ಹುಬ್ಬಳ್ಳಿ-  ರೈತ ಪರ ಹೋರಾಟಕ್ಕೆ ಇದೆ ದಿ. 20 ರಂದು ರಾಜಭವನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದರು.   ನಗರದ ಗೋಕುಲ್ ರಸ್ತೆಯ ಲೋಟಸ್ ಲೇಕ್‍ನಲ್ಲಿಂದು ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ “ಸಂಕಲ್ಪ ಸಮಾವೇಶ” ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಕ್ರಮಣ ಕಾರಣಕ್ಕೆ ದಿ. 14 ರಂದು ನಡೆಯಬೇಕಿದ್ದ ಹೋರಾಟ ದಿ. 20ಕ್ಕೆ ಮುಂದೂಡಲಾಗಿದೆ. ಅಂದಿನ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಸಂಘಟಿಸಬೇಕಾಗಿದೆ ಎಂದರು.

ರೈತ ಪರ ಹೋರಾಟದಲ್ಲಿ ಪ್ರತಿಯೊಂದು ಬ್ಲಾಕ್‍ಗಳಿಂದ ಐದೈದು ಬಸ್‍ಗಳಲ್ಲಿ ಜನರನ್ನು ಕರೆ ತರಬೇಕು ಎಂದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಪ್ರತಿಭಟನೆ ಆರಂಭಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದರು.  ಇಂದು ಪಕ್ಷ ಸಂಘಟನೆಗೆ ಸಂಕಲ್ಪ ಸಮಾವೇಶ ಹಮ್ಮಿಕೊಂಡಿದ್ದು, ನಾವು ಒಂದು ಸಂಕಲ್ಪ ಮಾಡಲು ಇಲ್ಲಿ ಸೇರಿದ್ದೇವೆ. ಆದ್ದರಿಂದ 2021 ವರ್ಷ ನಮಗೆ ಹೋರಾಟದ ವರ್ಷವಾಗಿದೆ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು, ವಿನ: ಸಭೆ ನಡೆಸಿ ಭಾಷಣ ಹೊಡೆದರೆ ಪಕ್ಷ ಸಂಘಟನೆಯಾಗದು ಎಂದ ಖಡಕ್ಕಾಗಿ ನುಡಿದರು.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ಬೇಡ. ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಾಲಿಕೆ ಚುನಾವಣೆಗಳಿಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.  ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಯೋಜನೆ ರೂಪಿಸಿದ್ದೇನೆ. ನಾವು ಹಾಕಿಕೊಟ್ಟ ಬುನಾದಿಯಂತೆ ಶಿಸ್ತಿನಿಂದ ಪಕ್ಷವನ್ನು ಮುನ್ನಡೆಸಬೇಕು. ಯಾರೂ ಎಷ್ಟೇ ದೊಡ್ಡ ನಾಯಕನಾಗಿದ್ದರೂ, ಪಕ್ಷದ ಶಿಸ್ತು ಉಲ್ಲಂಘಿಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಅವರು, ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಪೂಜೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

Leave A Reply