ಆತ್ಮಾರ್ಪಣೆ

0

ಡಾ. ಈಶ್ವರಾನಂದ ಸ್ವಾಮೀಜಿ

ಭಾರತೀಯ ಅಧ್ಯಾತ್ಮಿಕ ಪರಂಪರೆಯಲ್ಲಿ ಮಾನವನ ಅತ್ಯುನ್ನತ ಗುರಿ ಮೋಕ್ಷವೆಂದು ಹೇಳಲಾಗುತ್ತದೆ. ಇದನ್ನು ಪಡೆಯಲು ಅತ್ಯಂತ ಸರಳ ಹಾಗೂ ಸುಲಭ ಮಾರ್ಗವೆಂದರೆ ಭಕ್ತಿ ಒಂದೇ ಸಾಕು ಎಂದು ಬಸವಣ್ಣನವರ ವಚನದಲ್ಲಿ ಕಾಣಬಹುದು –

ನಾದಪ್ರೀಯ ಶಿವನೆಂಬರು ನಾದಪ್ರೀಯ ಶಿವನಲ್ಲ,
ವೇದಪ್ರೀಯ ಶಿವನೆಂಬರು ವೇದಪ್ರೀಯ ಶಿವನಲ್ಲ,
ನಾದವ ಮಾಡಿದ ರಾವಣನ ಅರೆ ಆಯುಷವಾಯಿತು.
ವೇದವ ಓದಿದ ಬ್ರಹ್ಮನ ಶಿರವ ಹೋಯಿತು.
ನಾದಪ್ರೀಯನೂ ಅಲ್ಲ, ವೇದಪ್ರೀಯನೂ ಅಲ್ಲ,
ಭಕ್ತಿಪ್ರೀಯ ನಮ್ಮ ಕೂಡಲಸಂಗಮದೇವ.

ಇನ್ನಿತರ ಮಾರ್ಗಗಳಾದ ಜ್ಞಾನಮಾರ್ಗ, ಕರ್ಮಮಾರ್ಗ, ಧ್ಯಾನಮಾರ್ಗ, ಯೋಗಮಾರ್ಗ ಮೊದಲಾದವುಗಳಿಗಿಂತಲೂ ಭಕ್ತಿಮಾರ್ಗ ಅತ್ಯಂತ ಸುಲಭ ಹಾಗೂ ಸರಳ. ಇದಕ್ಕೆ ಭಕ್ತನು ಪರಿಶುದ್ಧವಾಗುವ ಮಾರ್ಗವೆಂದು ಕರೆಯಲಾಗುತ್ತದೆ. ಭಕ್ತಿಯಲ್ಲಿ ಶ್ರವಣ, ಕೀರ್ತನ, ಸ್ಮರಣ, ಸಖ್ಯ ಮೊದಲಾದ ನವವಿಧ ಭಕ್ತಿಗಳು ಸುಪ್ರಸಿದ್ಧವಾಗಿವೆ. ಇವುಗಳಲ್ಲಿ ಕೊನೆಯದಾದ ಆತ್ಮಾರ್ಪಣ ಭಕ್ತಿಯೂ ಇತರ ಭಕ್ತಿಗಳಿಗಿಂತ ಫಲಪ್ರದವಾದುದು.

ಶ್ರವಣಂ ಕೀರ್ತನಂ ಶಂಭೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||

“ತೇನ ವಿನಃ ತೃಣಮಪಿ ನ ಚಲತಿ” ಎಂಬುವುದನ್ನು ಅರಿತು ನನ್ನದೇನೂ ಇಲ್ಲ ಎಲ್ಲವೂ ಭಗವಂತನದು, ಎಲ್ಲವೂ ಶಿವನಿಚ್ಚೆಯಂತೆ ನಡೆಯುತ್ತದೆ ಎಂಬ ಭಾವದಿಂದ ಭಗವಂತನ ಇಚ್ಛೆಗೆ ಸಂಪೂರ್ಣವಾಗಿ ಶರಣಾಗತವಾಗುವುದಕ್ಕೆ ಆತ್ಮ ಸಮರ್ಪಣೆ ಎನ್ನಬಹುದು. ಈ ರೀತಿಯ ಭಕ್ತಿಯನ್ನು ಕುರಿತು ಕೆಲವು ಸಂತರು ತಮ್ಮ ಅನುಭವಾಮೃತದಲ್ಲಿ ಉಲ್ಲೇಖಿಸಿರುವರು. ಬೆಕ್ಕು ತನ್ನ ಮರಿಯ ರಕ್ಷಣೆಗಾಗಿ ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ ಅದು ತನ್ನ ಮರಿಯ ಕತ್ತನ್ನು ನೋವಾಗದಂತೆ ಕಚ್ಚಿ ಹಿಡಯುವುದು ಅನುಭವವೇದ್ಯವಾದ ಸಂಗತಿಯೇ. ಹಾಗೆಯೇ ಸರ್ವಶಕ್ತನಾದ ಭಗವಂತನಿಗೆ ಶರಣಾಗತಿಯನ್ನು ಹೊಂದಿದರೆ, ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಏನನ್ನೂ ಮಾಡಲಾಗದು. ಶರಣಾಗತಿಯ ಮಹತ್ವವೇ ಹಾಗೆ. ಸಂತರೊಬ್ಬರು ಶರಣಾಗತಿಯ ಮಹತ್ವವನ್ನು ಹೀಗೆ ಅರುಹಿದ್ದಾರೆ.

ಜ್ಯೋ ಜಾಕೋ ಶರಣೋ ಕಹೈ, ತಾಕಹ ತಾಕೀ ಲಾಜ |
ಉಲಟೆ ಜಲ ಮಛಲಿ ಚಲೈ, ಬಹ್ಯೋ ಜಾತ ಗಜರಾಜ ||

ಅಂದರೆ ನದಿಯ ಮಹಾಪ್ರವಾಹದಲ್ಲಿ ಬಲಿಷ್ಠವಾದ ಆನೆಯೂ ಕೊಚ್ಚಿ ಹೋಗುತ್ತದೆ. ಆದರೆ ನೀರಿನ ಶರಣಾಗತಿಯನ್ನು ಹೊಂದಿದ ಸಣ್ಣ ಮೀನು ತನಗೆ ತಿಳಿದತ್ತ ಯಾವುದೇ ಅಡೆತಡೆ ಇಲ್ಲದೆ ಚಲಿಸುತ್ತದೆ. ಹಾಗೆ ಭಗವಂತನಿಗೆ ಶರಣಾಗತನಾದ ಭಕ್ತನು ಭಗವತ್ ಪ್ರಪಂಚದಲ್ಲಿ ನಿರಾಯಾಸವಾಗಿ ಬದುಕುತ್ತಾನೆಂದರ್ಥ. ನನ್ನಲ್ಲಿ ಬಲ, ಬುದ್ಧಿ, ಸಾಮಥ್ರ್ಯವಿದೆ ಎಂಬ ಭಾವ ಮತ್ತು ನಾನು ಏನೆಲ್ಲವನ್ನು ಸಾಧಿಸಬಲ್ಲೆ ಎಂಬ ಅಭಿಮಾನ ಇರುವವವರೆಗೆ ಆತ್ಮಸಮರ್ಪಣೆ ಅಥವಾ ಶರಣಾಗತಿಯ ಭಾವವೆಂದೂ ಅಳವಡದು.

ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಬರುವ ಎಲ್ಲ ಆಪತ್ತು-ವಿಪತ್ತು, ಸುಖ-ಸಂತೃಪ್ತಿಗಳೆಲ್ಲವೂ ಭಗವಂತನ ಪ್ರಸಾದವೆಂದು ಗ್ರಹಿಸುವುದು ಆತ್ಮ ಸಮರ್ಪಣೆಯ ಮುಖ್ಯ ಭಾವ. ಆದುದರಿಂದ ಭಕ್ತನು ಭಗವಂತನನ್ನೇ ತನ್ನ ರಕ್ಷಕ, ಪೋಷಕವೆಂದು ಭಾವಿಸುತ್ತಾನೆ. ಭಕ್ತಿಭಂಡಾರಿ ಬಸವಣ್ಣನವರು ಸರ್ವವೂ ಆಗಿರುವ ಭಗವಂತನನ್ನು ಕುರಿತು-
ತಂದೆ ನೀನು ತಾಯಿ ನೀನು,
ಬಂಧು ನೀನು ಬಳಗ ನೀನು
ಎನಗೆ ನೀನಲ್ಲದೆ ಮತ್ತಾರೂ ಇಲ್ಲವಯ್ಯಾ,
ಕೂಡಲಸಂಗಮದೇವ. ಹಾಲಲದ್ದು ನೀರಲದ್ದು.

ಎಂದು ಹೇಳುವಲ್ಲಿ ಸಂಪೂರ್ಣವಾಗಿ ಆತ್ಮಸಮರ್ಪಣೆಯ ಭಾವವಿದೆ. ನನ್ನನ್ನು ಉದ್ಧರಿಸು ಅಥವಾ ಕೈಯಾದರೂ ಬಿಡು. ನಾನು ನಿನ್ನನ್ನೇ ನಂಬಿಕೊಂಡಿದ್ದೇನೆ. ನನಗೆ ನೀನೆ ಗತಿ, ನೀನೆ ಮತಿ, ಸರ್ವಸ್ವವೂ ನೀನೇ, ಆದ್ದರಿಂದ ನನ್ನನ್ನು ಅನುಗ್ರಹಿಸು ಎಂದು ಅನನ್ಯಗತಿಕರಾಗಿ ಪ್ರಾರ್ಥಿಸುತ್ತಾರೆ.
ತ್ವಮೇವ ಮಾತಾ ಚ ಪಿತಾ ತ್ವಮೇವ ಬಂಧು ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವ ಮಮ ದೇವ ದೇವ ||

ಬಳ್ಳಿಗೆಂದೂ ಕಾಯಿ ಭಾರವಲ್ಲ. ಹಾಗೆಯೇ ವಿಶ್ವರೂಪವಾಗಿ ಇಡೀ ವಿಶ್ವವನ್ನೇ ಹೊತ್ತ ನಿನಗೆ ನಾನೊಬ್ಬನು ಹೊರೆಯೆ? ಎಂಬ ಶರಣನ (ಭಕ್ತನ) ಮಾತುಗಳಲ್ಲಿ ತಾನು ಉದ್ಧಾರವಾಗಬೇಕೆಂಬ ಉತ್ಕಟ ಅಭೀಪ್ಸೆ ಇದೆ. ಇದುವೇ ಆತ್ಮಸಮರ್ಪಣೆಯ ಪ್ರೇರಕ ಶಕ್ತಿ.

ಎನ್ನ ವಾಮಕ್ಷೇಮ ನಿಮ್ಮದಯ್ಯಾ,
ಎನ್ನ ಹಾನಿವೃದ್ಧಿ ನಿಮ್ಮದಯ್ಯಾ,
ಎನ್ನ ಮಾನಾಪಮಾನ ನಿಮ್ಮದಯ್ಯಾ,
ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮ ದೇವಾ?

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply