ಲೇಖನ ಡಾ. ಈಶ್ವರಾನಂದ ಸ್ವಾಮೀಜಿ
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡ ಶರಣರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.
ರೈತನೊಬ್ಬ ಬೆಲೆ ಬಾಳುವ ಎತ್ತಿನ ಬಂಡಿ ಹೂಡಿಕೊಂಡು ದಿನನಿತ್ಯ ಮನೆಯಿಂದ ಗದ್ದೆಗೆ, ಗದ್ದೆಯಿಂದ ಮನೆಗೆ ಹೊಗುತ್ತಿದ್ದ. ಒಮ್ಮೆ ಬಂಡಿಯ ಚಕ್ರದ ಕೀಲು ಕಳಚಿ ಬಿದ್ದಿತು. ಅದನ್ನು ರೈತನು ಗಮನಿಸದರಿಂದ ಮಾರ್ಗ ಮಧ್ಯದಲ್ಲಿ ಬಂಡಿ ಮುಗುಚಿ ಬಿದ್ದು ತನ್ನ ಪ್ರಾಣ ಕಳೆದುಕೊಂಡನು. ಅಜಾಗೃತಿಯಿಂದ ಅನಾಹುತಕ್ಕೆ ಕಾರಣವಾಯಿತು. ಹಾಗೆಯೇ ಶರೀರವು ಸಹ ಬೆಲೆ ಬಾಳುವ ಒಂದು ಬಂಡಿ ಇದು ಭೂಮಿಯಲ್ಲಿ ನೂರು ವರ್ಷ ಕಳೆದು ಮೋಕ್ಷವೆಂಬ ಗುರಿ ಸೇರಲು ಮಾರ್ಗ ಮಧ್ಯದಲ್ಲಿ ಶರಣರ ಜ್ಞಾನಿಗಳ, ಮಹಾತ್ಮರ ಸಂದೇಶವೆನ್ನುವ ಕೀಲು ಅವಶ್ಯಕ ಎನ್ನುವರು ದೇವರ ದಾಸಿಮಯ್ಯನವರು. ಶರೀರ ಅಷ್ಟ ಮದಗಳಿಂದ ಕೂಡಿರುವುದರಿಂದ ತನ್ನ ಸಾಧನೆಯ ದಾರಿಯು ತಪ್ಪದಂತೆ ಆಗಾಗ ಶರಣರ ದಿವ್ಯವಾಣಿ ಎಂಬ ಕಡೆಗೀಲಿನ ಕಡೆಗೆ ಗಮನ ಹರಿಸಬೇಕು. ಇಲ್ಲವಾದರೆ ಶಬ್ದ ಸ್ಪರ್ಶಾದಿ ವಿಷಯಗಳ ಪಾಶಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
ಸಾಕ್ರೇಟಿಸ್ ಗ್ರೀಕ್ ದೇಶದ ತತ್ತ್ವಜ್ಞಾನಿ. ಅಲ್ಲಿಯೇ ನಾಲ್ಕು ಜನ ಮದಭರಿತ ಪಂಡಿತರಿದ್ದರು. ಒಮ್ಮೆ ಅವರು ತಮ್ಮ-ತಮ್ಮೊಳಗೆ ತಾವೇ ಶ್ರೇಷ್ಠ, ಪಂಡಿತರೆಂದು ವಾದಿಸತೊಡಗಿರು. ಅಲ್ಲಿಯ ದೇವತೆ ಅಶರೀರ ವಾಣಿಯ ಮೂಲಕ, “ಸಾಕೇಟಿಸ್ ನಿಮ್ಮೂರಿನ ಒಬ್ಬ ಸಾಮಾನ್ಯ ವ್ಯಕ್ತಿ, ಅವನೇ ಜ್ಞಾನಿ, ಅವನೇ ಸಂತ, ಅವನೇ ಪಂಡಿತ” ಎಂದು ಹೇಳಿದ್ದು ಆಶ್ಚರ್ಯಗೊಂಡು ಹುಡುಕುತ್ತ ಹೋದರು. ಸಾಕ್ರೇಟಿಸ್ ಹುಲ್ಲಿನಿಂದ ಮಾಡಿದ ಗುಡಿಸಿಲಿನಲ್ಲಿ ಅಧ್ಯಯನಕ್ಕೆ ತೊಡಗಿದ್ದಾನೆ. ನಾಲ್ಕು ಜನ ಪಂಡಿತರು ಅವನ ಹತ್ತಿರ ಹೋಗಿ ಈ ದೇಶದ ದೇವತೆ ನೀನೆ ಪಂಡಿತನೆಂದು ಹೇಳಿದೆ. ಅದಕ್ಕೆ ನೀನೇನು ಹೇಳ್ತಿಯಾ ? ಎಂದಾಗ ನಾನು ಪಂಡಿತನಲ್ಲ ಅದು ತಪ್ಪು ಹೇಳಿರಬಹುದು ಎಂದನು. ಮತ್ತೆ ನಾಲ್ವರು ಅಶರೀರ ವಾಣಿ ಹೇಳಿದ ಮೊದಲಿನ ಸ್ಥಳಕ್ಕೆ ಬಂದ ಕೇಳಿದರು. ಅವನು ಪಂಡಿತನಲ್ವಂತೆ ನಾವೇ ಪಂಡಿತರೆಂದರು. ಆಗ ದೇವತೆ ಅದಕ್ಕೆಂತಲೇ ಅವನು ಜ್ಞಾನಿ, ಪಂಡಿತ. ಜ್ಞಾನಿಯಾದವನು ತಾನು ಜ್ಞಾನಿ, ಪಂಡಿತ ಎಂದು ಹೇಳಿಕೊಳ್ಳುವುದಿಲ್ಲ. ಎಂದು ತಿಳಿಸಿದಾಗ ಮದದಿಂದ ತಮ್ಮ ತಪ್ಪಿನ ಅರಿವಾಗಿ ನಾಲ್ವರು ಸಾಕ್ರೇಟಿಸ್ನ ಹತ್ತಿರ ಹೋಗಿ ಕ್ಷಮೆ ಕೇಳಿ, ತಮ್ಮ ದೇಹೇಂದ್ರಿಗಳಿಗೆ ಅವನ ದಿವ್ಯವಾಣಿಯಂಬ ಕಡೆಗೀಲು ಹಾಕಿಕೊಂಡರು. ಆಗ ಮಾತ್ರ ಅವರು ನಿಜವಾದ ಪಂಡಿತ, ಜ್ಞಾನಿಗಳಾಗಿ ಮೋಕ್ಷ ಪಡೆದರು.