ಹುಬ್ಬಳ್ಳಿ- ದುಡಿಯುವ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡುವುದು ನಮ್ಮ ಕರ್ತವ್ಯವಾಗಿದೆ. ಇದರೊಂದಿಗೆ ನಿವೃತ್ತ ನೌಕರರಿಗೆ ಕೊಡಬೇಕಾ ಆರ್ಥಿಕ ಸೌಲತ್ತುಗಳನ್ನು ಕೊಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ವಿ.ಎಸ್.ಪಾಟೀಲ ಹೇಳಿದರು.

ಹುಬ್ಬಳ್ಳಿಯ  ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ  ಗ್ರಾಮಾಂತರ 2ನೇ ಘಟಕದಲ್ಲಿ ಸೋಮವಾರ ನಡೆದ ಇಂಧನ ಉಳಿತಾಯ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಸ್ಥೆಯ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಪಡೆಯಲು ಪ್ರತಿಯೊಬ್ಬರ ಶ್ರಮ ಅಗತ್ಯವಾಗಿದೆ. ಸಂಸ್ಥೆಗೆ ಆದಾಯ ತರುವ, ವೆಚ್ಚ ನಿಯಂತ್ರಣಕ್ಕೆ ಹಾಗೂ ಸಂಸ್ಥೆಯ ಪ್ರಗತಿಗೆ ನೇರ ಕಾರಣವಾಗಿರುವ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ “ಸಂಸ್ಥೆ ನಮ್ಮದು” ಎನ್ನುವ ಅಭಿಮಾನ ಬೆಳೆಸಿಕೊಂಡು ಕಾರ್ಯನಿರ್ವಹಿಸಬೇಕು. ಇವರ ಕಾರ್ಯಗಳಿಗೆ ಇತರೆ ಸಿಬ್ಬಂದಿ, ಅಧಿಕಾರಿಗಳು ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು. ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಆರ್ಥಿಕವಾಗಿ ಪ್ರಗತಿಯತ್ತ ಮುಂದೋಗುವುದು ಅಗತ್ಯವಾಗಿದೆ. ಚಾಲಕ, ನಿರ್ವಾಹಕರು ಸಂಸ್ಥೆಯ ಬಸ್ಸುಗಳನ್ನು ತಮ್ಮ ಸ್ವಂತ ವಾಹನದಂತೆ ಕಾಣಬೇಕು. ಸುರಕ್ಷತೆ ಚಾಲನೆಯಿಂದ ಸಂಸ್ಥೆಗೆ ಆಗುತ್ತಿರುವ ಅಪಘಾತ ಪರಿಹಾರ ಪಾವತಿ ಮಾಡುವ ಭಾರ ಕಡಿಮೆ ಮಾಡಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ, ಸಾರಿಗೆ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರಾದ ಸಿದ್ದೇಶ್ವರ ಮಠದ, ಅಶೋಕ ಮಾಳಗಿ, ವಿಭಾಗದ ಅಧಿಕಾರಿಗಳಾದ ಕಿರಣಕುಮಾರ ಬಸಾಪುರ, ಸುನೀಲ ವಾಡೇಕರ, ನಾಗಮಣಿ ಭೋವಿ, ವೈ.ಎಂ.ಶಿವರಡ್ಡಿ, ಅಶೋಕ ಡೆಂಗಿ, ರೋಹಿಣಿ ಬೇವಿನಕಟ್ಟಿ ಮತ್ತಿತರರು ಇದ್ದರು.

About Author

Priya Bot

Leave A Reply