ಡಾ. ಈಶ್ವರಾನಂದ ಸ್ವಾಮೀಜಿ

ನಮ್ಮ ಸುತ್ತಮುತ್ತಲಿನ ಜನರನ್ನು ಗಮನಿಸಿದರೆ ಅವರು ತಮ್ಮದೇ ಆದ ಮಾಯಾ ಪ್ರಪಂಚ ಅಥವಾ ಕನಸಿನ ಲೋಕದಲ್ಲಿ ಸಂಚರಿಸುತ್ತ ತಮ್ಮದೇ ಆದ ಚಿಂತೆಯ ಸಂತೆಯಲ್ಲಿ ಕಾಲ ಕಳೆದು ಅದುವೇ ಜೀವನವೆಂದು ತಿಳಿದು ತಮ್ಮ ಬದುಕಿನುದ್ದಕ್ಕೂ ಕುಂಟುತ್ತ ಚಿಂತೆಯ ಸುಳಿಯಲ್ಲಿ ಸಿಲುಕಿ ಮನಸ್ಸಿಗೆ ನೆಮ್ಮದಿ ಇಲ್ಲದೆ ಅಯ್ಯೋ ! ಅಮ್ಮಾ ! ಎನ್ನುತ್ತ ಜೀವನದ ಭಾರ ಹೊತ್ತುಕೊಂಡು ಕಾಲ ಎಳೆಯುತ್ತ ನಡೆಯುತ್ತಾರೆ. ಅವರು ಎಲ್ಲಿಯೂ ಹೋದರೂ ನೆಮ್ಮದಿ ಕಾಣದೆ ಮನೆಗೆ ಹಿಂತಿರುಗುವರು, ಅದು ತಮ್ಮೊಳಗಿದೆ ಎಂದು ಅರಿಯದೆ. ಅಂತವರನ್ನು ಕಂಡು ಅಕ್ಕಮಹಾದೇವಿಯು ಬಹು ಸುಂದರವಾಗಿ ತಮ್ಮ ವಚನೊಂದರಲ್ಲಿ ಹೇಳಿರುವುದು ಕಾಣಬಹುದು.
ಹಗಲು ನಾಲ್ಕು ಜಾವ ಅಸನಕೆ ಕುದಿವರು
ಇರಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ,
ತಮ್ಮೊಳಗಿರ್ದ ಮಹಾಘನವನರಿಯರು ಚನ್ನಮಲ್ಲಿಕಾರ್ಜುನಾ.
ಅಂಬಿಗರ ಚೌಡಯ್ಯನವರು ಉಂಬುವ ಚಿಂತೆ, ಉಡುವ ಚಿಂತೆ, ಇಡುವ ಚಿಂತೆ, ಮಕ್ಕಳ ಚಿಂತೆ, ಬದುಕಿನ ಚಿಂತೆ ಹೀಗೆ ಹಲವಾರು ರೀತಿಯಾಗಿ ಈ ಮುಂದಿನ ವಚನದಲ್ಲಿ ವ್ಯಪಡಿಸಿದ್ದಾರೆ.
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡದಾರೆ ಮರಣದ ಚಿಂತೆ
ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು,
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ.
ಅದರಲ್ಲಿ ಕೆಲವರು ಅದರಿಂದ ಬಿಡುಗಡೆ ಬಯಸಿ ಗುರುಗಳ, ತತ್ತ್ವಜ್ಞಾನಿಗಳ ಹತ್ತಿರ ಬಂದು ತಮ್ಮ ಜೀವನದ ಸರ್ಥಕತೆಯ ಬಗ್ಗೆ ಚಿಂತನೆ ಮಾಡಿಕೊಂಡು ಚಿಂತೆಯಿಂದ ಬಿಡುಗಡೆಯಾಗಿರುವುದು ಕಾಣುತ್ತೇವೆ. ಅದಕ್ಕೊಂದು ದೃಷ್ಟಾಂತ ಇಲ್ಲಿ ಕಾಣಬಹುದು.
ಒಬ್ಬ ದೊಡ್ಡ ಸಿರಿವಂತನು ಒಬ್ಬ ತತ್ತ್ವಜ್ಞಾನಿ ಗುರುಗಳ ಹತ್ತಿರ ಹೋಗಿ ನಮಸ್ಕರಿಸಿ ಕುಳಿತುಕೊಂಡನು. ಅವನನ್ನು ಗುರುಗಳು ಆದರದಿಂದ ಸ್ವಾಗತಿಸಿದರು. ಸ್ವಲ್ಪ ಸಮಯದ ನಂತರ ಬಂದ ಕಾರಣವೇನು ? ಎಂದು ಗುರುಗಳು ಕೇಳಿದರು. “ಪೂಜ್ಯರೇ, ಬದುಕಿನ ಸಾರ್ಥಕತೆಯ ದಾರಿಯಾವುದು ? ಎಂದು ಧನಿಕ ಕೇಳಿದನು. ಆಗ ಗುರುಗಳು ಒಳ್ಳೆಯ ಪ್ರಶ್ನೆ. ನಮ್ಮ ಜೀವನವು ಸುಗಂಧಪೂರ್ಣ ಗುಲಾಬಿ ಹೂವಿನಂತಾಗಬೇಕು. ನಮಗೂ ನಮ್ಮ ಸುತ್ತಮುತ್ತಲಿನವರಿಗೂ ಅದು ಸಂತಸದ ಸುಗಂಧ ನೀಡಬೇಕು. ಅದು ಸಾರ್ಥಕ ಜೀವನ. ಆದರೆ ಗುರುಗಳೇ, ನನ್ನ ಬದುಕು ಮುಳ್ಳು ಕಂಟಿಯಿಂದ ಕೂಡಿದ ಕಾಡಿನಂತಾಗಿದೆಯಲ್ಲ. ಎಂದು ಧನಿಕ ತನ್ನ ವ್ಯಥೆಯನ್ನು ತೋಡಿಕೊಂಡನು. ಗುರುಗಳು ಚಿಂತೆಯಿಲ್ಲ, ಶಾಂತರ, ಸಂತರ, ಅರುಹಿನ ಮಹಂತರ ಸತ್ಸಂಗ ಮಾಡು. ಅವರಿಂದ ಸತ್ಯ ವಸ್ತುವಿನ ಶ್ರವಣ ಮಾಡು. ನಿನ್ನ ಜೀವನ ಪಾವನ ತಪೋವನದಂತಾಗುತ್ತದೆ. ಸುಗಂಧ ಭರಿತ ಸುಂದರ ಹೂಬನವಾಗುತ್ತದೆ. ಗುರುಗಳ ಈ ಸುಮಧುರ ನುಡಿಗಳ ಕೇಳುತ್ತಲೇ ಸಿರಿವಂತನಿಗೆ ಅರಿವಾಗಿ ಸಾರ್ಥಕ ಬದುಕಿನ ದರ್ಶನವಾಯಿತು.
ಹಾಗೆಯೇ ನಾವು ಸಹ ನಮ್ಮ ಜೀವನವು ಸುಖ ಸಂತೋಷ ನೆಮ್ಮದಿಯಿಂದ ಸಾಗಿಸಿಕೊಳ್ಳಲು ಮಹಾತ್ಮರ ಸಂಗದಲ್ಲಿರೋಣ. ಜನ್ಮದ ಸಾರ್ಥಕತೆಯನ್ನು ಅನುಭವಿಸೋಣ. ಆದುದರಿಂದ
ಸತ್ಸಂಗತ್ವೇ ನಿಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನಮುಕ್ತಿ ಎಂದಿದ್ದಾರೆ ಶಂಕರಾಚಾರ್ಯರು.
ಈ ಪ್ರಪಂಚದಲ್ಲಿ ನಾವು ಕಣ್ಣು ಮುಚ್ಚಿ ನಡೆಯುವುದಿಲ್ಲ. ಹೊರಗಣ್ಣನ್ನು ತೆರೆದು ಸೃಷ್ಟಿ ಸೊಬಗನ್ನು ನೋಡಬೇಕು. ಒಳಗಣ್ಣನ್ನು ತೆರೆದು ನಮ್ಮ ಅಂತರಂಗದಲ್ಲೇ ಇರುವ ಸೃಷ್ಟಿಕರ್ತನಾದ ಪರಮಸತ್ಯ ಪರಮಾತ್ಮನನ್ನು ಅರಿತು, ಅನುಭವಿಸಿ ಆನಂದಿಸಬೇಕು. ಹಾಗಲ್ಲದೇ ಬರೀ ಬಾಹ್ಯ ಸಿರಿಯ ಸಂಗ್ರಹದಲ್ಲಿ ತೊಡಗಿದರೆ ಜೀವನವು ನಿರರ್ಥಕವಾಗುತ್ತದೆ. ಈ ಕ್ಷಣವು ಸುಂದರವಾದರೆ, ಸವಿಯಾದರೆ ಮುಂದಿನ ಕ್ಷಣವೂ ಸುಂದರವಾಗುತ್ತದೆ. ಸವಿಯಾಗುತ್ತದೆ. ಅಷ್ಟೇ ಏಕೆ ಒಂದೊಂದು ಕ್ಷಣವನ್ನೂ ನಾವು ಸವಿಗೊಳಿಸುತ್ತ ಸಾಗಿದರೆ ಜೀವನವೇ ಜೇನಾಗುತ್ತದೆ. ಈ ಕ್ಷಣ ಮೈ ಮರೆತರೆ ಜೀವನವೇ ನೀರಸವಾಗುತ್ತದೆ. ಕಳೆದು ಹೋದ ಒಂದು ಕ್ಷಣವೂ ಮರಳಿ ಬರುವುದಿಲ್ಲ.
ಮನೆ-ಮಠ, ಧನ-ಕನಕ, ಮಳೆ-ಬೆಳೆ, ಗಾಳಿ-ಬೆಳಕು ಇವು ಹೊರಗಿನ ಸಿರಿ. ಶಾಂತಿ-ಸಮಾಧಾನ, ದಯೆ-ಧರ್ಮ, ತ್ಯಾಗ-ಸೇವೆ, ಮೌನ-ಧ್ಯಾನ, ಇವು ನಮ್ಮೊಳಗಿನ ಸಿರಿ. ಹೊರಗಿನ ಸಿರಿ ನೋಡುವುದಕ್ಕೆ ಹೊರಗಣ್ಣು ತೆರದಿರಲಿ. ಒಳಗಿನ ಸಿರಿ ಅನುಭವಿಸುವುದಕ್ಕೆ ಒಳಗಣ್ಣು ಅಥವಾ ಮನಸ್ಸಿನ ಕಣ್ಣು ತೆರೆದಿರಲಿ. ಅಂತರಂತ-ಬಹಿರಂಗ ಎರಡೂ ಭಗವಂತನೇ ಮಾಡಿದ್ದು ಅವುಗಳನ್ನು ಅನುಭವಿಸಲು, ಆನಂದಿಸಲು ನಾವು ಈ ಲೋಕಕ್ಕೆ ಬಂದೆವು ಅದನ್ನು ಮರೆತು ನಾವು ಬರೀ ಧನ, ಕನಕಾದಿಗಳ ಸಂಗ್ರಹದಲ್ಲೇ ತೊಡಗಿದರೆ ಕಣ್ಣು ಮುಚ್ಚಿ ಕತ್ತಲಲ್ಲಿ ಈ ಪ್ರಪಂಚದಲ್ಲಿ ಬೆಳಕೇ ಇಲ್ಲವೆಂದಂತಾಗುತ್ತದೆ.
ಒಬ್ಬ ಸಿರಿವಂತ ಅವನದೊಂದು ಹೂದೋಟ. ಅದನ್ನು ನೋಡಿಕೊಳ್ಳಲು ಒಬ್ಬ ಮಾಲಿಯನ್ನು ನಿಯಮಿಸಿದ್ದ. ಬಗೆ ಬಗೆಯ ಹೂವುಗಳನ್ನು ಬೆಳೆಸಿ ಮಾಲಿಯು ತೋಟವನ್ನು ನಂದನವನ ಮಾಡಿದ್ದ. ಅದನ್ನು ನೋಡಲು ಸಿರವಂತನಿಗೆ ಅನೇಕ ಸಲ ವಿನಂತಿಸಿದ್ದ. ಸಿರಿವಂತನು ಮಾತ್ರ ನನಗೆ ಸಮಯವಿಲ್ಲ ಎಂದು ಹೇಳುತ್ತಿದ್ದ. ಒಂದೇ ದಿನ ತೋಟಕ್ಕೆ ಬರಲಿಲ್ಲ. ಹೂವುಗಳನ್ನು ನೋಡಲಿಲ್ಲ. ಕೊನೆಗೆ ಒಂದು ದಿನ ಮಾಲಿಯು ‘ನಾನು ಕೇವಲ ಈ ತೋಟವನ್ನು ಕಾಯಲು ಬಂದವನಲ್ಲ’ ಎಂದು ಹೇಳಿ ಆ ಹೂದೋಟದ ಕೀಲಿ ಸಿರಿವಂತನ ಕೈಗೆ ಕೊಟ್ಟು ಹೋದ. ಮರುದಿನವೇ ಸಿರಿವಂತನು ಹೂದೋಟಕ್ಕೆ ಹೋದ. ತನ್ನ ಕಣ್ಣುಗಳನ್ನು ತಾನೇ ನಂಬಲಿಲ್ಲ. ಅಲ್ಲಿ ಒಂದು ಪುಟ್ಟ ಸ್ವರ್ಗವನ್ನೇ ಸೃಷ್ಟಮಾಡಿದ್ದ ಮಾಲಿ ಅದನ್ನು ನೋಡಿದ ಸಿರಿವಂತ ಇಂದು ನನ್ನ ಬದುಕು ಸಾರ್ಥಕವಾಯಿತು. ಎಂದು ಹೇಳಿ ಶಾಶ್ವತವಾಗಿ ಸ್ವರ್ಗದಲ್ಲಿ ನೆಲೆಸಿದ.
ನಮ್ಮ ಬದುಕೇ ಒಂದು ಹೂದೋಟ. ದೇವನ ಕರೆ ಬರುವ ಮೊದಲೇ ನಾವು ದೇವನ ಈ ಹೂದೋಟವನ್ನು ಅನುಭವಿಸಿ ಆನಂದಿಸಿದರೆ ಮಾತ್ರ ನಮ್ಮ ಬದುಕು ಸಾರ್ಥಕ.
ನಮ್ಮ ಋಷಿಮುನಿಗಳು, ಸಂತರು-ಶರಣರು ಬಹಿರಂಗದ ಸಿರಿಸಂಪದ ಅಷ್ಟಾಗಿ ಗಳಿಸಿದವರಲ್ಲ. ಆದರೆ ಅವರಷ್ಟು ಅಂತರಂಗದ ಸಿರಿಯನ್ನು ಗಳಿಸಿದವರು ಯಾರೂ ಇಲ್ಲ. ಇದನ್ನು ಬಸವಣ್ಣನವರು ತಮ್ಮ ವಚನದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.
ಮನೆ ನೋಡಾ ಬಡವರು, ಮನ ನೋಡಾ ಸಂಪನ್ನರು,
ಧನ ನೋಡಾ ಬಡವರು ಘನಮನ ಸಂಪನ್ನರು,
ಕೂಡಲಸಂಗನ ಶರಣರು ಕರುಳಿಲ್ಲದ ಕಲಿಗಳು ಆರಿಗೂ ಉಪಮಿಸಬಾರದು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply