ಕಲಬುರಗಿ- ತಂತ್ರಾಂಶ ಬಳಸಿಕೊಂಡು ಮುನ್ನಡೆದಾಗ ಮಾತ್ರ ಕನ್ನಡ ಉಳಿಸಿ-ಬೆಳೆಸಲು ಸಾಧ್ಯ ಎಂದು ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಸೋಮವಾರ ನಡೆದ `ಕವಿರಾಜಮಾರ್ಗ ಪರಿಸರದ ಭಾಷೆ ಮತ್ತು ಸಂಸ್ಕೃತಿ’ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಹೀಗೆ ಹರಿದು ಹಂಚಿಹೋಗಿರುವ ಮನೋಭಾವ, ಮನಸ್ಥಿತಿಯನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದರು.
ಕರ್ನಾಟಕ ಸಾರಸ್ವತ ಲೋಕ ಮತ್ತು ಸಾಂಸ್ಕತಿಕ ಕ್ಷೇತ್ರಕ್ಕೆ `ಆದ್ಯರು’ ಎಂದರೆ ಕವಿರಾಜಮಾರ್ಗ ಪರಿಸರದ ಕಲ್ಯಾಣದ ನೆಲ. ಕನ್ನಡಕ್ಕೆ ಕಿರೀಟಪ್ರಾಯದಂತೆ. ಅತ್ಯಂತ ಶ್ರೀಮಂತವಾಗಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಅರ್ಥಮಾಡಿಕೊಂಡು `ಭವಿಷ್ಯ’ದ ಕನ್ನಡ ಕಟ್ಟಬೇಕಾಗಿದೆ ಎಂದು ತಿಳಿಸಿದರು. ಒಂದು ಪ್ರದೇಶದ ಅಭಿವೃದ್ಧಿಯನ್ನು ಕೇವಲ ರಸ್ತೆ ಮತ್ತು ಕಟ್ಟಡಗಳಿಂದ ಅಳೆಯಲು ಬರುವುದಿಲ್ಲ. ಅದು ನಮ್ಮ ಕನ್ನಡ ಸಂಸ್ಕೃತಿ, ಪರಂಪರೆಯಿಂದ ಮಾತ್ರ ಸಾಧ್ಯ ಎಂದ ಅವರು, ರಾಷ್ಟ್ರಕೂಟರ ಕಾಲದ ಕವಿರಾಜಮಾರ್ಗಕಾರ ಇಡೀ ಕರ್ನಾಟಕದ ಸಾಹಿತ್ಯ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ ಇತರ ಭಾಗದವರಿಗೆ ಹೆದ್ದಾರಿಯಾಗಿದೆ ಎಂದು ಹೇಳಿದರು.