ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಮೆಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ?

ಮೆಳೆ ಶಿವಭಕ್ತನಾಗಬಲ್ಲುದೆ?

ನಿಮ್ಮ ತನುಮನಧನವನರಿಯದಿದ್ದಡೆ

ಸದುಭಕ್ತರಹರೆ? ರಾಮನಾಥ.

ಒಂದೂರಿನಲ್ಲಿ ಸಿದ್ಧಬಸಪ್ಪನೆಂಬ ಚಂಚಲ ಸ್ವಭಾವದ ಭಕ್ತನಿದ್ದನು. ದಿನ-ನಿತ್ಯ ಊರ ಮಧ್ಯದಲ್ಲಿರುವ ಈಶ್ವರ ಗುಡಿಗೆ ಹೋಗಿ ಅಲ್ಲಿಯ ಈಶ್ವರ ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದನು. ದಿನನಿತ್ಯದಂತೆ ಈಶ್ವರ ಲಿಂಗಕ್ಕೆ ಪೂಜೆ ಮಾಡಬೇಕೆನ್ನುವಾಗ, ಇಲಿಯೊಂದು ಲಿಂಗದ ತೆಲೆಯ ಮೇಲೆ ಕುಳಿತು ಅಕ್ಷತೆಯನ್ನು ತಿನ್ನುತಲಿತ್ತು. ಇದು ಸಹಜವಾದರೂ ಸಿದ್ಧಬಸಪ್ಪ ಬೇರೆ ವಿಚಾರ ಮಾಡತೋಡಗಿದನು. ಪರಶಿವ ಬ್ರಹ್ಮವೇ ಲಿಂಗವಾಗಿದೆ ಎಂದು ಆಗಮಗಳು ಹೇಳುವವು. ಆದರೆ ಕ್ಷುಲ್ಲಕ ಇಲಿಯೊಂದು ಲಿಂಗದ ತೆಲೆಯ ಮೇಲೆ ಕುಳಿತು ಕಾಳುತಿನ್ನುತ್ತಿದೆಂದರೇ ಲಿಂಗದಕಿಂತಲೂ ಇಲಿಯೇ ಶ್ರೇಷ್ಠವಾದುದ್ದು, ಹೆಚ್ಚಿನ ಬಲವು ಇಲಿಯಲ್ಲಿಯೇ ಇರುವುದು ಎಂದು ತಿಳಿದು, ಮುಂದೆ ಇಲಿಯೇ ದೇವರೆಂದು ಪೂಜಿಸುವೇನು ಎಂದು ಒಂದು ಇಲಿಯನ್ನು ಹಿಡಿದು ಬೆಳ್ಳಿ ಪಂಜರದಲ್ಲಿಟ್ಟು ಪೂಜಿಸತೊಡಗಿದನು. ಪ್ರತಿ-ನಿತ್ಯ ಇಲಿಗೆ ಒಳ್ಳೊಳ್ಳೆ ಕಾಳುಗಳನ್ನು ನೈವೆದ್ಯವಾಗಿ ಅರ್ಪಿಸತೊಡಗಿದುದರಿಂದ ಇಲಿಯು ತಿಂದು ಬಲಿಯಿತು. ಸಿದ್ದಬಸಪ್ಪನ ಮನೆಯ ಬೆಕ್ಕು ಕೊಬ್ಬಿದ ಇಲಿಯನ್ನು ಕಂಡು ಅದರ ಬಾಯಿಯಲ್ಲಿ ನೀರೂರಿತು. ಹೇಗದರು ಮಾಡಿ ಪಂಜರದ ಬಾಗಿಲು ತೆರೆದು ಇಲಿಯನ್ನು ತಿನ್ನಬೇಕೆಂದು ಹೊಂಚುಹಾಕಿ, ಒಂದು ದಿನ ಪಂಜರದ ಬಾಗಿಲು ತೆರೆದು ಅದರೊಳಗಿದ್ದ ಇಲಿಯನ್ನು ತಿಂದು ಹಾಕಿತು. ಬೆಕ್ಕು ಲಿಂಗದ ತೆಲೆಯ ಮೇಲಿದ್ದ ಅಕ್ಷತೆಯನ್ನು ತಿಂದ ಇಲಿಯನ್ನೇ ಕೊಂದು ತಿನ್ನಬೇಕಾದರೆ ಬೆಕ್ಕೇ ಸರ್ವಶ್ರೇಷ್ಠಾದದ್ದು, ಇನ್ನು ಮುಂದೆ ಬೆಕ್ಕನ್ನೇ ದೇವರೆಂದು ಪೂಜಿಸವೇನು ಎಂದು ಅವಿವೇಕಿ ಮತ್ತು ದೃಢವಿಲ್ಲದ ಸಿದ್ದಬಸಪ್ಪ ಬೆಕ್ಕಿಗೆ ಪೂಜಿಸತೋಡಗಿದನು. ಆದರೆ ಅದೊಂದು ದಿನ ಬೆಕ್ಕಿಗೂ ಮನೆಯ ನಾಯಿಗೂ ಜಗಳವಾಗಿ ನಾಯಿ ಬೆಕ್ಕಿನ ಕತ್ತು ಹಿಸುಕಿ ಕೊಂದುಹಾಕಿತು. ಅದನ್ನು ಕಂಡ ಸಿದ್ದಬಸಪ್ಪ ಅಹಾ! ಲಿಂಗದ ಮೇಲಿನ ಅಕ್ಷತೆ ತಿಂದ ಇಲೇಶ್ವರನನ್ನು ಕೊಂದ ಬೆಕ್ಕೇಶ್ವರನಿಗೆ ನಾಯಿಕೊಂದು ಹಾಕಿತೆಂದರೆ ನಾಯಿಯೇ ದೇವರೆಂದು ಅದಕ್ಕೆ ದಿನ ನಿತ್ಯ ಪೂಜಿಸತೊಡಗಿದನು.

ದೇವರಾದ ಮೇಲೆ ನಾಯಿಗೆ ಮನೆತುಂಬಾ ಒಡಾಡುವ ಸ್ವತಂತ್ರ್ಯ ಸಿಕ್ಕಿತು. ಅದು ಅಡುಗೆಮನೆ, ಪಡಸಾಲೆ, ಅಂಗಳ ಎಲ್ಲೆಂದರಲ್ಲಿ ಒಡಾಡತಿತ್ತು. ಅದು ಒಮ್ಮೆ ಕಳತನಮಾಡಿ ಮನೆಯಲ್ಲಿರುವ ಕರ್ಚಿಕಾಯಿ ತಿಂದು ಮನೆಯಲ್ಲಿರುವ ಸಾಮಾನುಗಳನ್ನು ಚಲ್ಲಾಪಿಲ್ಲಿಗೊಳಿಸಿತು. ಅದನ್ನು ಕಂಡ ಅವನ ಹೆಂಡತಿ ಕೋಪಗೊಂಡು ನಾಯಿಗೆ ಬಡಿದು ಕೊಂದುಹಾಕಿದಳು. ಅದನ್ನು ಕಂಡ ಸಿದ್ದಬಸಪ್ಪ ಹೆಂಡತಿಯಲ್ಲಿಯೇ ಅಗಾದ ಶಕ್ತಿ ಇದೆ. ಅದನ್ನು ಅರಿಯದೆ ಹೋದೆ. ಇನ್ನು ಮೇಲೆ ನನ್ನ ಹೆಂಡತಿಯನ್ನು ಪೂಜಿಸುವೆ ಎಂದು ಪೂಜಿಸತೋಡಗಿದನು.

ದೃಢವಿಲ್ಲದ ಚಿತ್ತ ಶುದ್ಧಿಯಿಲ್ಲದ ಭಕ್ತಿ, ಚಂಚಲ ಮನದ ಭಕ್ತ ಯಾವ ಪುರುಷಾರ್ಥವನ್ನು ಸಾಧಿಸಲಾರ.

ಸ್ಥಿರ ಮನದಿ ಮಾಡು ನೀ ಹರಪೂಜೆ

ಗುರುಸೇವೆ ಚರ ಬುದ್ಧಿ ತುಸು ಕೂಡಾ ಬಳಸದಲೇ

ಇಂತೆಸಗೆ ಹರ ನೀಡ್ವ ವರಭಾಗ್ಯ ಸರ್ವಜ್ಞ.

 

About Author

Priya Bot

Leave A Reply