ಚಿಂತನೆ

0

ಡಾ. ಈಶ್ವರಾನಂದ ಸ್ವಾಮೀಜಿ

ಜಗತ್ತಿನಲ್ಲಿರುವ ಪ್ರತಿಯೊಂದು ಜೀವಕ್ಕೂ ಒಂದಿಲ್ಲೊಂದು ಚಿಂತೆ ಇದ್ದೆ ಇರುತ್ತದೆ. ಈ ಪ್ರಾಣಿಗೆ ಚಿಂತೆ ಇರುವುದಿಲ್ಲವೆಂದು ಹೇಳಲು ಸಾಧ್ಯವೆವಿಲ್ಲ. ಪ್ರಾಣಿ ವರ್ಗಕ್ಕಿಂತಲೂ ಮನುಷ್ಯ ವರ್ಗಕ್ಕೆ ಅತಿಯಾದ ಚಿಂತೆ ಇರುತ್ತದೆ. ಚಿಂತೆಯು ದೈಹಿಕ, ಮಾನಸಿಕ, ಭೌತಿಕ, ಸಾಮಾಜಿಕ, ಅಧ್ಯಾತ್ಮಿಕ ಹೀಗೆ ಮೊದಲಾದಗಳಿರಬಹುದು. ಇವೆಲ್ಲವುಗಳಲ್ಲಿ ಮಾನಸಿಕ ಚಿಂತೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ದೈಹಿಕ ಚಿಂತೆ ಹೇಗಾದರೂ ಪರಿಹಾರ ಮಾಡಬಹುದು. ಮಾನಸಿಕ ಚಿಂತೆ ಕಳೆಯಲು ಸಾಧ್ಯವಿಲ್ಲ. ಈ ಚಿಂತೆಗೆ ಸುತ್ತಮುತ್ತಲಿನ ಪರಿಸರ ಕಾರಣವೆಂದು ಹೇಳಬಹುದು. ಇಲ್ಲವೆ ಬಡತನ ಕಾರಣವೆಂದು ಹೇಳಬಹುದು.

ಸಾಮಾನ್ಯವಾಗಿ ಮನುಷ್ಯನಿಗೆ ಅಸತಿ, ವಸತಿ ಮತ್ತು ಬಸತಿಗಳು ಮುಖ್ಯವಾಗಿರಬೇಕು. ಇಷ್ಟಾದ ಮೇಲೆ ಇಷ್ಟಕ್ಕೆ ಜೀವನ ಮುಗಿಯುತ್ತೆಂದು ಉಸಿರು ಬಿಟ್ಟು ಸಂತೋಷದಿಂದ ಕಾಲಕಳೆಯುದಿಲ್ಲ. ಅವರು ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವರು. ಒಂದು ಚಿಂತೆಗೆ ಪರಿಹಾರ ಸಿಕ್ಕಿತೆಂದರೆ ಅದರ ಹಿಂದೆ ಇನ್ನೊಂದು ಚಿಂತೆ ಹುಟ್ಟಿಕೊಂಡೇ ಬರುವದು. ಚಿಂತೆಯೆಂಬುದು ಮಾನವ ಜೀವನಕ್ಕೆ ಸರಪಳಿಯಂತೆ ಅವು ಒಂದಕ್ಕೊಂದು ಕೊಡಿಯಾಗಿ ಬಂಧಿಸಿವೆ. ಅದರಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ. ಜಗತ್ತಿನಿಂದ ಬಿಡುಗಡೆಯಾಗಬಹುದು ಆದರೆ ಚಿಂತೆಯಿಂದ ಬಿಡುಗಡೆ ಯಾಗಿದ್ದೇವೆಂದು ಯಾರಿಂದಲೂ ಕೇಳಿಬರುವುದಿಲ್ಲ.

ಸಂತನೊಬ್ಬ ರಾತ್ರಿ ತುಂಬಾಹೊತ್ತು ಜಗತ್ತಿನ ಜೀವಕೋಟಿಗಳ ಬಗ್ಗೆ ಚಿಂತಿಸುತ್ತಿದ್ದುರಿಂದ ಸುಮಾರು ಹೊತ್ತು ಕಳೆದರೂ ನಿದ್ರೆ ಮಡಲಿಲ್ಲ. ದೇವರು ಪ್ರತಕ್ಷ್ಯವಾಗಿ ಏಕೆ ಸಂತರೆ ಮಲಗಲಿಲ್ಲವೇ ? ನಿದ್ರೆ ಬಂದಿಲ್ಲವೇ ? ಎಂದಾಗ ಸಂತನು ಏನು ಮಾಡಲಿ ಭಗವಂತನೆ ಜಗತ್ತಿನ ಜೀವಿಗಳ ಕಷ್ಟಗಳ ಸರಮಾಲೆಯನ್ನು ಕಂಡು ನಿದ್ರೆ ಬರುತ್ತಲ್ಲವೆಂದಾಗ ಈಶ್ವರನು ಜಗತ್ತಿನ ಸೃಷ್ಟಿಕರ್ತ ನಾನು ಯಾರನ್ನು ಹೇಗಿಡಬೇಕು ಎಂಬುದು ನನಗೆ ಗೊತ್ತು, ನೀವು ನಿದ್ರೆ ಮಾಡಿರಿ ಎಂದನು.

ಇಲ್ಲಿ ದೇವರ ದಾಸಿಮಯ್ಯನವರ ಈ ಕೆಳಗಿನ ವಚನವೊಂದನ್ನು ಜ್ಞಾಪಿಸಿಕೊಳ್ಳಬಹುದು-
ಇಂದಿಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ
ತಂದಿಕ್ಕುವ ಶಿವಂಗೆ ಬಡತನವೇ ? ರಾಮನಾಥ
“ಚಿಂತೆಯೆ ಮುಪ್ಪು ಸಂತೋಷವೆ ಯವ್ವನ” ಎಂಬಲ್ಲಿ ಚಿಂತೆಯೆ ಬಂಧನ. ಚಿಂತನೆಯೇ ಮೋಕ್ಷಕ್ಕೆ ದಾರಿಎಂದು ಅರಿತ ದಾಸಿಮಯ್ಯನವರು ಈ ಜಗತ್ತಿನಲ್ಲಿ 84 ಲಕ್ಷ ಜೀವರಾಶಿಗಳು ಈಶ್ವರನಿಂದ ಸೃಷ್ಟಿಗೊಂಡು ಸಂರಕ್ಷಣೆಯ ಜವಬ್ದಾರಿಯೂ ಅವನದೇ ಆಗಿದೆ. ಜೀವಿಗಳು ತಮ್ಮ ತಮ್ಮ ಹೊಟ್ಟೆಗಾಗಿಯಾಗಲಿ, ಬಟ್ಟೆಗಾಗಿಯಾಗಲಿ ಚಿಂತಿಸದೆ ಸಂಪೂರ್ಣ ಜವಬ್ದಾರಿ ಅವನದೇ ಆಗಿರುವುದರಿಂದ ನಮ್ಮೆಲ್ಲರ ಯೋಗಕ್ಷೇಮದ ಭಾರ ಹೊತ್ತಿರುವ ಈಶ್ವರನ ಚಿಂತನೆ (ಧ್ಯಾನ) ಮಡಿದರೆ ಸಾಕೆನ್ನುವರು ಮಹಾನುಭಾವಿಗಳು. ಅದಕ್ಕೆಂತಲೇ ಭಗವದ್ಗೀತೆಯೂ ಸಹ-

ಅನನ್ಯಾಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || ಗೀತೆ 9.22 ಎಂದು ಹೇಳಿದೆ.

ಚಿಂತೆಯ ಬಗ್ಗೆ ಅಂಬಿಗರ ಚೌಡಯನವರು ತಮ್ಮ ವಚನೊಂದರಲ್ಲಿ ಮಾನವನು ತನ್ನ ಜೀವನದ ಬಗ್ಗೆ ಮೊದಲು ಚಿಂತಿಸುವನು. ಉಳಿದವರು ಹೇಗೆ ಇರಲಿ ತಾನು ಮಾತ್ರ ಚನ್ನಾಗಿರಬೇಕೆಂದು ಸ್ವಾರ್ಥ ಲಾಭ ಬಯಸುವನು. ತನ್ನ ವಿಚಾರಗಳೆ ಸತ್ಯ, ತನ್ನ ಚಿಂತೆಗೆ (ಸುಖಕ್ಕಾಗಿ) ಪರಿಹಾರಕ್ಕಾಗಿ ಹಗಲಿರಳು ಚಿಂತಿಸುವನು. ಮಾನವ ಮೊದಲು ತನ್ನ ಹೊಟ್ಟೆಯ ಚಿಂತೆ ನಂತರ ಬಟ್ಟೆ, ಹೀಗೆ ಅವನ ಮುಂದಿನ ಬದುಕಿನ ಬಗ್ಗೆ ಚಿಂತಿಸತೊಡಗುವನೆಂದು ಈ ಕೆಳಗಿನಂತೆ ಹೇಳಿದ್ದಾರೆ.
ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ,
ಉಡುವುದಾದರೆ ಇಡುವ ಚಿಂತೆ, ಇಡುವುದಾದರೆ ಹೆಂಡರ ಚಿಂತೆ,
ಹೆಂಡರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಸಾವಿನ ಚಿಂತೆ, ಇಂತಿ ಹಲವು ಚಿಂತೆಯಲ್ಲಿದ್ದವರನು
ಕಂಡೆನು ಶಿವ ಚಿಂತೆಯಲ್ಲಿದ್ದವರನು ಒಬ್ಬರನು ಕಾಣೆನೆಂದ ನಮ್ಮ ಅಂಬಿಗರ ಚೌಡಯ್ಯ.

ಹೀಗೆ ಒಂದೊಂದು ಚಿಂತೆ ಮಾಡುತ್ತ ಕೊನೆಗೆ ಸಾವಿನ ಚಿಂತೆಯಲ್ಲಿ ತನ್ನ ಶರೀರ ತ್ಯಾಗ ಮಾಡಿ ತಾನು ಮಾಡಿದ ಪಾಪ-ಪುಣ್ಯಗಳ ಅನುಸಾರವಾಗಿ ಸ್ವಾರ್ಗಾದಿ ಲೋಕಗಳನ್ನು ಹೊಂದುವನು.
ವೈರಾಗ್ಯನಿಧಿ ಅಕ್ಕಮಹಾದೇವಿಯು ಸಹ ಮನುಷ್ಯ (ಕೌಶಿಕನಿಗಲ್ಲದೆ) ಮಾತ್ರಗಲ್ಲದೆ ಪ್ರಾಣಿಗಳಿಗೂ ಒಂದೊಂದು ತರಹದ ಚಿಂತೆಗಳು ಇರುತ್ತವೆಂದು ಈ ಕೆಳಗಿನ ವಚನದಲ್ಲಿ ತಿಳಿಸಿದ್ದಾಳೆ.

ಎಮ್ಮೆಗೊಂದು ಚಿಂತೆ, ಸಮಗಾರಗೊಂದು ಚಿಂತೆ,
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ,
ನನಗೆ ನನ್ನ ಚಿಂತೆ ತನಗೆ ತನ್ನ ಕಾಮದ ಚಿಂತೆ,
ಒಲ್ಲೆ ಹೋಗು ಸೆರಗು ಬಿಡು ಮರುಳೆ,
ನನಗೆ ಚನ್ನಮಲ್ಲಿಕಾರ್ಜುನ ದೇವರು ಒಲಿವರೋ ಒಲಿಯರೋ ಎಂಬ ಚಿಂತೆ.

ಅಕ್ಕಮಹಾದೇವಿಯು ಕೌಶಿಕ ಮಹಾರಾಜನ ಕಟ್ಟುಗಳಿಗೆ ಒಳಗಾಗಿ, ತಾನು ಮದುವೆಯಾಗುವಾಗ ಕೆಲವು ನಿಯಮಗಳನ್ನು ಹೇಳುವಳು. ಅದಕ್ಕೆ ಕೌಶಿಕನು ಅವಳ ಸೌಂದರ್ಯತೆಗೆ ಮನಸೋತು ಅವಳ ನಿಯಮಗಳಿಗೆ ಒಪ್ಪಿಕೊಂಡು ಮದುವೆಯಾದನು. ಅಳು ಶಿವಪೂಜೆ ಮಾಡುತ್ತಿರುವಾಗ ಅವನು ತನ್ನ ಕಾಮದ ವಿರಹ ತಾಳಲಾರದೆ ಅವಳ ಪೂಜಾಗೃಹವನ್ನು ಪ್ರವೇಶಿಸಿ ಅವಳ ಸೆರಗು ಹಿಡಿದಾಗ ಮಹಾದೇವಿಯು ಹೇಳಿದ ಮಾತು ಇದಾಗಿರಬಹುದು.

ಎಮ್ಮೆಗೆ ಒಂದು ಚಿಂತೆ ಅಂದರೆ ತಾನು ಚನ್ನಾಗಿ ಹುಲ್ಲನ್ನು ತಿಂದು ತನ್ನ ಯಜಮಾನನಿಗೆ ಹಾಲನ್ನು ಕೊಟ್ಟರೆ ತನಗೆ ಪ್ರೀತಿಯಿಂದ ನೋಡಿಕೊಳ್ಳುತ್ತಾನೆಂಬ ಚಿಂತೆ ಮಾಡುತಿದ್ದರೆ, ಈ ಎಮ್ಮೆಯನ್ನು ಕಂಡು ಸಮಗಾರನೊಬ್ಬ ಈ ಎಮ್ಮೆ ಚನ್ನಾಗಿ ತಿಂದು ಕೊಬ್ಬಿದೆ ಇದು ಯಾವಾಗ ಸಾಯುವುದೋ ಅದರ ಧರ್ಮದಿಂದ ಚಪ್ಪಲಿಗಳನ್ನು ಮಾಡಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ ಮಡುತ್ತಾನೆ. ಇಲ್ಲಿ ಅಕ್ಕ ತನ್ನನ್ನು ಎಮ್ಮೆಗೆ, ಧರ್ಮಿಗೆ ಹೊಲಿಸಿಕೊಂಡರೆ, ಕೌಶಿಕನನ್ನು ಸಮಗಾರ, ಕರ್ಮಿ, ಕಾಮಿ ಎಂದು ಹೇಳಿದ್ದಾಳೆ.

ತಾನು ಎಮ್ಮೆಯಾಗಿ ದೇವರ ಪೂಜೆಯನ್ನುವ ಹುಲ್ಲನ್ನು ತಿಂದು ಭಕ್ತಿಯನ್ನುವ ಹಾಲನ್ನು ಯಜಮಾನನಾದ ಭಗವಂತನಿಗೆ ಅರ್ಪಿಸಿದರೆ ತನ್ನ ಆ ದೇವರು ಒಲಿಯುವನೋ?, ಒಲಿಯನೋ? ಎಂಬ ಚಿಂತೆಯಿಂದ ದೇವರ ಪೂಜೆ ಧ್ಯಾನಾದಿಗಳಲ್ಲಿರುವ ಇವಳ ಬಗ್ಗೆ ಕೌಶಿಕವೆಂಬ ಸಮಗಾರ ಆಕೆಯ ಶರೀರ ಸುಖವನ್ನು ಅನುಭವಿಸಿ ಯಾವಾಗ ಆನಂದ ಪಡುವುವೇನು ಎಂಬ ಚಿಂತೆಯಲ್ಲಿ ಆತ ಕಾಮ ಸುಖಕ್ಕೆ ಕರ್ಮಿಯಾದರೆ ಇವಳು ಮೋಕ್ಷಪ್ರಾಪ್ತಿಗಾಗಿ ಧರ್ಮಿಯಾಗುವಳು. ಇವಳಿಗೊಂದು ಚಿಂತೆ ಇದ್ದರೆ ಆತನಿಗೊಂದು ಚಿಂತೆ.

ಪ್ರಕೃತಿಯ ಮಡಿಲಲ್ಲಿರುವ ಹಕ್ಕಿ-ಪಕ್ಷಿಗಳಿಗೂ, ಕೀಟಗಳಿಗೂ ಚಿಂತೆ ಇರುತ್ತದೆಂದು ಬಸವಣ್ಣನವರ ಈ ಕೆಳಗಿನ ವಚನದಲ್ಲಿ ಕಾಣಬಹುದು.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳವ ಬಂದುಂಡುವ ಚಿಂತೆ,
ನನಗೆ ನಮ್ಮ ಕೂಡಲ ಸಂಗಮ ದೇವರ ನೆನೆಯುವ ಚಿಂತೆ.
ಅಕ್ಕಮಹಾದೇವಿಯು ದೇವರು ಒಲಿವರೋ?, ಒಲಿಯರೋ? ಎಂಬ ಚಿಂತೆ ಮಾಡುತ್ತಿದ್ದರೆ ಬಸವಣ್ಣನವರು ದೇವರನ್ನು ಸ್ಮರಣೆ(ಚಿಂತೆ)ಯಲ್ಲಿ ತೊಡಗಿದ್ದಾರೆ.
ಹೀಗ ಶರಣರು, ಸಂತರು, ಸಾಧುಸತ್ಪುಷರು ಹಾಗೂ ಸಾಮಾನ್ಯ ಜನರು ಒಂದೊಂದು ಚಿಂತೆಯಲ್ಲಿ ತೊಡಗಿರುತ್ತಾರೆ. ಆದರೆ ಸಾಮಾನ್ಯ ಜನರಿಗೂ ಮತ್ತು ಮಹಾತ್ಮರಿಗೂ ಏನು ವ್ಯತ್ಯಾಸ? ಸಾಮಾನ್ಯರು ಚಿಂತೆ ಮಾಡುತ್ತಿದ್ದರೆ, ಮಹಾತ್ಮರು ಚಿಂತನೆ ಮಾಡುವರು.
‘ಚಿಂತೆ’ ಎಂಬ ಪದದಲ್ಲಿನ ಬಿಂದು ತಗೆದರೆ ‘ಚಿತೆ’ಯಾಗುತ್ತದೆ. ಚಿತೆ ಎಂದರೆ ಬೆಂಕಿ. ಈ ಎರಡರ ಕೆಲಸವು ಒಂದೆ. ಚಿಂತೆ ಜೀವವಿರುವ ಮನುಷ್ಯನನ್ನು ಸುಟ್ಟರೆ, ಚಿತೆ ನಿರ್ಜೀವ ಮನುಷ್ಯನನ್ನು ಸುಡುವದು.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ|
ಚಿತಾದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್||
ನಾವು ಮಹಾತ್ಮರಂತೆ ಕೀರ್ತಿಯನ್ನು ಅಥವಾ ಸ್ವರ್ಗಸುಖವನ್ನು ಅನುಭವಿಸಬೇಕಾದರೆ ಸತ್ಯ ವಸ್ತುವಿನ ಬಗ್ಗೆ ಚಿಂತನೆ ಮಾಡಬೇಕು. “ಚಿಂತೆಯೇ ಮುಪ್ಪು ಸಂತೋಷವೇ ಯವ್ವನ” ಇಲ್ಲಿ ಯವ್ವನವೆಂದರೆ ಸ್ವರ್ಗಸುಖ, ಆನಂದ. ಆ ಆನಂದವನ್ನು ಹೊಂದಬೇಕಾದರೆ ಬನ್ನಿರಿ ನಾವೆಲ್ಲ ಭಗವಂತನನ್ನು ಕುರಿತು ಚಿಂತನೆ ಮಾಡೋಣ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply