ಗುರುವಾಣಿ

0

ಡಾ. ಈಶ್ವರಾನಂದ ಸ್ವಾಮೀಜಿ


ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು.
ಮಾಯಾ ಪ್ರಪಂಚ ಬಿಟ್ಟಿತ್ತು.
ಮುಂದಣ ಹುಟ್ಟರತು ಹೋಯಿತ್ತು.
ನೆಟ್ಟಗೆ ಗುರು ಪಾದವ ಮುಟ್ಟು ಭವಗೆಟ್ಟೆನು ಕಾಣಾ ರಾಮನಾಥ.
ದಾಸಿಮಯ್ಯನವರು ಜೀವಿಯ ಪರಮ ಧ್ಯೇಯವನ್ನು ಈ ವಚನದಲ್ಲಿ ವ್ಯಕ್ತಪಡಿಸುವುದರ ಜೊತೆಗೆ ಆತ್ಮ ಸಾಕ್ಷಾತ್ಕಾರದ ಮಾರ್ಗ ತೋರಿದ್ದಾರೆ. ಅದಕ್ಕಾಗಿ ಜೀವಿಯು ಎಲ್ಲೆಲ್ಲಿಯೂ ಸುತ್ತಾಡದೆ ಗುರುವಿಗೆ ಶರಣಾಗಿ, ಗುರುವಿನಿಂದ ಎಲ್ಲವೂ ಸಾಧ್ಯವೆಂದಿದ್ದಾರೆ. ಹಾಗೆಯೇ ದಾಸಿಮಯ್ಯನವರು ವಚನದಲ್ಲಿ ಗುರು ಕರುಣೆಯಿಂದ ಜೀವಿಯು ಸಂಸಾರವೆಂಬ ಭವಬಂಧನದಿಂದ ಬಿಡುಗಡೆಯಾಗುತ್ತಾನೆ ಎಂದಿದ್ದಾರೆ.
ಗುರುಗಳು, ಜ್ಞಾನಿಗಳು, ಅನುಭಾವಿಗಳು ವ್ಯಕ್ತಿ (ಸಮಾಜ) ಹತ್ತಿರ ಬಂದು ಸದಾಚಾರ, ಸದ್ವಿಚಾರ, ಸದ್ವರ್ತನೆ, ಸದ್ಬಾವಗಳನ್ನು ಬೋಧಿಸತ್ತಾರೆ. ಅವರ ಉಪದೇಶಪರವಾದ ಮಾತುಗಳಿಗೆ ಗಮನ ಕೊಡದೆ ಮತಿಹೀನರಾಗಿ ದುಃಖದಲ್ಲಿ, ಸಂಸಾರದ ಕಷ್ಟದಲ್ಲಿ ಬೆಂದು ಬಳಲಿ ಜನ್ಮವನ್ನು ವ್ಯರ್ಥವಾಗಿ ಹಾಳು ಮಾಡಿಕೊಂಡು ಸತ್ತು ಹೋಗುತ್ತಾರೆ.

ಗುರು ಲಿಂಗ ಒಂದೆಂಬರು
ಗುರು ಲಿಂಗ ಒಂದಾದ ಠಾವ ತಿಳಿದು ನೊಡಿರೆ.
ಗುರು ಕಾರುಣ್ಯವಾದ ಬಳಿಕ
ಅಂಗದ ಮೇಲೆ ಲಿಂಗವಿರಬೇಕು.
ಲಿಂಗವಿಲ್ಲದ ಗುರುಕಾರುಣ್ಯವು
ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತಿದಂತೆ ಕಾಣಾ! ರಾಮನಾಥ.

ಒಂದು ಊರಲ್ಲಿ ಬೀರ್ಯಾ, ತನ್ನ ಹೆಣ್ತಿ ಮಕ್ಕಳ ಜೊತೆಗೆ ಕಾಡಿನ ಸಮೀಪ ಒಂದು ಗುಡಿಸಲ್ಲಿ ವಾಸವಾಗಿದ್ದನು. ದಿನಾಲು ಅಲ್ಲಿ ಕಟ್ಟಿಗೆಗಳನ್ನು ಕಡಿದು ತಂದು ಮಾರಿ ಅದರಿಂದ ತನ್ನ ಜೀವನ ಸಾಗಿಸುತಿದ್ದನು. ಅಲ್ಲಿಗೆ ಒಬ್ಬ ಮಹಾತ್ಮರು ಬಂದರು ಒಂದು ದಿವಸ ಅವನ ಆದಾರ ಆತಿಥ್ಯ ಸ್ವೀಕರಿಸಿ ಬೆಳಿಗ್ಗೆ ತಮ್ಮ ಪ್ರಯಾಣ ಮುಂದು ವರೆಸುವ ಪೂರ್ವದಲ್ಲಿ ಬೀರ್ಯಾಗೆ ಹತ್ತಿರ ಕರೆದು ಇನ್ನು ಮುಂದೆ ಮುಂದೆ ಹೋಗು ಒಳ್ಳೆಯದಾಗುವುದು ಎಂದು ಹಾರೈಸಿ ಹೋದರು. ಆ ಮಾತು ಬೀರ್ಯಾಗೆ ಅರ್ಥವಾಗಲಿಲ್ಲ ಆಗ ಹೆಂಡತಿ ಬಹುಶಃ ನೀವು ಕಾಡಿನಲ್ಲಿ ಇನ್ನೂ ಮುಂದೆ ಹೋಗಿ ದುಡಿದರೆ ಒಳ್ಳೆಯದಾಗಬಹುದು ಎಂಬ ಅರ್ಥವಿರಬಹುದೆಂದು ಎಂದಳು. ಕೊಡಲಿ ಹಿಡಿದು ಹೊರಟ ಕಾಡೊಳಗೆ. ಕಟ್ಟಿಗೆ ತಂದು ಮಾರಿದರೆ ದಿನದಕ್ಕಿಂತಲು ಹೆಚ್ಚಿನ ಲಾಭ ಸಿಕ್ಕಿತು. ಕೈತುಂಬಾ ದುಡ್ಡು ಅದರಿಂದ ಮನೆಗೆ ಏನೇಲ್ಲಾ ಬೇಕೋ ಅದೆಲ್ಲ ಖರಿದಿ ಮಾಡಿ ಅಂದು ಅವರು ಸುಖ ಭೋಜನ ಮಾಡಿದರು ಆ ಸಂತನನ್ನು ಸ್ಮರಿಸುತ್ತ. ಹಾಗೆ ವ್ಯಾಪಾರ ಬೆಳೆಯುತ್ತ ಹೋಯಿತು.

ಒಂದು ಎತ್ತಿನ ಗಾಡಿ ಖರಿದಿಸಿದ ಅದರಿಂದ ಹೆಚ್ಚಾಗಿ ದುಡ್ಡು ಬರಲು ಪ್ರಾರಂಭವಾಯಿತು. ಅದರಿಂದ ತನ್ನ ಮುರಿದ ಗುಡಿಸಲು ರಿಪೇರಿ ಮಾಡಿಸಿದನು. ವ್ಯಾಪಾರ ಬೆಳೆದಂತೆ ಆಳುಗಳಿಟ್ಟನು ಮತ್ತು ಗಾಡಿಯು ಹೆಚ್ಚಿಸಿದನು. ಅದರಿಂದ ಅವನಿಗೆ ಎಲ್ಲರು ಬೀರಪ್ಪನೆಂದು ಕರೆಯತೊಡಗಿದರು. ಒಂದರಿಂದ ಅನೇಕವಾಗಿ ವ್ಯಾಪಾರ ಬೆಳೆದಂತೆ ಮುಂದೆ ಸ್ವಂತ ಲಾರಿಗಳಿಟ್ಟನು. ಮುಂದೆ ಬೀರಪ್ಪ ನಾಯಕನಾದ. ಕಾಡಿನಲ್ಲಿ ಮುಂದೆ ಮುಂದೆ ಹೋದಂತೆ ಶ್ರೀಗಂಧ, ಚಂದನ ಹೀಗೆ ಮೊದಲಾದ ಬೆಲೆಬಾಳುವ ಗಿಡ ಮರಗಳನ್ನು ತಂದು ಮಾರಿ ಸಾಹುಕಾರನಾದನು. ಇಗ ಎಲ್ಲರ ಬಾಯಲ್ಲಿ ನಾಯಕನಾಗಿ ಉಳಿದ. ಹೀಗೆ ಮುಂದೆ ಹೋಗುತ್ತ ಬೆಳ್ಳಿಯ ನಿಕ್ಷೇಪ, ಚಿನ್ನದ ನಿಕ್ಷೇಪ ಸಿಕ್ಕಿತು.

ಆ ಮಾತು ಇವನಿಗೆ ದಾರಿ ದೀಪವಾಯಿತು ಅವನು ಆ ಸಂತಮಹಾತ್ಮರು ಹೇಳಿದ ಮಾತನ್ನು ಮನದಲ್ಲಿ ಮನನ ಮಾಡುತ್ತ ಸಂತೋಷ ಹೊಂದಿದನು. ಹೀಗೆ ಬೀರ್ಯಾ, ಬೀರಪ್ಪಾ, ಬೀರಣ್ಣಾ, ನಾಯಕ, ಸಾಹುಕಾರನಾಗುತ್ತ ಬೆಳೆದನು. ಹಾಗೆ ನಾವು ಸಹ ಜೀವನದಲ್ಲಿ ಮಾಡುವ ಸಾಧನೆಯಲ್ಲಿ ಗುರು ಹಿರಿಯರ ಮಾರ್ಗದರ್ಶನದಂತೆ ಮುಂದುವರೆದರೆ ಸುವರ್ಣ ರೂಪದ ಜ್ಞಾನನೀಧಿ ನಮಗೆ ದೊರೆಯಬಹುದು. ಅದಕ್ಕೆಂದೆ ಶ್ರೀಮನ್ನನಿಜಗುಣ ಶಿವಯೋಗಿಗಳು “ನಂಬು ಜ್ಞಾನವನೇ ಕರ್ಮವೆಂಬ ಜಾಲದೊಳಗೆ ಸಿಲುಕಿ ಹಂಬಲಿಸದಿರು ಮುಕ್ತಿಯಂಬಯಸಿ. ಎಂದಿದ್ದಾರೆ.

ದಾಸಿಮಯ್ಯನವರು ಸಹ ಜೀವಿಯ ಪರಮ ಧ್ಯೇಯವನ್ನು ವ್ಯಕ್ತಪಡಿಸುವುದರ ಜೊತೆಗೆ ಆತ್ಮೋದ್ಧಾರದ ಮಾರ್ಗ ತೋರಿದ್ದಾರೆ. ಅದಕ್ಕಾಗಿ ಜೀವಿಯು ಎಲ್ಲೆಲ್ಲಿಯೂ ಸುತ್ತಾಡದೆ ಗುರುವಿಗೆ ಶರಣಾದಾಗ ಮಾತ್ರ ಎಲ್ಲವೂ ಸಾಧ್ಯವೆಂದಿದ್ದಾರೆ. ಸರ್ವಭೂತಗಳ ಒಳ-ಹೊರಗೂ ರಾಮನಾಥ ಒಬ್ಬನೇ ಇದ್ದು, ಎಲ್ಲವನ್ನು ತನ್ನ ವಶದಲ್ಲಿ ಇಟ್ಟುಕೊಂಡು ನಾನಾ ರೂಪಗಳನ್ನು ಹೊಂದುತ್ತ ಬೇರೆ ಬೇರೆಯಾಗಿ ಕಾಣುತ್ತಾನೆ ಎಂಬುವುದನ್ನು ಜಲಭರಿತ ಘಟ ಮತ್ತು ಸೂರ್ಯನ ದೃಷ್ಟಾಂತದ ಮೂಲಕ ತಿಳಿಸುತ್ತ, ರಾಮನಾಥನನ್ನು ಕಾಣಲು (ಗುರು)ಜ್ಞಾನಿಪುರುಷನಿಂದ ಸಾಧ್ಯವಾಗುತ್ತದೆ. ಜಲಭರಿತ ಘಟದೊಳಗೆ ತೋರುವ ಸೂರ್ಯನ ಪ್ರತಿಬಿಂಬದಂತೆ, ಸರ್ವಜೀವಿಗಳಲ್ಲಿ ರಾಮನಾಥನು ಚೈತನ್ಯ (ಆತ್ಮ) ರೂಪನಾಗಿ ಎದ್ದಾನೆ. ಅದನ್ನು ನೊಡನೆಂದರೆ ಸರ್ವರಿಗೆ ಸಾಧ್ಯವಿಲ್ಲ. ಅದನ್ನು ನೋಡುತ್ತೇನೆಂದು ಅದೆಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೆ ಹೋಗುತ್ತದೆ. ಅದನ್ನು ಹೊಂದಿ, ಪಡೆದು ಅನುಭವಿಸಲು ಗುರವಿನ ಮಾರ್ಗದರ್ಶನ ಅವಶ್ಯಕ.

ಘಟದೊಳಗೆ ತೋರುವ ಸೂರ್ಯನಂತೆ
ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು
ಇದ್ದರೇನು? ಅದ ಕೂಡುವರೆ
ಗುರುವಿನಿಂದಲ್ಲದಾಗÀದು ಕಾಣಾ ರಾಮನಾಥ.

ಶರೀರಧಾರಿಯಾದ ಜೀವಿಯು ಉದ್ಧಾರವನ್ನು ಹೊಂದಲು ದಾಸಿಮಯ್ಯನವರು ಸರಳ ಮಾರ್ಗ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಈಶ್ವರನನ್ನು ತಿಳಿದುಕೊಂಡಾಗ ಅಥವಾ ತನ್ನ ಸ್ವರೂಪಜ್ಞಾನವಾದಾಗ ಜೀವಿಯು ತನ್ನ ಗುರಿ ಸೇರುತ್ತಾನೆ. ಅದಕ್ಕಾಗಿ ಜೀವಿಯು ಎಲ್ಲಿಯೂ ಹೋಗಬೇಕಾಗಿಲ್ಲ ಎಂದು, ಘಟವನ್ನೊಡೆದು ಬಯಲು ನೋಡುವುದರ ಬದಲು ಘಟದೊಳಗಿದ್ದದ್ದು ಬಯಲೆಂದರಿದರೆ ಸಾಕು, ಪಟವ ಹರಿದು ತಂತುವನ್ನು ಕಾಣುವುದಕ್ಕಿಂತ ಆ ಪಟವೆ ತಂತುವೆÉಂದು ಅರಿತರೆ ಸಾಕು, ಆಭರಣಗಳನ್ನು ಕೆಡಿಸಿ(ಕರಗಿಸಿ) ಚಿನ್ನವ ನೊಡುವುದಕ್ಕಿಂತ ಆಭರಣವೆ ಚಿನ್ನವೆÉಂದರಿತರೆÉ ಸಾಕು, ಹಾಗೆಯೇ ತನು ಬಿಟ್ಟು ಜೀವಿಯು ಈಶ್ವರನನ್ನಾಗಲಿ ಸಂಪಾದಿಸುತ್ತೇನೆಂದು ಹೇಳುವುದರ ಬದಲು ತಾನೇ ಈಶ್ವರ ಅಥವಾ ಪರಮ ಶ್ರೇಷ್ಠ ಸ್ವರೂಪಿ ಎಂದು ಅರಿತರೆ ಸಾಕು ಎಂದಿದ್ದಾರೆ.

ಘಟವನೊಡೆದು ಬಯಲು ನೋಡಲದೇಕೆ?
ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಆ ಪಟವೆ ತಂತುವೆÉಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ?
ಆ ಕಟಕವೆ ಕಾಂಚನವೆÉಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೆ ಘನವೆÉಂದರಿದಡೆ ಸಾಲದೆ? ಹೇಳಾ! ರಾಮನಾಥ.

ದೇವರ ದಾಸಿಮಯ್ಯನವರು ತಮ್ಮ ವಚನದಲ್ಲಿ ಘಟ, ಪಟ, ಕಾಂಚನಗಳ ಉದಾಹರಣೆಗಳ ಮೂಲಕ ತನ್ನ ಸ್ವರೂಪಜ್ಞಾನ ಹೊಂದಿದ ಜೀವಿಯು ಈಶ್ವರ ಸ್ವರೂಪಿಯೇ ಸರಿ. ಅದುವೇ ಮೋಕ್ಷವೆಂದು ಹೇಳುತ್ತಾರೆ ಅದು ಗುರು ವಾಣಿಯಿಂದ ಸಾಧ್ಯವೆಂದು ಅರ್ಥೈಸಿಕೊಳ್ಳಬೇಕು.

 

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply