ಅವಗುಣ ಎಂಬ ಕಸ

0

ಡಾ. ಈಶ್ವರಾನಂದ ಸ್ವಾಮೀಜಿ

ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲುಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡಯನಿಲ್ಲ ಕೂಡಲಸಂಗಮದೇವ.

ಮನೆಯೋಳಗೆ ಮನೆಯ ಒಡೆಯ ಇದ್ದಾನೋ ಅಥವಾ ಇಲ್ಲವೋ ಎಂಬುವುದನ್ನು ತಿಳಿಯಬೇಕಾದರೆ ಮುಖ್ಯದ್ವಾರವನ್ನು ಗುರುತಿಸಿಯೇ ಹೇಳಬಹುದು. ಹೇಗೆಂದರೆ ಮನೆಯ ಮುಂದೆ ಕಸ ಗೂಡಿಸಿ ಸಾರಣೆ ಮಾಡಿ ರಂಗವಲ್ಲಿ ಹಾಕಿದ ಶುಭ ಲಕ್ಷಣಗಳಿರುವವು. ಹಾಗೆಯೇ ಶರೀರ ಎಂಬ ಮನೆಯೊಳಗೆ ಜಗದೊಡೆಯನ ಆತ್ಮಶಕ್ತಿ ಇದೆಯೋ, ಇಲ್ಲವೋ ಎಂಬುವುದನ್ನು ತಿಳಿಯಲು ವ್ಯಕ್ತಿಯಲ್ಲಿರುವ ಗುಣಾವಗುಣಗಳನ್ನು ಗುರುತಿಸಿ ಹೇಳಬಹುದೆಂದು ಬಸವಣ್ಣನವರು ತಮ್ಮ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.

ಕತ್ತಲು ಮನೆಯಲ್ಲಿರುವ ನಾವು ಜ್ಯೋತಿಯ ನೆನೆದರೆ ಬೆಳಕಾಗಬಲ್ಲದೇ? ದೀಪ ಹೊತ್ತಿಸಿದರೆ ಮಾತ್ರ ಬಳಕು. ಮರದ ಹಣ್ಣು, ಮರ ಹತ್ತಿ ಹರಿದಲ್ಲದೆ ಸಿಗದು. ಹಾಗೆಯೇ ಜೀವನದ ಪರಮ ಗುರಿ ಸೇರಲು ಕೇವಲ ಸ್ಮರಣೆಯಿಂದ ಸಾಧ್ಯವಿಲ್ಲ ಎನ್ನುವರು ದಾಸಿಮಯ್ಯನವರು. ಅದಕ್ಕೆ ಶಿವಧ್ಯಾನ, ಶಿವಚಿಂತನೆ ಮತ್ತು ಸತ್ಸಂಗಗಳು ಅವಶ್ಯಕ.

ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ?
ಕೈಮುಟ್ಟಿ ಉಣ್ಣದನ್ನಕ್ಕರ!
ತಾನು ವಚನಾಗಮದ ಪ್ರಸಂಗವ ಬಲ್ಲೆನೆಂದಡೆ
ಬಲ್ಲವರಾರೂ ಇಲ್ಲವೆಂದಡೆ
ಆತ ತನ್ನ ನುಡಿಗೆ ಸಿಲುಕುವನೆ?
ಇಲ್ಲ ಕಾಣಾ! ರಾಮನಾಥ.

ಆತ್ಮನ ಅರಿವು ಪ್ರವಚನ ಮಾಡುವುದರಿಂದಾಗಲಿ, ಶಾಸ್ತ್ರಾಧ್ಯಯನ ಮಾಡುವುದರಿಂದಾಗಲಿ ಆಗುವುದಿಲ್ಲ. ಕೇವಲ ಗ್ರಂಥಗಳ ಪಠಣದಿಂದಾಗಲಿ, ವೇದಾಧ್ಯಯನ ಮಾಡುವುದರಿಂದಾಗಲಿ ಆತ್ಮನ ಇರುವು ಮತ್ತು ಹರಿವು ಅನುಭವಕ್ಕೆ ಅಗೋಚರ. ದಾಸಿಮಯ್ಯನವರು ಆತ್ಮಜ್ಞಾನವು ಕೇವಲ ಹೇಳುವುದರಿಂದಾಗಲಿ ಅಥವಾ ಕೇಳುವುದರಿಂದಾಗಲಿ ಸಾಧ್ಯವಿಲ್ಲ ಎನ್ನವುದನ್ನು ದಾಸಿಮಯ್ಯನವರು ಮನೆಯಲ್ಲಿ ಅಡುಗೆ ಮಾಡಿದ ಮಾತ್ರಕ್ಕೆ ಹೊಟ್ಟೆ ತುಂಬುವುದೆ? ಇಲ್ಲ. ತಾನು ಸ್ವತಃ ತನ್ನ ತಟ್ಟೆಯಲ್ಲಿ ಬಡಿಸಿಕೊಂಡು ಉಣ್ಣದಯೇ? ಎಂದು ಲೌಕಿಕ ಉದಾಹರಣೆಯೊಂದಿಗೆ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸಾಧಕನಾದವನು ಶ್ರವಣ, ಮನನ, ಮತ್ತು ನಿಧಿದ್ಯಾಸನಗಳ ಮೂಲಕ ಸ್ವಯಂ ಹಾಗೂ ಸತತ ಪ್ರಯತ್ನದಿಂದ ಆತ್ಮನ ಅರಿವಿನ ಅನುಭವವಾಗುತ್ತದೆ ಎಂಬ ಭಾವವು ಇಲ್ಲಿ ಕಾಣುತ್ತೇವೆ.

ದೇವನೋಲುಮೆಯಾಗಲು ಚಿತ್ತ, ಮನಗಳು ಶುದ್ಧವಾಗಿರಬೇಕು. ಪ್ರತಿದಿನದ ಕಾರ್ಯಗಳು ಹಾಗೂ ಚಿಂತನೆಗಳು ದೇವಪೂಜೆಯ ಮೇಲೆ ಪರಿಣಾಮ ಬೀರುವವು. ಕಾರಣ ಮೊದಲು ಮನುಜನೊಳಗಿನ ಅವಗುಣವೆಂಬ ಕಸ ಕಿತ್ತಿ ತೆಗೆಯಬೇಕು. “ಮಣ್ಣು ಬಿಟ್ಟು ಮಡಿಕೆಯಿಲ್ಲ, ಹೊನ್ನು ಬಿಟ್ಟಿ ತೊಡುಗೆಯಿಲ್ಲ, ತನ್ನಬಿಟ್ಟು ದೇವನಿಲ್ಲ” ಎಂಬ ನಾಣ್ನುಡಿಯಂತೆ ತನ್ನೊಳಗೆ ದೇವನಿದ್ದರೂ ಅನುಭವಕ್ಕೆ ಬಾರದಿರುವ ಕಾರಣವೇ ನಮ್ಮಲ್ಲಿರುವ ಅವಗುಣಗಳು. ಕಬ್ಬಿನ ಮೇಲೆ ಜೇನಿಟ್ಟರೆ, ಕಬ್ಬು ಸಿಹಿ, ಜೇನು ಸಿಹಿ ಆದರೆ ಒಂದರ ಸಿಹಿಯನೊಂದರಿಯವು. ಕಾರಣ ಅವೆರಡರ ಮಧ್ಯದಲ್ಲಿರುವ ಕಬ್ಬಿನ ಸಿಪ್ಪೆ. ಜೀವಿ ಮತ್ತು ದೇವನ ನಡುವೆ ಅಭಿಮಾನವೆಂಬ ತೆಳುವಾದ ಪೊರೆಯಿದ್ದು, ಅವಗುಣಗಳೆಂಬ ಸಿಪ್ಪೆ ಇರುವ ಕಾರಣ ಅವನನ್ನರಿಯಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ದಾಸಿಮಯ್ಯನವರು ತಾಯಿ ಮಗುವಿನ ದೃಷ್ಟಾಂತದೊಂದಿಗೆ ವಿವರಿಸುವರು.

ತಾಯ ಗರ್ಭದ ಶಿಶು ತಾಯ ಕುರುಹನರಿಯದು
ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು
ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ! ರಾಮನಾಥ.

ವಿಶ್ವರೂಪಿಯಾದ ಈಶ್ವರನು ಜಗತ್ತಿನ ಜಡ ಮತ್ತು ಚೇತನ ವಸ್ತುಗಳಲ್ಲಿ ಪರಿಪೂರ್ಣವಾಗಿ ವ್ಯಾಪಿಸಿಕೊಂಡಿದ್ದಾನೆ. ಇದ್ದರೇನು ಅಜ್ಞಾನದ ಆವರಣ ಮುಸುಕಿದೆ. ಅದರಿಂದ ಶಿವ ಜೀವರ ಸಂದರ್ಶನ ಸಾಧ್ಯವಿಲ್ಲ. ಅಂದರೆ ಜೀವಿ ಶಿವನನ್ನು ಅರಿಯನು. ಹಾಗೆಯೇ ಶಿವನು ಸಹ ಜೀವಿಗಳಿಗೆ ದರ್ಶನಕೊಡನು. ಇದನ್ನು ತಾಯಿ ಮಗುವಿನ ದೃಷ್ಟಾಂತದ ಮೂಲಕ ದಾಸಿಮಯ್ಯನವರು ಇಲ್ಲಿ ತಿಳಿಸಿದ್ದಾರೆ.

ತಾಯಿಗೂ ಶಿಶುವಿಗೂ ಅನ್ಯೋನ್ಯ ಸಂಬಂಧವಿದೆ. ಆದರೆ ತಾಯಿಯು ಗರ್ಭಕೋಶದಲ್ಲಿರುವ ಶಿಶುವಿನ ಕುರುಹು ಅರಿಯಳು. ಹಾಗೆಯೇ ಶಿಶು ಸಹ ತಾಯಿಯ ಸ್ವರೂಪ ತಿಳಿಯದು. ಶಿಶು ತನ್ನ ಗರ್ಭಾವರಣದಿಂದ ಕಳಚಿ ಹೊರ ಬಂದಾಗ ಇಬ್ಬರ ಪರಸ್ಪರ ಪರಿಚಯವಾಗುತ್ತದೆ. ಹಾಗೆಯೇ ಜೀವಿಗೆ ತನ್ನ ಸ್ವರೂಪ ಜ್ಞಾನವಾಗಲಿ ಅಥವಾ ಈಶ್ವರನ ಸಾಕ್ಷಾತ್ಕಾರವಾಗಲಿ ಆಗಬೇಕಾದರೆ, ಪ್ರಪಂಚದ ಅಜ್ಞಾನಾವರಣ ಮಾಯಾಕೋಶ ಕಳಚಿಕೊಳ್ಳಬೇಕೆಂಬುವುದೇ ಈ ವಚನದ ತಾತ್ಪರ್ಯ.

ರಾವಣನ ಮನದಲ್ಲಿ ಸೇಡಿನ ಕಸ ಬಿತ್ತು. ದುರ್ಯೋಧನನ ಮನದಲ್ಲಿ ಲೋಭದ ಕಸ ಬಿತ್ತು. ವಿಶ್ವಾಮಿತ್ರನ ಮನದಲ್ಲಿ ಅಹಂಕಾರದ ಕಸ ಬಿತ್ತು. ಅದು ಅವರೆಲ್ಲರ ವಿನಾಶಕ್ಕೆ ಕಾರಣವಾಯ್ತು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ದ್ವೇಷ ಮುಂತಾದ ಅವಗುಣಗಳು ಬೆಳವಣಿಗೆಗೆ ಅಡ್ಡಿಯಾಗಿವೆ. ಅವಗುಣಗಳು ವ್ಯಕ್ತಿಯ ಪ್ರಯಳಕ್ಕೆ ಕಾರಣ ಹಾಗೂ ಅವನತಿಗೂ ಕಾರಣವಾಗುತ್ತವೆ.

ಬೆಳೆವ ಭೂಮಿಯೊಳೊಂದು ಪ್ರಳಯದ ಕಸಹುಟ್ಟಿ
ತಿಳಿಯಲೀಯದು ಎಚ್ಚರಲೀಯದು ಎನ್ನವಗುಣವೆಂಬ
ಕಸವ ಕಿತ್ತು ಸಲಹಯ್ಯಾ ಲಿಂಗ ತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.

ಸ್ವಚ್ಛಂದವಾದ ಬೆಳೆ ಬೆಳೆಯಲು ಅವಗುಣಗಳೆಂಬ ಕಸದ ಬೇರು ಸಹಿತ ಕಿತ್ತು ತೆಗೆಯಬೇಕು. ಒಂದೇ ಅವಗುಣ, ಸಣ್ಣ ಅವಗುಣವೆಂಬ ನಿರ್ಲಕ್ಷ ಬೇಡ. ಒಂದು ಅವಗುಣ ಅದರ ಸಂತತಿಯನ್ನೇ ತರುವುದು. ಬಿಳಿ ಹಾಳೆ ಮೇಲೆ ಒಂದು ಹನಿ ಕಪ್ಪು ಮಸಿ ಬಿದ್ದರೆ ಸಾಕಲ್ಲವೆ? ಪ್ರತಿದಿನವೂ ಮನೆಯ ಕಸ ಗೂಡಿಸುವಂತೆ, ಮನದ ಕಸವನ್ನು ಗೂಡಿಸುತ್ತಲೇ ಇರಬೇಕು. ಅವಗುಣ ತೆಗೆದು ಸದ್ಗುಣ ಬಿತ್ತುವ ಕಾರ್ಯ ನಿರಂತರವಾಗಬೇಕು. ಶುದ್ಧವಾದ ಮನವು ಶಿವನಿರಲು ಯೋಗ್ಯಸ್ಥಳ. ಅದಕ್ಕಾಗಿ ಪ್ರತಿನಿತ್ಯ ದೇವರಪೂಜೆ, ಶರಣರ ಸಂಗ, ಅವರ ನುಡಿಗಡಣ ಅತ್ಯವಶ್ಯ. ಇಂತಹ ಕಸ ತೆಗೆಯುವ ಕಲೆ ದೇವರ ದಾಸಿಮಯ್ಯ ಮೊದಲಾದ ಶರಣರಿಗೆ ಕರಗತವಾಗಿತ್ತು. ಅಂತಹ ಶರಣರ ಪಥವಿಡಿದು ನಡೆದವರು ಸದ್ಗುಣಿಗಳಾಗಿ ಶರಣರಾಗುವಲ್ಲಿ ಸಂದೇಹವಿಲ್ಲ.

ಅವಗುಣವನ್ನು ಅಳವಡಿಸಿಕೊಳ್ಳಲು ಯಾರು ಕಲಿಸಬೇಕಾಗಿಲ್ಲ. ಅದು ತಾನೇ ತಾನಾಗಿ ಬೇಳೆದು ಹೆಮ್ಮರವಾಗಿ ಈ ಶರೀರದೊಳಗೆ ಎದ್ದು ನಿಲ್ಲುತ್ತದೆ. ಶರೀರದೋಳಗಿರುವ ಅವಗುಣದ ಕಸವನ್ನು ತೆಗೆದಾಗ ಮಾತ್ರ ಅಲ್ಲಿ ಸದ್ಗುಣವೆಂಬ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯ. ಕಸ ತೆಗೆದಾಗ ಬೆಳೆ ಸುಳುಸುಳಿಯಾಗಿ ಹುಲುಸಾಗಿ ಬರುತ್ತದೆ. ಅವಗುಣಗಳ ಕಳೆ ತೆಗೆದಾಗ ಸದ್ಗುಣಿಯಾಗಿ ಮಾನವ ಸತ್ಯಾನ್ವೇಷಿಯಾಗಿ ಪರಮ ಸತ್ಯದ ಕಡೆಗೆ ಮುಖಮಾಡಿ ಜೀವನ್ಮುಕ್ತನಾಗುತ್ತಾನೆ.

ನಮ್ಮಲ್ಲಿರುವ ಅವಗುಣವನ್ನು ನಿರ್ಲಕ್ಷಿಸಿದರೆ ಜೀವನದ ಗುರಿಯೇ ನಾಶವಾಗುವುದು. ಇದೇನು ದೊಡ್ಡದಲ್ಲ ಸಣ್ಣದೆಂದು ಬೆಳೆಯಲು ಬಿಟ್ಟರೆ ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು. ತಪ್ಪಿ ಇಟ್ಟ ಹೆಜ್ಜೆ ಒಂದೇಯಾದರೂ ಜೀವನದ ಗತಿಯನ್ನೇ ಬದಲಿಸುತ್ತದೆ. ಆ ಹೆಜ್ಜೆ ಅಧೋಗತಿಗೆ ತಳ್ಳುತ್ತದೆ.

ಒಮ್ಮೆ ಗುರು ಶಿಷ್ಯರಿಬ್ಬರು ಒಬ್ಬ ಭಕ್ತನ ಮನೆಗೆ ಹೋಗಿದ್ದರು. ಆದರಾತಿಥ್ಯಗೈದ ಭಕ್ತ ತನ್ನ ದೊಡ್ಡದಾದ ಕಿರಾಣಿ ಅಂಗಡಿ ತೋರಿಸಲು ಕರೆದೊಯ್ದನು. ಒಂದು ತೆರೆದ ಡಬ್ಬಿಯಲ್ಲಿ ಅಡುಗೆ ಎಣ್ಣೆ ಹೆರೆತು ತುಪ್ಪದಂತೆ ಕಾಣುತಿತ್ತು. ಕುತೂಹಲದಿಂದ ಶಿಷ್ಯ ಬೆರನ್ನೆದ್ದಿ ವಾಸನೆ ನೋಡಿ, ಬೆರಳಿಗಂಟಿದ ಎಣ್ಣೆಯನ್ನು ಪಕ್ಕದಲ್ಲಿದ್ದ ಕಂಬಕ್ಕೆ ಒರೆಸಿದನು. ಅದನ್ನು ನೋಡಿದ ಗುರುಗಳು ಹೀಗೆಕೆ ಮಾಡಿದೆ? ಎಂದು ಕೇಳಿದರು. ಶಿಷ್ಯ ಅದಕ್ಕೇನಾಗುವುದು ಬಿಡಿ ಸಹಜವಾಗಿ ಕೈ ಒರೆಸಿದೆಯೆಂದ. ಮುಂದೆ ಏನಾಗುತ್ತದೆಯೋ ನೋಡುವಿಯಂತೆ ಬಾ ಎಂದು ಕರೆದುಕೊಂಡು ಅಂಗಡಿ ಎದುರಿನ ದೂರದಲ್ಲಿರುವ ಒಂದು ಕಟ್ಟೆಯ ಮೇಲೆ ಕುಳಿತರು.

ಕಂಬಕ್ಕೆ ಒರೆಸಿದ ಎಣ್ಣೆಯ ವಾಸನೆಗೆ ನೊಣ ಬಂದು ಕುಳಿತಿತ್ತು. ನೊಣಕ್ಕಾಗಿ ಹಲ್ಲಿ ಓಡಿಬಂತು. ಹಲ್ಲಿ ಹಿಡಿಯಲು ಬೆಕ್ಕು ಮುನ್ನುಗ್ಗಿತು. ಆ ಬೆಕ್ಕನ್ನು ಹಿಡಿಯಲು ನಾಯಿಯೊಂದು ರಭಸದಿಂದ ಓಡಿ ಬಂತು. ಅದರ ರಭಸಕ್ಕೆ ಅಲ್ಲಿರುವ ಡಬ್ಬಿ ಉರುಳಿ ಎಣ್ಣೆಯಲ್ಲಾ ಚೆಲ್ಲತು. ಅದನ್ನು ಕಂಡ ಸಿಟ್ಟಿಗೆದ್ದ ಮಾಲಿಕ ಕೋಲಿನಿಂದ ನಾಯಿಗೆ ಜೋರಾಗಿ ಹೊಡೆದ ಹೊಡೆತಕ್ಕೆ ಅದರ ಕಾಲು ಮುರಿಯಿತು. ನಾಯಿಯ ಒಡೆಯ ಬಂದು ಜಗಳ ತೆಗೆಯಲು ಪ್ರಾರಂಭಿಸಿದನು. ಆ ಮನೆಯವರಿಗೆ ಈ ಮನೆಯವರಿಗೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಎರಡೂ ಕಡೆಯ ಓಣಿಯವರು ಸೇರಿದರು. ಬಾಯಿಗೆ ಬಾಯಿ, ಕೈಗೆ ಕೈ ಜಗಳ ಹತ್ತಿತು. ಬಡಿಗೆ, ಕತ್ತಿ ಕಠಾರಿಗಳು ಝಳಪಿಸಿದವು. ಕೆಲವರ ತಲೆ ಒಡೆದರೆ, ಇನ್ನೂ ಕೆಲವರ ಕೈ-ಕಾಲುಗಳು ಮುರಿದವು. ಪೋಲಿಸರು ಬಂದರು. ಕೋರ್ಟ್, ಕಚೇರಿ, ಜೈಲು ಶಿಕ್ಷೆ ಹೀಗೆ ಮುಂದುವರೆದವು. ಅದನ್ನು ಕಂಡ ಶಿಷ್ಯ ಗಾಭರಿಯಾಗಿ ತನ್ನ ನಿರ್ಲಕ್ಷದ ಒಂದು ಅವಗುಣದಿಂದ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಯುತಲ್ಲ ಎಂದು ಪಶ್ಚಾತಾಪ ಪಟ್ಟನು.

ಅವುಗುಣಗಳು ಮಾನವನಿಗೆ ಅಂಟಿದ ವೈರಸ್ಗಳು. ಇವುಗಳಿಂದ ಮಾನವನ ಜೀವನ ನರಕ ಸದೃಶ. ಅವಗುಣಗಳನ್ನು ಕತ್ತರಿಸಬಾರದು. ಅದರ ಬೇರು ಸಹಿತವಾಗಿ ಕೀಳಬೇಕು. ಆಗ ಜೀವನ ವೃಕ್ಷ ಸುಂದರವಾಗಿ ಬೆಳೆದು ನಾಲ್ಕು ಜನರಿಗೆ ನೆರಳು ಫಲ ಪುಷ್ಪಗಳಂತೆ ಆಶ್ರಯನಾಗುತ್ತಾನೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply