ಆತ್ಮಸ್ತುತಿ ಪರನಿಂದೆ ಬೇಡ

0

ಡಾ. ಈಶ್ವರಾನಂದ ಸ್ವಾಮೀಜಿ

ಕಳಬೇಡ ಕೊಲಬೇಡ ಹುಸಿಯು ನುಡಿಯಲುಬೇಡ,
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ ಇದಿರು ಹಳಿಯಲುಬೇಡ,
ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ
ಇದೆ ನಮ್ಮ ಕೂಡಲಸಂಗಮ ದೇವರ ಒಲಿಸುವ ಪರಿ.
ಎಂಬ ಬಸವಣ್ಣನವರ ಈ ಮೇಲಿನ ವಚನದಲ್ಲಿ ಪ್ರಸ್ತುತ ಮೇಲಿನ ತಲೆ ಬರಹವು ಆರನೆಯದಾಗಿದೆ. ಅದು ತನ್ನ ಬಣ್ಣಿಸಬೇಡ. ತನ್ನನ್ನು ಕುರಿತು (ವರ್ಣನೆ) ಬಣ್ಣನೆ ಅಂದರೆ ತನ್ನ ದೇಹ/ಕುಲ/ಕಾರ್ಯ/ಆಸ್ತಿ/ಪದವಿ/ಅಧಿಕಾರ ಮುಂತಾದ ಪ್ರತಿಷ್ಠೆಗಳ ಕುರಿತು ಬಣ್ಣಿಸಿಕೊಳ್ಳುವುದೇ ತನ್ನ ಬಣ್ಣನೆ. ಅಂದರೆ ಕೃತಕ ಬಣ್ಣ ಲೇಪಿಸಿ ಹೇಳುವುದು. ಎಲ್ಲರೂ ತನ್ನ ಕಡೆ ನೋಡಬೇಕೆಂಬುದು ಮಾನವನ ಸಾಮನ್ಯ ಸ್ವಭಾವ. ತನ್ನ ಕಡೆ ಗಮನ ಕಡಿಮೆಯಾದರೆ ಮಗು ಸಹ ಅಳುವುದು. ತನ್ನ ಬಣ್ಣನೆಯೆಂದರೆ ಬಡಾಯಿ ಕೊಚಿಕೊಳ್ಳುವಿಕೆ ಎಂದರ್ಥ.

ತನ್ನ ಸ್ತುತಿ ಕೇಳಬಯಸುವವರು ಸಾಮಾನ್ಯರು. ತನ್ನ ದೋಷಗಳನ್ನು ಅವಲೋಕಿಸಿಕೊಂಡು ತಿದ್ದಿಕೊಳ್ಳುವವರು ಮಾಹಾತ್ಮರು. ಅವಲೋಕನವಿಲ್ಲದ ಬದುಕು ಡೊಂಬರಾಟ. ಮಾನವನು ತನ್ನ ಬದುಕಿನ ಶೇ.80ರಷ್ಟು ಇತರರಿಗೆ ತೋರಿಸಲೆಂದೆ ವ್ಯರ್ಥವಾಗಿ ಜೀವನ ಕಳೆಯುತ್ತಾನೆ. ಕೇವಲ ಶೇ.20ರಷ್ಟು ತನಗಾಗಿ ಬದುಕು ಅವನದಾಗಿರುತ್ತದೆ. ಉಟವಿಲ್ಲದೆ ಬದುಕಬಹುದು. ಆದರೆ ಹೊಗಳಿಕೆ ಇಲ್ಲದೆ ಬದುಕಲು ಸಾಧ್ಯವಿಲ್ಲದಂತಿದೆ ಅವನ ಬದುಕು.

ಹೊಯೊದವರೆನ್ನ ಹೊರೆದವರೆಂಬೆ ಬಯದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ ಆಳಿಗೊಂಡವರೆನ್ನ ಆಳ್ದರೆಂಬೆ,
ಜರೆದವರೆನ್ನ ಜನ್ಮ ಬಂಧುಗಳೆಂಬೆ ಹೊಗಳಿದವರೆನ್ನ ಹೊನ್ನ
ಶೂಲದಲ್ಲಿಕ್ಕಿದರೆಂಬೆ ಕೂಡಲಸಂಗಮದೇವಾ.
ತೋರಿಸಿಕೊಳ್ಳಲೆಂದೇ ಆಡಂಬರ ಬೇಡ. ಸರಳ ಜೀವನ, ಉನ್ನತ ವಿಚಾರಗಳು ಬದುಕಿಗೆ ಭೂಷಣ. ಆರೋಗ್ಯಪೂರ್ಣರಾಗಿ ಬಾಳಲು ಶಿಸ್ತು-ಸಹಜತೆ ಅಳವಡಿಸಿಕೊಳ್ಳಬೇಕು. ಬಣ್ಣನೆಯಗಾಗಿ ಅಲ್ಲ. ಬಣ್ಣನೆಯೊಂದು ವೃಣ ಅಥವಾ ಹುಣ್ಣು. ಇದು ಅಂತಿಂಥ ಹುಣ್ಣಲ್ಲ. ತುರಿಕೆಯ ಹುಣ್ಣು. ಸುಮ್ಮನಿದ್ದರೆ ತಾಳಲಾಗದು. ತುರಿಸಿದರೆ ಚರ್ಮ ಸುಲಿದರೂ ಇನ್ನೂ ತುರಿಸಿಕೊಳ್ಳಬೇಕೆನಿಸುವುದು. ಪರಿಹಾಸ್ಯಕ್ಕೊಳಪಡುವ ಸಂದರ್ಭ ಅದು. ಸ್ವಸ್ತುತಿ-ಶರಣರಿಗೆ ಸಲ್ಲದ ನಡೆ. ಹೊಗಳಿಕೆ ಎಂಬುದು ಹೊನ್ನ ಶೂಲ ಹೊಗಳಿ ಹೊಗಳಿ ಹೊನ್ನ ಶೂಲದಲ್ಲಿ ಇಕ್ಕದಿರಯ್ಯ. ಎನ್ನ ಹೊಗಳಿಕೆಗೆ ಅಡ್ಡಾ ಬಾರಾ ಎಂಬ ಬಸವೇಶ್ವರರ ವಾಣಿ ನಮಗೆ ಮಾರ್ಗದರ್ಶಿಯಾಗಬುದು. ಹಾಗೆಯೇ ವಂದನೆಗೆ ನಿಲ್ಲಬರದು. ನಿಂದೆಗೆ ಅಂಜಿ ಓಡಿ ಹೋಗಬಾರದು. ಹೊಗಳಿಕೆ ಮತ್ತು ತೆಗಳಿಕೆಗಳಿಂದ ವಿಮುಖರಾಗವುದು ಆತ್ಮವಿಕಾಸಕ್ಕೆ ದಾರಿ.

ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
ಮುತ್ತಿನ ಬಲೆಯಾದಡೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆ ಹೊಯ್ದಡೆ ಸಾಯದಿರ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ
ಜನನ ಮರಣ ಬಿಡುವುದೆ ಚನ್ನಮಲ್ಲಿಕಾರ್ಜುನ?
ಅಕ್ಕಮಾಹಾದೇವಿಯ ವಚನದಂತೆ ಆತ್ಮಸ್ತುತಿ-ಪರನಿಂದೆ ಕೇಳಬಾರದು. ಆತ್ಮಸ್ತುತಿಗೆ ಹಪಹಪಿಸಬಾರದು. ಸಾಗರದ ಮುಂದೆ ಕೊಡ ಬಡಬಡಿಸಿದಂತೆ ಆತ್ಮ ಸ್ತುತಿ ಎಂಬುದು ವ್ಯಕ್ತಿಯ ಪ್ರಗತಿಗೆ ಮಾರಕ. ಭೂಮಿಯಿಂದ ಮೊಳಕೆ ಹೊರಬರುವಾಗ ತಮಟೆ-ಜಾಗಟೆಗಳ ಶಬ್ದವಿಲ್ಲ. ಸೂರ್ಯಚಂದ್ರರು ಮೂಡುವಾಗ ಎನೇನೂ ಸದ್ದು ಗದ್ದಲವಿಲ್ಲ. ಹಾಗೆ ಮಾನವನ ಬದುಕು ಆಗಬೇಕು.

ತನ್ನ ಬಣ್ಣನೆಯಿಂದ ದುಃಖವೇ ಹೊರತು ಸುಖವಿಲ್ಲ. ಬಣ್ಣನೆ ವಿನಾಶದ ಅಂಚಿಗೆ ತಳ್ಳುವುದು. ಇದರದಿಂದ ಮುಕ್ತರಗಲು 10ರೊಳಗೆ ಹನ್ನೊಂದಾಗಿ ಬದುಕಬೇಕು. ತಾನೇ ಅಧಿಕನೆಂದು ಬೀಗಬಾರದು. ಅಹಂ ಪಡಬಾರದು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬ ಸತ್ಯ ವಾಕ್ಯ ಬಾಳಲ್ಲಿ ಅಳವಡಿಸಿಕೊಳ್ಳಬೇಕು. ಅದ್ಭುತವಾದ ಪ್ರಕñತಿಯನ್ನು ನೋಡಿ ತಾನೇನು ಮಹಾವೆಂಬ ಭಾವ ತಾಳಿ ತನ್ನ ಬಣ್ಣಿಸಿಕೊಳ್ಳುವುದನ್ನು ಬಿಡಬೇಕು. ಇದು ವ್ಯಕ್ತಿ ವಿಕಾಸಕ್ಕೆ ನಾಂದಿಯಾಗಲಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply