ಡಾ. ಈಶ್ವರಾನಂದ ಸ್ವಾಮೀಜಿ

ಸಂಸಾರವೆಂದರೆ ಎರಡು ವ್ಯಕ್ತಿಗಳ ಮಧ್ಯದಲ್ಲಿ ನಡೆಯುವ ಒಂದು ತಲೆಮಾರಿನ ನಿರಂತರ ಹೋರಾಟವೆಂದು ಸಮಾಜ ಶಾಸ್ತ್ರಜ್ಞರು ಹೇಳಿದಂತೆ ಸತಿ-ಪತಿಗಳಿಬ್ಬರೂ ಒಬ್ಬರಿಗೊಬ್ಬರೂ ಪ್ರೀತಿಸಿ ಪ್ರಾಂಜಲ ಮನಸಿನಿಂದ ವಿಮರ್ಶಿಸಿ, ವಿವರಿಸಿ ಒಬ್ಬರ ಮಾತನ್ನು ಒಬ್ಬರು ಆಲಂಗಿಸಿ, ಆದರಿಸಿ ಲೋಪದೋಷಗಳನ್ನು ಅರಿತು, ಮರೆತು ಮುನ್ನಡೆಯಬೇಕು. ಎಂಬುವುದನ್ನು ಆದ್ಯವಚನಕಾರ ದೇವರ ದಾಸಿಮಯ್ಯನವರ ವಚನದಿಂದ ಅರಿಯಬಹುದು.
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷಬೆರೆಸಿದಂತೆ ಕಾಣಾ ರಾಮನಾಥ.
ಸತಿ-ಪತಿಗಳಿಬ್ಬರ ಅಭಿಪ್ರಾಯದಲ್ಲಿ ಅಡ್ಡಗೊಡೆ ಬೆಳೆದು ನನ್ನ ಮಾತೇ ಮೇಲು ಎಂದು ಒಬ್ಬರನೊಬ್ಬರು ದ್ವೇಷಿಸುತ್ತ ಬಾಳಿದರೆ, “ಎತ್ತು ಏರಿಗೆ ಕೋಣ ಕೆರೆಗೆ” ಎಳೆದಂತಾಗುವುದಿಲ್ಲವೇ? ಆಗ ಹಾಲಿನಂತ ಸಂಸಾರ ಹಾಲಾವಾಗಿ ಅಲ್ಲಿ ಏಳುವ ತೆರೆಗಳು ಕೋಲಾಹಲವಾಗಿ ಪರಿಣಮಿಸುತ್ತದೆ. ಅದೇ ಸತಿ-ಪತಿಗಳಿಬ್ಬರೂ ಒಮ್ಮನವಾಗಿ ಒಬ್ಬರ ವ್ಯಕ್ತಿತ್ವದಲ್ಲಿ ಮತ್ತೊಬ್ಬರ ಅಸ್ತಿತ್ವ ಲಿನವಾದಾಗ ಬಾಳು ಬಂಗಾರವಾಗುತ್ತದೆ. ಜೀವನ ಸುಂದರವಗುತ್ತದೆ.
ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳಲ್ಲವೇ ? ನೀವೇಕೆ ಎರಡು ಸೂತ್ರಗಳು ಎನ್ನುತ್ತಿದ್ದಿರೆಂದು ಕೇಳಬೇಡಿ. ಇಲ್ಲಿರುವ ಪ್ರಸಂಗವು ಎರಡು ಪ್ರಮುಖ ಸೂತ್ರಗಳ ಬಗ್ಗೆ ತಿಳಿಸುತ್ತದೆ.
ಒಂದೂರಿನಲ್ಲಿದ್ದ ಯುವ ದಂಪತಿಗಳು ಪ್ರೀತಿಸಿ ಮದುವೆಯಾದರು. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಆರು ತಿಂಗಳಲ್ಲಿ ಅವರಿಬ್ಬರು ಮಾನಸಿಕವಾಗಿ ದೂರವಾಗಿದ್ದರು. ಕಾಯಂ ಆಗಿ ದೂರವಾಗುವುದರ ಬಗ್ಗೆಯೂ ಚಿಂತಿಸುತ್ತಿದ್ದರು.
ಹೀಗಿರುವಾಗ ಹಳ್ಳಿಯಲ್ಲಿ ಯುವಕನ ತಾಯಿ ಅವರ ಮನೆಗೆ ಬಂದಿಳಿದರು. ಅವರಿಗೆ ತಮ್ಮ ಮಗ-ಸೊಸೆ ಭಾರತದಲ್ಲಿದ್ದರೂ, ಒಬ್ಬರು ಅಮೇರಿಕಾದಲ್ಲಿ, ಮತ್ತೊಬ್ಬರು ಇಂಗ್ಲೆಂಡಿನಲ್ಲಿರುವಂತೆ ವಾಸಿಸುತ್ತಿರುವುದನ್ನು ಕಂಡು ಖೇದವಾಯಿತು. ಆಕೆ ಕೂರಿಸಿಕೊಂಡು ನಿಮಗೆ ಎರಡು ಪ್ರಸಂಗಗಳನ್ನು ಹೇಳುತ್ತೇನೆ ಕೇಳಿ ಎಂದು.
ಮೊದಲ ಘಟನೆ – ಗಂಡ ಪೇಪರ್ ಓದುತ್ತಿದ್ದಾಗ ಹೆಂಡತಿ ಅವರಿಗೆ ಕಾಫಿ ತಂದು ಕೊಟ್ಟು ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು ಎಂದರು. ಗಂಡ ಆಗಲಿಯೆಂದರು. ಆಕೆ ಹೇಳತೊಡಗಿದರು. ಇವರು ಪೇಪರ್ ಓದುತ್ತಾ ಹೂಂ, ಹೂಂ ಎನ್ನುತ್ತಾ ಇದ್ದಾ ಇದ್ದರು. ಎಷ್ಟೋ ಹೊತ್ತಿನ ನಂತರ ಹೆಂಡತಿ ಗಟ್ಟಿಯಾಗಿ ಬಿಕ್ಕಳಿಸಿ ಅಳುತ್ತಿರುವುದು ಕೇಳಿಸಿತು.
ಗಂಡ ಪೇಪರ್ ಕೆಳಗಿಟ್ಟು ಏಕೆ ಅಳುತಿದ್ದಿ ? ಏನಾಯಿತು? ಎಂದಾಗ, ಆಕೆ ಮಾತನಾಡುವುದನ್ನು ನಿಲ್ಲಿಸಿ ಅರ್ಧ ಗಂಟೆಯಾಯಿತು. ಆದರೆ ನೀವಿನ್ನು ಹೂಂ, ಹೂಂ ಎನ್ನುತ್ತಿದ್ದಿರಿ. ಅಂದರೆ ನಾನು ಮಾತನಾಡುವುದನ್ನು ನೀವು ಕೇಳಿಸಿಕೊಂಡೇ ಇಲ್ಲ. ನಾನು ಮಾತನಾಡಿ ಏನು ಪ್ರಯೋಜನ ? ಅದಕ್ಕಾಗಿ ಅಳುತ್ತಿದ್ದೇನೆ ಎಂದರು. ಯಾರಾದರೂ ನಮ್ಮೊಂದಿಗೆ ಮಾತನಾಡುವಾಗ ಸರಿಯಾಗಿ ಕೇಳಿಸಿಕೊಳ್ಳದೆ, ಕೇಳಿಸಿಕೊಂಡ ನಾಟಕ ಮಾಡಿದರೆ ಹೀಗಾಗುವುದು ಸಹಜ.
ಮತ್ತೊಂದು ಪ್ರಕರಣ – ಗಂಡ-ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು. ತಾನು ಹೆಚ್ಚು ಬುದ್ದಿವಂತ, ತನಗೇ ಎಲ್ಲವು ಗೊತ್ತು ಎಂಬುದು ಗಂಡನ ಅನಿಸಿಕೆ. ಹೆಂಡತಿ ಹೇಳಿದುದನ್ನು ಪೂರ್ಣ ಸಹನೆಯೂ ಆಗಿರುತ್ತಿರಲಿಲ್ಲ. ಒಂದು ಮುಂಜಾನೆ ಹೆಂಡತಿ ನೆನ್ನೆ ರಾತ್ರಿ ಕನಸಿನಲ್ಲಿ ನಮ್ಮಿಬ್ಬರ ಮುಂದೆ ಎರಡು ಮಡಕೆಗಳಿದ್ದವು. ನಾವು ಕೈಗಳನ್ನು ಮಡಕೆಯಲ್ಲಿ ಅದ್ದಿದ್ದೇವು. ನಿಮ್ಮ ಕೈ ಜೇನುತುಪ್ಪದ ಮಡಕೆಯಲ್ಲಿತ್ತು. ನನ್ನ ಕೈ ಹೊಲಸು ತುಂಬಿದ್ದ ಮಡಕೆಯಲ್ಲಿತ್ತು.
ಆಕೆಯ ಮಾತನ್ನು ಮಧ್ಯದಲ್ಲೇ ತಡದ ಗಂಡ ನನಗೆ ಹೀಗಾಗುತ್ತದೆಂದು ಗೊತ್ತಿತ್ತು. ನಾನು ಬುದ್ಧಿವಂತಿಕೆಯಿಂದ ವ್ಯವಹರಿಸುತ್ತೇನೆ. ಹಾಗಾಗಿ ನನ್ನ ಕೈ ಜೇನಿನ ಮಡಕೆಯಲ್ಲಿರುತ್ತದೆ. ನಿನ್ನ ಕೈ ಹೊಲಸಿನ ಮಡಕೆಯಲ್ಲಿರುತ್ತದೆ ಎಂದರು.
ಹೆಂಡತಿ ನಾನು ಕನಸಿನ ಭಾಗವನ್ನು ಹೇಳುವುದಕ್ಕೆ ಮುಂಚೆಯೇ ನೀವು ಮಾತನಾಡಿ ಬಿಟ್ಟಿರಿ. ಇದು ನಿಮ್ಮ ದುರಾಭ್ಯಾಸ. ಅದಿರಲಿ ನನ್ನ ಕನಸಿನ ಮುಂದಿನ ಭಾಗದಲ್ಲಿ ನಿಮ್ಮ ಕೈಯನ್ನು ನಾನು ನೆಕ್ಕುತ್ತಿದ್ದೆ, ನನ್ನ ಕೈಯನ್ನು ನೀವು ನೆಕ್ಕುತ್ತಿದ್ದಿರಿ ಎಂದು ಹೇಳಿದಾಗ ಸಿಟ್ಟಿನಿಂದ ಗಂಡನ ಮುಖ ಕೆಂಪಾಯಿತು. ಯಾರಾದರೂ ಮಾತನಾಡುವಾಗ ಮಧ್ಯೆ ನಾವೇ ಹೆಚ್ಚಾಗಿ ಮಾತನಾಡತೊಡಗಿದರೆ ಹೀಗಾಗುತ್ತದೆ.
ಈ ಎರಡೂ ಪ್ರಸಂಗಗಳನ್ನು ವಿವರಿಸಿದ ತಾಯಿಯವರು ಹೇಳಿದ್ದು, ನಿಮಗೆ ಆರ್ಥಿಕ ಸಮಸ್ಯೆ ಇಲ್ಲ. ಅತ್ತೆ-ಮಾವಂದಿರ ಕಾಟವಿಲ್ಲ. ಬೇರಾವ ತೊಂದರೆಯೂ ಇಲ್ಲ. ತಾವೇ ಬುದ್ಧಿವಂತರೆಂಬ ಅಹಮ್ಮಿನ ಸಮಸ್ಯೆ. ನೀವಿಬ್ಬರೂ ಮಾತನಾಡುವಾಗ ಪರಸ್ಪರ ಗೌರವ ಕೊಟ್ಟು ಗಮನ ಕೊಟ್ಟು ಕೇಳಿದರೆ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ. ಒಂದು ತಿಂಗಳ ಕಾಲ ಅಭ್ಯಾಸ ಮಾಡಿ ಆಗದಿದ್ದರೆ ನಿಮಗೇನು ಬೇಕೋ ಅದನ್ನೇ ಮಾಡಿಕೊಳ್ಳಿ ಎಮದು ಸಲಹೆ ನೀಡಿದರು.
ಪರಸ್ಪರ ಗೌರವಿಸುವ, ಗಮನ ಕೊಟ್ಟು ಮತ್ತೊಬ್ಬರ ಮಾತನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡ ಮೇಲೆ, ಗಂಡ-ಹೆಂಡತಿಯರ ನಡುವಿನ ಅಂತರ ಕಡಿಮೆಯಾಗುತ್ತಾ ಹೋದುದನ್ನು ಕಂಡು ಆಶ್ಚರ್ಯವಾದದ್ದು ತಾಯಿಗಲ್ಲ ! ಮಗ-ಸೊಸೆಗೆ ! ಸುಖ ಸಂಸಾರಕ್ಕೆ ಸೂತ್ರಗಳು ಇರಬಹುದಾದರೂ ಪರಸ್ಪರ ಗೌರವಿಸುವುದು, ಗಮನಕೊಟ್ಟು ಕೇಳುವುದು ಮುಖ್ಯವಾದ ಸುಲಭ ಸೂತ್ರಗಳಲ್ಲವೇ?

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply