ಬೆಂಗಳೂರು – ಮೇಕೆದಾಟು ಯೋಜನೆಯಲ್ಲಿ ಪರಿಸರಕ್ಕೆ ತೊಂದರೆ ಆಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲು ಚೆನ್ನೈ ನಲ್ಲಿರುವ ರಾಷ್ಟ್ರೀಯ ಹಸಿರು ಪೀಠ ದಿನಪತ್ರಿಕೆಯ ವರದಿಯನ್ನು ಆಧರಿಸಿ ಸ್ವಯಂ ಪ್ರೇರಣೆಯಿಂದ ರಚನೆ ಮಾಡಿರುವ ಸಮಿತಿಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸುವ ಸಂಬಂಧ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತ ಮಟ್ಟದ  ಸಭೆ ನಡೆಯಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಟೌನ್ ಹಾಲ್ ಬಳಿ  ಬೆಂಗಳೂರು ನಗರ ಸಂಚಾರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು‌.

ರಾಷ್ಟ್ರೀಯ ಹಸಿರು ಪೀಠ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸೋಮೋಟೋ ದೂರು ದಾಖಲಿಸಿಕೊಂಡಿದೆ.  ಇದಕ್ಕೆ ಸಂಬಂಧಪಟ್ಟಂತೆ ಸಮಿತಿ ರಚನೆ ಮಾಡಿದೆ. ಮೇಕೆದಾಟು ಯೋಜನೆಗೆ ಭೇಟಿ ನೀಡಬೇಕು. ಅಲ್ಲಿ ಪರಿಸರ ನಾಶ ಆಗಿದೆಯೇ?  ಪರಿಸರಕ್ಕೆ ತೊಂದರೆಯಾಗಿದೆಯೆ? ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಮಿತಿ ರಚಿಸಿದೆ.  ಈ ಸಂಬಂಧ ಯಾರೂ ಅಧಿಕೃತವಾಗಿ ದೂರು ನೀಡದಿದ್ದರೂ ಹಸಿರುಪೀಠ ಸ್ವಯಂ ಪ್ರೇರಿತವಾಗಿ ಸಮಿತಿ ರಚನೆ ಮಾಡಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಿದೆ ಎಂದರು.

ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ,  ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ,  ಅಂತರ್ ರಾಜ್ಯ ಜಲ ವಿವಾದದ ಕಾನೂನು ಪಂಡಿತರು,  ಹಿರಿಯ ವಕೀಲರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈಗಾಗಲೇ ಮೇಕೆದಾಟು  ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ಗೆ ಎಲ್ಲ ವಿವರವನ್ನು ನೀಡಲಾಗಿದೆ.  ಕರ್ನಾಟಕ ತನ್ನ ಹಕ್ಕಿನ ನೀರನ್ನು ಬಳಕೆ ಮಾಡಿಕೊಳ್ಳುತ್ತಿದೆ.  ಇಂಥ ಸಂದರ್ಭದಲ್ಲಿ ಸಮಿತಿ ರಚನೆ ಮಾಡಿದ್ದು ಎಷ್ಟು ಸಮಯೋಚಿತ?  ಹಾಗೂ ಎಷ್ಟು ಕಾನೂನುಬದ್ಧ ಎಂಬ ಪ್ರಶ್ನೆ ಉದ್ಭವಿಸಿದೆ‌.  ಹೀಗಾಗಿ ಈ ವಿಚಾರದಲ್ಲಿ  ಕಾನೂನಾತ್ಮಕವಾಗಿ ಕರ್ನಾಟಕದ ಹಿತ ಕಾಪಾಡುವುದು ನಮ್ಮ ಕೆಲಸ.  ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಮಾಡಬೇಕು ಎಂಬುದರ ಕುರಿತು ನಾಳೆ ಪ್ರಮುಖವಾದ ಸಭೆ ನಡೆಯಲಿದೆ ಎಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply