ಕಲಬುರಗಿ- ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಕೊರೋನಾ ವೈರಸ್ (ಕೋವಿಡ್-19) ಹಾಗೂ ರೂಪಾಂತರ ಕೊರೋನಾ ವೈರಸ್ ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ನಗರದಾದ್ಯಂತಹ 2020ರ ಡಿಸೆಂಬರ್ 31ರ ರಾತ್ರಿ 10.30 ಗಂಟೆಯಿಂದ 2021ರ ಜನವರಿ 1ರ ಬೆಳಗಿನ 6.30 ಗಂಟೆಯವರೆಗೆ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಎನ್. ಸತೀಶಕುಮಾರ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ. ಪಬ್, ಬಾರ್, ರೆಸ್ಟೊರೆಂಟ್‍ಗಳು ನಿಗದಿಪಡಿಸಿದ ಸಮಯಕ್ಕೆ ಬಂದ್ ಮಾಡಬೇಕು. ಡಿ.ಜೆ. (ಸೌಂಡ್ ಸಿಸ್ಟಮ್) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ಪಟಾಕಿಗಳು ಹಚ್ಚುವಂತಿಲ್ಲ. ವಿಶೇಷ ಡಿ.ಜೆ. ವ್ಯವಸ್ಥೆ ಮಾಡುವಂತಿಲ್ಲ. ವೀಲಿಂಗ್ ಡ್ರ್ಯಾಗ್ ರೇಸ್‍ಗೆ ಕಡಿವಾಣ ಹಾಕಲಾಗಿದೆ. ಹೊಟೇಲ್, ಬಾರ್, ಪಬ್‍ಗಳು ಈಗಾಗಲೇ ಸರ್ಕಾರ ಜಾರಿಗೊಳಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.

ಅದೇ ರೀತಿ ಹೊಟೇಲ್, ಬಾರ್, ಪಬ್, ರೆಸ್ಟೊರೆಂಟ್ ಮುಂತಾದ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಕೈಗೊಳ್ಳಬೇಕಾದರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಮಾಹಿತಿ ನೀಡಬೇಕು. ಸರ್ಕಾರದ ನೀಡಲಾದ ಕೋವಿಡ್-19ರ ಮಾರ್ಗಸೂಚಿ ಕ್ರಮಗಳನ್ನು ಉಲ್ಲಂಘಿಸಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 51 ರಿಂದ 60ರನ್ವಯ, ಸಾಂಕ್ರಾಮಿಕ ರೋಗ ಕಾಯ್ದೆ ಜೊತೆಗೆ ಐ.ಪಿ.ಸಿ. ಸೆಕ್ಷನ್ 188 ಹಾಗೂ ಇತರೆ ಸಂಬಂಧಪಟ್ಟ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

About Author

Priya Bot

Leave A Reply