ಅರಿವಿನ ರವಿಯ ಉದಯ

0

ಡಾ. ಈಶ್ವರಾನಂದ ಸ್ವಾಮೀಜಿ.

ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ.
ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ
ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.

ನಿರ್ಗುಣ, ನಿರಾಕಾರ, ಸರ್ವಜ್ಞನಾದ ರಾಮನಾಥನನ್ನು ಅಜ್ಞಾನಿಗಳು ಅರಿಯರು. ಅವನನ್ನು ಅರಿತ ದಾಸಿಮಯ್ಯನವರು ಮಾಂಸದಲ್ಲಿ ಅಡಗಿದ ಹಾಲಿನಂತೆ, ಹಾಲಿನೊಳಗಿರುವ ತುಪ್ಪದಂತೆ, ರಾಮನಾಥನು ಪ್ರಾಣ-ಪ್ರಕೃತಿ(ಚೇತನಾಚೇತನ)ಯೊಳಗೆ ಅಡಗಿದ್ದಾನೆ ಎಂದು ಪ್ರಸ್ತುತ ವಚನದಲ್ಲಿ ವ್ಯಕ್ತಪಡಿಸಿದ್ದಾರೆ. ರಾಮನಾಥನು ಹೀಗೇ ಇರುವನೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವನು ನಿರ್ಗುಣ, ನಿರಾಕಾರನು. ಆದರೆ ದಾಸಿಮಯ್ಯನವರು ಅವನ ಇರುವಿಕೆಯನ್ನು ಜಗತ್ತಿನಲ್ಲಿರುವ ವಸ್ತುಗಳನ್ನೇ ಎದುರಿಟ್ಟುಕೊಂಡು ಅವನ ಸ್ವರೂಪ ತಿಳಿಸಲು ಪ್ರಯತ್ನಿಸಿದ್ದಾರೆ. ಅಡಗ ಎಂದರೆ ಮೌಂಸ. ಶರೀರವು ಮೌಂಸ, ಮಜ್ಜೆ, ಅಸ್ತಿ ಮೊದಲಾದ ಸಪ್ತ ಧಾತುಗಳಿಂದ ಕೂಡಿದೆ. ಜೀವಕೋಟಿಗಳ ಸ್ತನವು ಮೌಂಸದಿಂದ ಕೂಡಿದರೂ ತನ್ನ ಮಗುವಿಗೆ ರಕ್ತದ ಬದಲಿಗೆ ಹಾಲು ಕೊಡುತ್ತವೆ. ಅಂದರೆ ಮೌಂಸದಲ್ಲಿರುವ ಹಾಲು, ಹಾಲಿನೊಳಗಿರುವ ತುಪ್ಪದಂತೆ ರಾಮನಾಥನು ಪ್ರಾಣ-ಪ್ರಕೃತಿಯೊಳಗೆ ಅಡಗಿದ್ದಾನೆ.

ಹಸುವಿನ ಸ್ತನ ಕತ್ತರಿಸಿ ಹೆಚ್ಚು ಹಾಲು ಪಡೆಯುವನೆಂದರೆ ಹಾಲಿನ ಬದಲು ರಕ್ತವೇ ಬರುವುದು. ತಾಯಿಯಾದದ್ದು ತನ್ನ ಮಗುವಿಗೆ ಮಾತ್ರ ಹಾಲು ಕೊಡುವುದು. ಜಗತ್ತಿಲ್ಲಿರುವ 84ಲಕ್ಷ ಜೀವರಾಶಿಗಳಲ್ಲಿ ಹಾಗೂ ಜಡವಸ್ತುಗಳಲ್ಲಿ ರಾಮನಾಥನು ತುಂಬಿಕೊಂಡಿದ್ದಾನೆ. ಆದರೆ ಅವನು ಎಲ್ಲರಿಗೂ ಕಾಣಿಸುವುದಿಲ್ಲ. ಮಗುವಿಗೆ ಮಾತ್ರ ಹಾಲು ದೊರೆತಂತೆ, ಸಾಧಕ ಜೀವಿಗೆ, ಮುಮುಕ್ಷುವಿಗೆ ಮಾತ್ರ ರಾಮನಾಥನ ದರ್ಶನ ಸಾಧ್ಯ. ಅಜ್ಞಾನಿಗಳಿಗಲ್ಲ ಎಂಬುದು ಅಷ್ಟೇ ಸತ್ಯ. ಕೆಲವರು ತಾವೇ ಸರ್ವಾಧಿಕಾರಿಗಳೆಂಬಂತೆ ಅಹಂಕಾರದಿಂದ ತಾನು, ತನ್ನಿಂದ, ತನ್ನದೇ ಎಲ್ಲವು ಎಂದು ಮೆರೆಯುವವರಿಗೆ ಈ ಮುಂದಿನ ದೃಷ್ಟಾಂತ ನೋಡಬಹುದು.

ಒಮ್ಮೆ ಸಂತನ ಬಳಿ ಒಬ್ಬ ರಾಜನು ಹೋದನು. ಅವನಲ್ಲಿರುವ ಅಹಂಕಾರವನ್ನು ಗುರುತಿಸಿದ ಸಂತನು ಅವನ ಅರಿವಿನ ಕಣ್ಣು ತೆರೆಯಿಸಬೇಕೆಂದು ಅವರು ಒಬ್ಬರಿಗೊಬ್ಬರು ಪ್ರಶ್ನಿಸತೊಡಗಿದರು. ಅವರಿಬ್ಬರ ಮಧ್ಯದಲ್ಲಿ ನಡೆದ ಸಂವಾದ ಹೀಗಿದೆ.-
ರಾಜಃ- ನಾನಾರು, ನಿಮಗೆ ಗೊತ್ತೇ?
ಸಂತಃ- ನನಗೆ ಗೊತ್ತಿಲ್ಲ.
ರಾಜಃ- ನಾನು ಈ ದೇಶದ ಚಕ್ರವರ್ತಿ.
ಸಂತಃ- ಎಷ್ಟು ವರ್ಷಗಳಿಂದ?
ರಾಜಃ- ಹದಿನೈದು ವರುಷಗಳಿಂದ.
ಸಂತಃ- ಅದಕ್ಕೂ ಮೊದಲು ನೀನೇನು ರಾಜನಾಗಿರಲಿಲ್ಲ.
ರಾಜಃ- ಹೌದು.
ಸಂತಃ- ಈಗಲಾದರೂ ನೆರೆಹೊರೆಯ ರಾಜನು ನಿನ್ನನ್ನು ಸೋಲಿಸಿದರೆ ನೀನೇನು ರಾಜನಾಗಿರುವುದಿಲ್ಲ.
ರಾಜಃ- ಹೌದು.
ಸಂತಃ- ಹಾಗಾದರೆ ನೀನು ಚಕ್ರವರ್ತಿ ಎಂಬುದು ಸತ್ಯವಲ್ಲ.
ನಂತರ ಸಂತನ ಈ ನುಡಿಗಳನ್ನು ಕೇಳುತ್ತಲೇ ರಾಜನ ಮನದಲ್ಲಿದ್ದ ಅಹಂಭಾವ ಅಳಿದು ಅರಿವಿನ ರವಿ ಉದಯಿಸುದನು.
ಇನ್ನೊಂದು ಕಡೆ ದಾಸಿಮಯ್ಯನವರು ಅರುವನ್ನು ಅರಿಯಲು, ಅರಿವಿನ ಕುರುಹುವಾದ ಜ್ಞಾನ ರೂಪದ ಇಷ್ಟಲಿಂಗದ ಮೂಲಕ ಅರಿವು ಕರಗತಗೊಳಿಸಿ ಜಾಗೃತಗೊಳಿಸುವ ಇಚ್ಛೆಯಿಂದ ಈ ವಚನ ಹೇಳಿರಬಹುದು.-

ಅರುಹು ಅರಿಯಲೆಂದು
ಕುರುಹ ಕೈಯಲ್ಲಿ ಕೊಟ್ಟ!
ಅರುಹನೆ ಮರೆದು ಕುರುಹನೆ ಹರಿದ!
ಈ ಕುರುಂಬರಿಗಿನ್ನೆತ್ತಣ ಮುಕ್ತಿಯೋ? ರಾಮನಾಥ.

ಅಂಗುಷ್ಠ ಮಾತ್ರ ಆಕಾರವುಳ್ಳ ಆತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಅವನು ಧೂಮರಹಿತನಾಗಿದ್ದಾನೆ. ಅಂದರೆ ಕಲ್ಮಶರಹಿತನಾಗಿದ್ದಾನೆ. ಅವನು ಇಂದು, ನಾಳೆ ಎಂದಿಗೂ ಆರದ ಶಾಶ್ವತವಿರುವ ಜ್ಯೋತಿಸ್ವರೂಪನಾಗಿದ್ದಾನೆ. ಅವನು ಪರಿಪೂರ್ಣನಾಗಿ ಎಲ್ಲ ಜೀವಕೋಟಿಗಳ ಶರೀರದಲ್ಲಿ ಅಂಗುಷ್ಠ ಗಾತ್ರದಲ್ಲಿದ್ದು ಆತ್ಮಜ್ಯೋತಿ ಎಂದೆನಿಸಿಕೊಂಡಿದ್ದಾನೆ. ಅವನ ಸ್ವರೂಪ ಅರಿತರೆ ಸಾಕು ಎಲ್ಲವನ್ನು ಅರಿತಂತಾಗುತ್ತದೆ. ಎಂಬುದು ಅದರ ಭಾವವಾಗಿದೆ. ಅದನ್ನು ಮರೆತು ಅಹಂಕಾರದಿಂದ ನಡೆದರೆ ಕೆಡು ತಪ್ಪಿದ್ದಲ್ಲ ಎಂಬುದಕ್ಕೆ ಹಿಂದೆ ನಡೆದ ಒಂದು ಘಟನೆ ಇಲ್ಲಿ ನೋಡಬಹುದು.
ಫಿಲಿಬ್ನು ಮೆಸೆಡೋನಿಯಾ ರಾಜ್ಯದ ದೊರೆ ಆಗಿದ್ದ. ಅವನು ಅಲೆಗ್ಝಾಂಡರ್ನ ತಂದೆ.

ಅಥೆನ್ಸ್ ಪಟ್ಟ್ಟಣದ ಸುತ್ತಮುತ್ತ ಸುವಿಸ್ತಾರವಾದ ರಾಜ್ಯ ಕಟ್ಟಿದ್ದ. ಅಪಾರ ಸಿರಿ ಸಂಪತ್ತುವಿತ್ತು. ಯಾವುದಕ್ಕೂ ಏನೂ ಕೊರತೆ ಇರಲಿಲ್ಲ. ಮಹಾಶೂರ, ವೀರ, ಧೀರನೆಂಬ ಬಿರುದಾಂಕಿತನಾಗಿದ್ದ. ಅಂಥ ಫಿಲಿಬ್ ದೊರೆ ತಾನು ಮಲಗುವ ಕೋಣೆಯ ಮೇಲೆ ಒಂದು ಫಲಕ ಹಾಕಿದ್ದ. “ನೆನಪಿರಲಿ ನೀನು ಮನುಷ್ಯ ಮಾತ್ರ” ಎಂದು ಅದರ ಮೇಲೆ ಬರೆಯಲಾಗಿತ್ತು. ಪ್ರತಿದಿನ ಮಲಗುವಾಗ ಫಿಲಿಬ್ ದೊರೆ ಅದನ್ನು ಓದಿ. ಸ್ವಲ್ಪ ಹೊತ್ತು ಅದರ ಮೇಲೆ ಚಿಂತನೆ ಮಾಡಿ ಮಲಗುತ್ತಿದ್ದ. ಒಂದು ದಿನ ಮಗ ಅಲೆಗ್ಝಾಂಡರ್ ಕೇಳಿದ. “ತಂದೆಯೇ ನೀವು ಬರೆಯಿಸಿರುವ ಈ ಫಲಕದ ಉದ್ಧೇಶವೇನು?” ಫಿಲಿಬ್ ಹೇಳಿದ “ನಾನು ಎಲ್ಲರಿಗಿಂತ ವಿಶೇಷನೆಂಬ ಅಹಂಭಾವ ಮೂಡದಿರಲಿ” ಎಂಬುದೇ ಅದರ ಉದ್ಧೇಶ.

ಆಗ ಮಗನಾದ ಅಲೆಗ್ಝಾಂಡರ್ನಲ್ಲಿ ಅರಿವಿನ ರವಿಯು ಉದಯವಾದನು ಎಂಬುವುದನ್ನು ಕೆಲವು ಹಿರಿಯ ಅನುಭಾವಿಗಳು ಹೇಳಿರುವುದನು ಗಮನಿಸಬಹುದು. ಅದಕ್ಕೆ ದಾಸಿಮಯ್ಯನವರು ಅಹಂಕಾರದಿಂದ ಮಾಡಿದ ಭಕ್ತಿ, ಸಾಧನೆ ಮೊದಲಾದವುಗಳು ವ್ಯರ್ಥವಾಗಿ ಒಂದು ನಾಯಿಯ ಬಾಯಲ್ಲಿರುವ ಮೂಳೆ ಇನ್ನೊಂದು ನಾಯಿ ಕಸಿದುಕೊಂಡಂತಾಗುತ್ತದೆ ಎಂದಿದ್ದಾರೆ.
ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ
ತೊತ್ತಿನ ಕೂಟ, ತೊರೆಯನ ಮೆಳದಂತೆ
ಮನು-ಮನ-ಧನದಲ್ಲಿ ವಂಚನೆಯುಳ್ಳ
ಪ್ರಪಂಚಿಯ ಮನೆಯ ಕೂಳು
ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಣಾ! ರಾಮನಾಥ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply