ಗುಣವೇ ನಿಜ ಸೌಂದರ್ಯವರ್ಧಕ

0

ಡಾ. ಈಶ್ವರಾನಂದ ಸ್ವಾಮೀಜಿ

ಅಷ್ಟಮದಗಳಲ್ಲಿ ಒಂದು ರೂಪಮದ. ಇದು ಬಲು ಭಯಂಕರ. ತಾನು ಸುಂದರರಾಗಿ ಕಾಣಬೇಕೆಂಬುದು ಪ್ರತಿಯೊಬ್ಬರಿಗು ಇರುತ್ತದೆ. ಇದರ ಹುಚ್ಚು ಮಗು-ಮುದುಕ-ಪುರಾಣಿಕ-ಪುರೋಹಿತ ಮೊದಲಾದ ಯಾರಿಗೂ ಬಿಟ್ಟಿಲ್ಲ. ಇದರಲ್ಲಿ ಮಹಿಳೆಯ ಸೌಂದರ್ಯ ಪ್ರಜ್ಞೆಯಂತೂ ಬಣ್ಣಿಸಲಾಗದು. ಸೌಂದರ್ಯ ಮೆಚ್ಚಬೇಕು ಆರಾಧಿಸಬೇಕು, ಆನಂದಿಸಬೇಕು. ಆದರೆ ಅಹಂಕಾರ ಪಡಬಾರದು. ಹಾಗೆಯೇ ಇನ್ನೊಬ್ಬರ ರೂಪಕ್ಕೆ ಅಸೂಯೆ ಪಡಬಾರದು. ಹೊಲಿಸಿಕೊಳ್ಳಬಾರದು ಅದರಿಂದ ನಾವು ಅವರಂತೆ, ಅವರು ನಮ್ಮಂತೆ ಆಗಲು ಸಾಧ್ಯವಿಲ್ಲ ಎಂದಿದ್ದಾರೆ ಬಸವಣ್ಣನವರು. “ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೇ, ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೆ?” ಎಂಬ ಮಾತು ಅಕ್ಷರಸಃ ಸತ್ಯವೆನಿಸುತ್ತದೆ.
ಶರೀರದ ಅಂಗಸೌಷ್ಟವ್ಯ ಅದರ ರೂಪು ಎತ್ತರ, ಗಾತ್ರ, ಮೊದಲಾದವುಗಳು, ತಂದೆ, ತಾಯಿ, ಮತ್ತು ದೇವರಿತ್ತ ಕಾಣಿಕೆಗಳಾಗಿವೆ. ಅದರಲ್ಲಿ ತನ್ನದೇನು ಪರಿಶ್ರಮವಿಲ್ಲ.

ತನ್ನದಲ್ಲದೆ ಇರುವ ಕಾಣಿಕೆಗೆ ಅಹಂಕಾರ ಏಕೆ? ತಾನು ಇದಕ್ಕಿಂತ ಹೆಚ್ಚು ಸುಂದರವಾಗಿ ಕಾಣಬೇಕೆಂಬ ಬಯಕೆ ತಣಿಸಲು ಬಗೆಬಗೆಯ ಸೌಂದರ್ಯ ವರ್ಧಕಗಳು ಮಾರುಕಟ್ಟೆಯಿಂದ ತಂದು ಉಪಯೋಗಿಸಿಕೊಂಡು ನಂತರ ಮುಖ ಯಾರೂ ನೋಡದಂತೆ ಮಾಡಿಕೊಳ್ಳುತ್ತೇವೆ. ಊಟ, ತಿಂಡಿಗಿಂತ ಅಲಂಕಾರಕ್ಕೆ ಹೆಚ್ಚಿನ ಖರ್ಚು ಮಾಡುತ್ತೇವೆ. ಸೌಂದರ್ಯ ವರ್ಧಕಗಳ ಜಾಹಿರಾತುಗಳ ಬಲೆಗೆ ಬಿದ್ದು ಸಮಯ ಹಣ ವ್ಯರ್ಥ ಮಾಡಿಕೊಳ್ಳುತ್ತೇವೆ. ಉದಾಹರಣೆಗೆ – ವಿಶ್ವವಿಖ್ಯಾತ ನೃತ್ಯಪಟು ಮೈಕೆಲ್ ಜಾಕ್ಸನ್, ತನ್ನ ಕಪ್ಪು ವರ್ಣದ ಚರ್ಮ ಬಿಳಿ ಬಣ್ಣಕ್ಕೆ ತಿರುಗಿಸಲು ಸಿಕ್ಕಾಪಟ್ಟೆ ಸೌಂದರ್ಯ ವರ್ಧಕಗಳನ್ನು ಬಳಸಿ ಮತ್ತು ಔಷಧ ಸೇವಿಸಿ ಖಿನ್ನನಾಗಿ ಸಾವಿಗಿಡಾದ. ರೂಪದ ಹುಚ್ಚು ಎಂತೆಂಥವರನ್ನೂ ಮರುಳುಗೊಳಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಭೌತಿಕ ಸೌಂದರ್ಯವೇ ಜೀವನವಲ್ಲ. ರೂಪದ ಆಯುಷ್ಯ ಅಲ್ಪ. ವಯಸ್ಸಾದಂತೆ ಚರ್ಮ ಸುಕ್ಕುಗಟ್ಟಿ ಮದಕ್ಕೆ ಕಾರಣವಾದ ರೂಪ ಕೆಡುತ್ತ ಹೋಗುತ್ತದೆ. ಶರಣರು ಮಹತ್ವ ಕೊಟ್ಟಿದ್ದು ರೂಪಕ್ಕಲ್ಲ ಗುಣಕ್ಕೆ, ಒಳಗಿನ ಸೌಂದರ್ಯಕ್ಕೆ. ಎಂಬುವುದನ್ನು ಕಾಣಬಹುದು.

ಮರವಿದ್ದು ಫಲವೇನು ನೆರಳಿಲ್ಲನ್ನಕ್ಕ?
ಹಸುವಿದ್ದು ಫಲವೇನು ಹಯನವಿಲ್ಲದನ್ನಕ್ಕ?
ರೂಪವಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಧನವಿದ್ದು ಫಲವದ್ದು ಧರ್ಮವಿಲ್ಲದನ್ನಕ್ಕ?
ಬೋನವಿದ್ದು ಫಲವೇನು ಅಲಗವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ.?
ಎಂಬ ವೈರಾಗ್ಯನಿಧಿ ಅಕ್ಕಮಹಾದೇವಿಯ ವಚನದಲ್ಲಿ ನಾವು ಗಮನಿಸಬೇಕಾದ ಅಂಶಗಳು ಸಾಕಷ್ಟು ಇದ್ದರೂ. “ರೂಪವಿದ್ದು ಫಲವೇನು ಗುಣವಿಲ್ಲನ್ನಕ್ಕ” ಎಂಬ ಪ್ರಧಾನವಾದ ವಾಕ್ಯ. ವ್ಯಕ್ತಿಯ ಸೌಂದರ್ಯಕ್ಕೆ ಬೇಕಾದ ಅಂಶ ಎಂದರೆ ನಮ್ಮಲ್ಲಿರುವ ಉತ್ತಮ ಗುಣಗಳು. ಅದರಿಂದ ನಮ್ಮ ಸೌಂದರ್ಯ ಹೇಚ್ಚಿತ್ತದೆ ಎಂಬ ಭಾವ ಇಲ್ಲಿ ಕಾಣಬಹುದು.

ನೀರಿಗೆ ನೈದಿಲೆಯೆ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ
ನಮ್ಮ ಕೂಡಲ ಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ.

ಎಂದು ಬಸವಣ್ಣನವರು ಸಹ ತಮ್ಮ ವಚನದಲ್ಲಿಯೂ ಗುಣವೇ ಸೌಂದರ್ಯ, ಶೃಂಗಾರವಾಗಿದೆ ಎಂದಿದ್ದಾರೆ. ಶರಣರ “ತನು ಸುಂದರವಾಗಿದ್ದು, ಮನ ಮಲಿನವಾಗಿದ್ದರೇನು ಪ್ರಯೋಜನ?” ಎಂಬ ವಾಕ್ಯವನ್ನು ಗಮನಿಸಿದರೆ ಇನ್ನೂ ಆಳಕ್ಕೆ ಇಳಿಯುವಂತಾಗಿದೆ. ಕೇವಲ ತನು ಅಲ್ಲ ಮನವು ಸಹ ಸುಂದರವಾಗಿರಬೇಕು. ಅದು ಉತ್ತಮೋತ್ತಮ ಗುಣಗಳಿಂದ ಸಾಧ್ಯ. ಬಣ್ಣಕ್ಕೆ ಬೆಲೆ ಕಟ್ಟಿಲ್ಲ ಬಲ್ಲವರು. ಒಳಮೈ ಸುಂದರವಾಗಿರಬೇಕೆಂದರು. ಸುಂದರ ಮುಖಕ್ಕಿಂತ, ಸುಂದರ ಹೃಧಯ ಮುಖ್ಯ. ರೂಪ ಹಣ್ಣಿನ ಸಿಪ್ಪೆಯಾದರೆ, ಗುಣ ಒಳಗಿನ ತನಿರಸ. ಸದ್ಗುಣವಂತರು ಸರ್ವರಿಗೂ ಪ್ರಿಯರಾಗಿರುತ್ತಾರೆ. ಸೌಂದರ್ಯ ಹೆಚ್ಚಿಸಿಕೊಳ್ಳುವ ಉಪಾಯವೇನು? ತನ್ನೊಳಗೆ ತಾನು ಇಣುಕಿ ನೋಡಿ ತನ್ನ ಓರೆ ಕೋರೆಗಳನ್ನು ತಿದ್ದಿಕೊಂಡರೆ ಹೆಚ್ಚು ಸುಂದರವಾಗಿ ಕಾಣಬಹುದು. ದುರ್ವಿವಿಚಾರ, ದುಷ್ಕøತ್ಯ ಮತ್ತು ಕೆಟ್ಟ ಮಾತುಗಳಿಂದ ಮನಸ್ಸು ವಿಕಾರವಾಗಿ ಮುಖ ವಿಕಾರವಾಗುವುದು.

ಮನ ವಿಕಾರವಾದಾರೆ ರಕ್ತ ನಾಳಗಳು ಸಂಕುಚಿತಗೊಂಡು ಮುಖದಲ್ಲಿ ಗೆರೆಗಳು ಮೂಡಿ ರೂಪ ಕೆಡಿಸುವುದು. ಕೋಮಲತೆ ಮಾಯವಾಗಿ ಒರಟುತನ ಎದ್ದು ಕಾಣುವುದು. ಸದ್ವಿಚಾರ, ಸದಾಚಾರ, ಸತ್ಯದ ಮಾತುಗಳಿಂದ ಮುಖ ಪ್ರಸನ್ನವಾಗುವುದು. ಮುಖದಲ್ಲಿ ಸಹಜ ಸೌಂದರ್ಯ ಮೂಡಬೇಕಾದರೆ ಮಾತು ಮನಸ್ಸಿನ ಜೊತೆ ಮೈ ಬೆವರಬೇಕು. “ಅಂಗಕ್ಕೆ ಆಚಾರವೇ ಚೆಲವು” “ಮನಸ್ಸಿಗೆ ಮಹಾನುಭಾವರೆ ಚೆಲುವು” ಮೈಮುರಿದು ದುಡಿಯುವುದು ಸೌಂದರ್ಯದ ಗುಟ್ಟು. “ಕಾಯಕವೇ ನಿಜವಾದ ಸೌಂದರ್ಯವರ್ಧಕ”. ಕಾಯಕದಿಂದ ಮೈಮನಗಳು ಅರಳುವವು ಮುಖ ಹೊಳೆಯುವುದು. ಖ್ಯಾತನಟಿ ಮನಿಷಾ ಕೋಯಿರಾಲ್ ಕ್ಯಾನ್ಸರ್ ಪೀಡಿತಳಾಗಿ ಮರಣ ಶಯ್ಯೆಯಲ್ಲಿರುವಾಗ, ನಾನು ಸುಂದರಿ, ಯಾರನ್ನಾದರೂ ನಾನು ಗೆಲ್ಲಬಹುದೆಂಬ ಅಹಂಕಾರ ಅಳಿಯಿತು. ಮನಿಷಾ ಕೋಯಿರಾಲ್ ನನ್ನಿಂದ ಓಡಿ ಬಿಟ್ಟಳು. ನಾನು ಸಾಯುತ್ತಿರುವೆ ಎಂದು ಪತ್ರ ಬರೆದಿಟ್ಟಳು. ಆಕೆಗೆ ರೂಪ ನಶ್ವರವೆಂದು ಕೊನೆಯ ಗಳಿಗೆಗೆ ನೆನಪಾಗುವುದು. ಅದು ಮೊದಲ ಗಳಿಗೆಗೆ ಗೊತ್ತಾಗಬೇಕಿತ್ತು. ಗಗನ ಮೋಡಗಳಂತೆ ಕರಗುವ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಕೆಡದೆ, ದೃಢವಲ್ಲ ಈ ಶರೀರದೊಳಗೆ ಎಂದೆಂದೂ ಕೆಡದ ಪರಮ ಚೈತನ್ಯವಿದೆ. ಅದನ್ನೇ ನಂಬಿ, ಅದನ್ನೇ ಆರಾಧಿಸೋಣ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply