ಕಾರವಾರ – ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕುಂಬಾರಕೇರಿಯಲ್ಲಿ ಜೀರ್ಣವಾದ ಕದಂಬೇಶ್ವರ ದೇವಾಲಯದ ಮರುನಿರ್ಮಾಣ ಕಾರ್ಯ ಕ್ಕಾಗಿ ಭೂಮಿ ಅಗಿಯುವಾಗ ಎರಡು ತಾಮ್ರ ಶಾಸನಗಳು ಪತ್ತೆಯಾಗಿದೆ. ಈ ಕುರಿತು ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ವಿಠ್ಠಲರಾವ್ ವೆರ್ಣೇಕರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಸಂಶೋಧನೆ ಕೈಗೊಂಡಿರುವ ಜಿಲ್ಲೆಯ ಇತಿಹಾಸ ತಜ್ಞ  ಶ್ಯಾಮಸುಂದರ್ ಈ ಶಾಸನವು ಕಲ್ಯಾಣ ಚಾಳುಕ್ಯರ ತ್ರೈಳೋಕ್ಯಮಲ್ಲನ ಆಡಳಿತ ಕಾಲದ್ದಾಗಿದ್ದು ಹತ್ತನೇ ಶತಮಾನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾಧಿರಾಜ ಸತ್ಯಾಶ್ರಯ ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ

ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕವರ್ಷ 897ನೆಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯ ಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿ, ಸಿವರಾಸಿ ಜೀಯರ ಪಾದಗಳಿಗೆ ನಮಿಸಿ, ಕಣ್ನಸೆ, ಬಡ್ಡಗಿವಾಳ್ಯ, ಸತ್ಯಾವಾಳು, ನಂದಾದೀವಿಗೆ, ಸೋಡಗ್ರ್ಗೆ ಇತ್ಯಾದಿ ನಿತ್ಯ ದೇವಸ್ವಂ ಕಾರ್ಯಗಳಿಗಾಗಿ ಹರದರಕೇರಿಯಿಂದ ಹತ್ತು ಗದ್ಯಾಣ ಮತ್ತು ತೆಂಕಣ ಕೇರಿಯಿಂದ ಐದುಬಗದ್ಯಾಣ(ಹಣ)ವನ್ನು ದಾನವಾಗಿ ನೀಡಲಾಯಿತು.  ಈ ಧರ್ಮವನ್ನು ಹಾಳು ಮಾಡಿದವರು ಕುರುಕ್ಷೇತ್ರದಲ್ಲಿ, ವಾರಣಾಸಿಯಲ್ಲಿ ಸಾವಿರ ಗೋವುಗಳನ್ನು ಕೊಂದಂತಹ ಪಾಪಕ್ಕೆ ಗುರಿಯಾ ಗುತ್ತಾರೆ ಎಂಬ ಶಾಪಾಶಯದ ನುಡಿಗಳಿವೆ.

About Author

Priya Bot

Leave A Reply