ಸಾಧಿಸಲು ಸಾಧ್ಯ. ಅದಕ್ಕಾಗಿ ಕಲಿಯುಗವನ್ನು ಯುಜ್ಞಾನಯುಗ, ಕಂಪ್ಯೂಟರ್, ಮೋಬೆಲ್ ಯುಗವೆಂದು ಕರೆಯುತ್ತಿದ್ದೇವೆ. ಹಗಲಿರಳು ಹೆಂಡತಿ ಮಕ್ಕಳು ಬಂಧು ಬಳಗರೊಡನೆ ಕಾಲ ಕಳೆದು ಧರ್ಮದ ಬಗ್ಗೆ ತಿಳಿಯದೆ ವ್ಯರ್ಥವಾಗಿ ಕಾಲಕಳೆಯುತ್ತಿದ್ದೇವೆ. ಅದನ್ನು ದೇವರ ದಾಸಿಮಯ್ಯನವರು ಈ ಮುಂದಿನಂತೆ ಹೇಳಿದ್ದಾರೆ-
ಉಣ್ಣಿ ಕೆಚ್ಚಲ ಹತ್ತಿ ಉಂಬುದೇ ನೊರೆವಾಲ ?
ಪುಣ್ಯ ಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಆ ಉಣ್ಣೆಯಿಂದ ಕರಕಷ್ಟ ರಾಮನಾಥ.

ಹಸುವಿನ ಕೆಚ್ಚಲಿನಲ್ಲಿ ಉಣ್ಣೆ ವಾಸಿಸುತ್ತದೆ. ಆದರೆ ಅದು ಇರುವ ಸ್ಥಳ ಅರಿಯದೆ ಅಲ್ಲಿರುವ ಅಮೃತವನ್ನು ಕುಡಿಯುದನ್ನು ಬಿಟ್ಟು ರಕ್ತ ಕುಡಿಯುತ್ತದೆ. ಅದರಂತೆಯೇ ನಾವು ಸಹ ಪುಣ್ಯಸ್ಥಳದಲ್ಲಿ ಜನಿಸಿದ್ದೇವೆ. ಆದರೆ ಆ ಕ್ಷೇತ್ರದ ಮಹಿಮೆ ಅರಿಯದೆ ವ್ಯರ್ಥ ಕಾಲಹರಣ ಮಾಡುತ್ತಿದ್ದೇವೆ. ಆ ಉಣ್ಣೆಯಂತೆ ನಮ್ಮ ಜೀವನ, ಬಾಳು ಸಹ ವ್ಯರ್ಥವಾಗುತ್ತದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply