ಒಲವಿನ ಬದುಕು

0

ಡಾ. ಈಶ್ವರಾನಂದ ಸ್ವಾಮೀಜಿ  

ಸತಿ-ಪತಿಗಳಿಬ್ಬರು ಒಂದು ಕುಟುಂಬದ ಎರಡು ಕಣ್ಣುಗಳು. ಒಂದು ಬಂಡಿಯ ಎರಡು ಚಕ್ರಗಳು. ಆ ಎರಡು ಚಕ್ರಗಳಿಗೆ ಹೊಂದಾಣಿಕೆ ಎನ್ನುವ ಕೀ ಅವಶ್ಯಕ. ಇದರಿಂದ ಅವರ ಜೀವನ ಪ್ರಜ್ವಲಿಸುವ ಒಂದೇ ಹಣತೆಯ ಜೋಡೆರಡು ದೀಪದಂತೆ. ಅದಕ್ಕೆ ಒಲವಿನ ತೈಲವನ್ನೆರದು ಬಾಳಿನುದಕ್ಕೂ ಕುಡಿಚಾಚಿ ಒಬ್ಬರನೊಬ್ಬರು ನೆರೆನಂಬಿ ನಸುನಗುತ್ತ ಜೀವನ ಸಾಗಿಸಬೇಕು. ಅಂತಹ ದಾಂಪತ್ಯವನ್ನು ಕಂಡು ಅರಿತ ವಿಶ್ವಮಾನ್ಯ ಆದ್ಯವಚನಕಾರ ದೇವರ ದಾಸಿಮಯ್ಯನವರು ತಮ್ಮ ಜೀವನದಲ್ಲಿ ಅಳವಡಿಸಿ, ಅನುಭವಿಸಿಕೊಂಡು ಹೇಳಿದ ವಚನ ಹೀಗಿದೆ-

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷಬೆರೆಸಿದಂತೆ ಕಾಣಾ ರಾಮನಾಥ.

ಒಂದು ಸುಸಜ್ಜಿತ, ಸುಸಂಸ್ಕøತ, ಸುವರ್ಣಮಯ ಬದುಕು ದಾಸಿಮಯ್ಯನವರದು. ಅವರ ದಾಂಪತ್ಯ ಜೀವನ ಮುಂಬಂದಿರುವ ಬಸವಾದಿ ಶರಣರಿಗೆ ಮಾರ್ಗದರ್ಶನ. ಅವರ ಒಲವು-ನಿಲವು, ಆಚಾರ-ವಿಚಾರ, ವ್ಯವಹಾರ-ವಿಹಾರಗಳು ನಮ್ಮ ಕಣ್ಮುಂದೆ ಕಟ್ಟಿದಂತಿದೆ. ಸತಿ ದುಗ್ಗಳೆಯ ಬಗ್ಗೆ ಹೊಂದಿರುವ ಅಪಾರ ನಂಬಿಕೆ ಅವರು ತಮ್ಮ ವಚನೊಂದರಲ್ಲಿ ವ್ಯಕ್ತಪಡಿಸಿದ್ದಾರೆ. ಶರಣ ಸಂಪ್ರದಾಯದಲ್ಲಿ ಮೊಟ್ಟಮೊದಲು ಪತಿಯಿಂದ ಹೊಗಳಿಸಿಕೊಂಡ ಏಕೈಕ ಸತಿ ದುಗ್ಗಳೆ. ಅವಳಿಂದಲೇ ತಮ್ಮ ಒಲವಿನ ಬದುಕು ಎಂದಿದ್ದಾರೆ ದಾಸಿಮಾರ್ಯರು.

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥ.

ಸತಿ-ಪತಿಗಳಿಬ್ಬರ ಭಕ್ತಿ ಅವರ ಅಂತರಂಗದ ಶಕ್ತಿ. ಅವರು ಸಾಗಿಸುವ ಬದುಕಿನ ಯುಕ್ತಿ ಶಿವನ ಜಗತ್ತನ್ನೇ ಜಗ್ಗಿ ಭೂಮಿಗಿಳಿಸಿ ಕೈಲಾಸ ಮಾಡುವಲ್ಲಿ ಯಶಸ್ವಿಯಾದುದರಲ್ಲಿ ಸಂದೇಹವೇ ಇಲ್ಲ. ಆದುರಿಂದ ಅವರಿರುವ ಸ್ಥಳ ಪುಣ್ಯಕ್ಷೇತ್ರ, ವಾರಣಾಸಿಯಾಯಿತು.

ಸಂಸಾರವೆಂದರೆ ಎರಡು ವ್ಯಕ್ತಿಗಳ ಮಧ್ಯದಲ್ಲಿ ನಡೆಯುವ ಒಂದು ತಲೆಮಾರಿನ ನಿರಂತರ ಹೋರಾಟವೆಂದು ಸಮಾಜ ಶಾಸ್ತ್ರಜ್ಞರು ಹೇಳಿದಂತೆ ಸತಿ-ಪತಿಗಳಿಬ್ಬರೂ ಒಬ್ಬರಿಗೊಬ್ಬರೂ ಪ್ರೀತಿಸಿ ಪ್ರಾಂಜಲ ಮನಸಿನಿಂದ ವಿಮರ್ಶಿಸಿ, ವಿವರಿಸಿ ಒಬ್ಬರ ಮಾತನ್ನು ಒಬ್ಬರು ಆಲಂಗಿಸಿ, ಆದರಿಸಿ ಲೋಪದೋಷಗಳನ್ನು ಅರಿತು, ಮರೆತು ಮುನ್ನಡೆಯಬೇಕು.

ಗಂಡ ಹೆಂಡರ ಜಗಳ ಗಂದ ತೀಡಿದಾಂಗ
ಲಿಂಗಕ್ಕೆ ನೀರು ಎರೆದಾಂಗ | ಹಿರಿ ಹೊಳೆಯ
ಗಂಗಮ್ಮ ಸಾಗಿ ಹರದಂಗ ||

ಸತಿ-ಪತಿಗಳಿಬ್ಬರ ಅಭಿಪ್ರಾಯದಲ್ಲಿ ಅಡ್ಡಗೊಡೆ ಬೆಳೆದು ನನ್ನ ಮಾತೇ ಮೇಲು ಎಂದು ಒಬ್ಬರನೊಬ್ಬರು ದ್ವೇಷಿಸುತ್ತ ಬಾಳಿದರೆ, “ಎತ್ತು ಏರಿಗೆ ಕೋಣ ಕೆರೆಗೆ” ಎಳೆದಂತಾಗುವುದಿಲ್ಲವೇ? ಆಗ ಹಾಲಿನಂತ ಸಂಸಾರ ಹಾಲಾವಾಗಿ ಅಲ್ಲಿ ಏಳುವ ತೆರೆಗಳು ಕೋಲಾಹಲವಾಗಿ ಪರಿಣಮಿಸುತ್ತದೆ. ಅದೇ ಸತಿ-ಪತಿಗಳಿಬ್ಬರೂ ಒಮ್ಮನವಾಗಿ ಒಬ್ಬರ ವ್ಯಕ್ತಿತ್ವದಲ್ಲಿ ಮತ್ತೊಬ್ಬರ ಅಸ್ತಿತ್ವ ಲಿನವಾದಾಗ ಬಾಳು ಬಂಗಾರವಾಗುತ್ತದೆ. ಜೀವನ ಸುಂದರವಗುತ್ತದೆ. ಇಂತಹ ಸ್ವರ್ಗ ಸದೃಶ ಬಾಳಿನ ಜೋಡಿ ಕಂಡ ಮಹಾಕವಿ ದ. ರಾ. ಬೇಂದ್ರೆಯವರು ಕಂಡಿದ್ದು ಹೀಗೆ-

ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply