ಡಾ. ಈಶ್ವರಾನಂದ ಸ್ವಾಮೀಜಿ

ಅಕ್ಕಮಹಾದೇವಿಯ ನಂತರದ ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಸಂಚಿಯ ಹೊನ್ನಮ್ಮಳು, ಒಬ್ಬ ಮಹಿಳಾ ಕವಿತ್ರಿ. ಇವಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬಾಳಿಬೆಳಗಿದ ಅಪರೂಪದ ವ್ಯಕ್ತಿತ್ವ ಹಾಗೂ ಹೆಂಗಳೆಯರಿಗೆ ಮಾರ್ಗದರ್ಶಕಳಾಗಿದ್ದಳು. ಇವಳು ತನ್ನದೇ ಆದ ದಾಟಿಯಲ್ಲಿ ಹೆಣ್ಣಮಕ್ಕಳ ಗೌರವ ಹೆಚ್ಚಿಸಲು ಹಾಗೂ ಗಂಡಸರನ್ನು ಉದ್ದೇಶಿಸಿ –
ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು
ಅಂದರೆ ನಮ್ಮನ್ನೆಲ್ಲ ಹಡೆದ ತಾಯಿ ಹೆಣ್ಣೆಲ್ಲವೆ? ನಮ್ಮನ್ನು ಸಾಕಿದವಳು ಹೆಣ್ಣೆಲ್ಲವೆ? ಕಣ್ಣು ಕಾಣದ ಮೂರ್ಖರು ಹೆಣ್ಣು ಹೆಣ್ಣು ಎಂದು ಹೀನವಾಗಿ ಏಕೆ ಕಾಣುವರೋ ತಿಳಿಯದು ಎಂದಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಸ್ತ್ರೀಯ ಶಕ್ತಿ ಎಷ್ಟು ಇದೆ ಎಂಬುವುದನ್ನು ಒಂದು ದೃಷ್ಟಾಂತದ ಮೂಲಕ ಅರಿಯಬಹುದು.
ಗಂಡ ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು. ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಜನಿಸಲಿ ಬಿಡು. ನಮಗೆ ಗಂಡು/ಹೆಣ್ಣು ಎರಡು ಒಂದೆ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಜನಿಸಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಕೇಳಿದಳು.
ಗಂಡ ಕಿಟಕಿಯಿಂದ ಹೊರಗೆ ಬಾನಿನತ್ತ ನೋಡುತ್ತಾ ಅವನ್ನು ಮಹಾ ತುಂಟನನ್ನಾಗಿ ಬೆಳೆಸುತ್ತೇನೆ. ಅವನು ಚೆನ್ನಾಗಿ ಈಜಬೇಕು, ಸೈಕಲ್ ಹೊಡೆಯಬೇಕು. ಮರ ಹತ್ತಬೇಕು. ಕ್ರಿಕೆಟ್ ಆಡಬೇಕು. ಕರಾಟೆ ಕಲಿಯಬೇಕು. ಬೆಟ್ಟಗುಡ್ಡ ಹತ್ತಬೇಕು. ನಕ್ಷತ್ರ ವೀಕ್ಷಣೆಯನ್ನು ಮಾಡಿಸಬೇಕು. ಲೆಕ್ಕವನ್ನು ಕಲಿಸಬೇಕು. ಗಿಟಾರ್ ನುಡಿಸೋಕೆ ಬರಬೇಕು ಹಾಡೋಕೆ ಕಲಿತ್ರೆ ಇನ್ನೂ ಚೆನ್ನಾಗಿರುತ್ತದೆ ಎಂದನು.
ಗಂಡ ಇನ್ನೂ ಮಗನಿಗೆ ಕಲಿಸಬೇಕಾದ ಪಟ್ಟಿಯನ್ನು ಮುಂದುವರೆಸುತ್ತಿದ್ದನೋ ಏನೋ? ಹೆಂಡತಿ ಮಧ್ಯೆ ತಲೆಹಾಕಿದಳು. ಹೆಣ್ಣು ಮಗು ಜನಿಸಿದರೆ ಅವಳಿಗೇನು ಕಲಿಸುತ್ತೀರಿ? ಕುತೂಹಲದಿಂದ ಕೇಳಿದಳು. ಹೆಣ್ಣು ಮಗಳೆ? ಹೆಣ್ರಣು ಮಗಳು ಜನಿಸಿದರೆ ಅವಳಿಗೆ ನಾನ್ಯಾಕೆ ಕಲಿಸಬೇಕು? ಎಂದ ಗಂಡ. ಆಘಾತವಾಯಿತು ಹೆಂಡತಿಗೆ.ಅವಳಿಗೆ ಅರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಉಕ್ಕಿತು. ಯಾಕ್ರಿ ನಮಗೆ ಗಂಡು ಮಗು ಹೆಣ್ಣು ಮಗು ಎರಡೂ ಒಂದೇ ಅಲ್ವೆ? ಹೆಣ್ಣು ಮಗುವಿಗೆ ಯಾಕೆ ಏನನ್ನೂ ಕಲಿಸಲ್ಲ! ಎಂದಳು.
ಗಂಡನು ನಗುತ್ತಾ, ಅಯ್ಯೋ, ಹೆಣ್ಣು ಮಕ್ಕಳಿಗೆ ನಾವು ಏನೂ ಕಲಿಸಬೇಕಾಗಿಲ್ಲ ಕಣೆ. ಅವರಿಗೆ ಅದು ದೈವದತ್ತವಾಗಿ ಬಂದಿರುತ್ತದೆ ಎಂದನು. ಅರ್ಥವಾಗಲಿಲ್ಲ ಬಿಡಿಸಿ ಹೇಳಿ ಎಂದಳು ಹೆಂಡತಿ. ಹೆಣ್ಣು ಮಕ್ಕಳಿಗೆ ನಾವು ಕಲಿಸಬೇಕಾಗಿಲ್ಲ. ಅವಳು ನಮಗೆ ಎಲ್ಲವನ್ನೂ ಕಲಿಸುತ್ತಾಳೆ. ನಾನು ಹೇಗೆ ಬಟ್ಟೆ ಹಾಕಿಕೊಳ್ಳಬೇಕು, ಏನನ್ನು ತಿನ್ನಬೇಕು, ಏನನ್ನು ಮಾತನಾಡಬೇಕು, ಏನನ್ನೂ ಮಾತನಾಡಬಾರದು, ಎಲ್ಲಗೆ ಹೋಗಬೇಕು, ಎಷ್ಟು ಹೊತ್ತಗೆಲ್ಲ ಮನೆಗೆ ಬರಬೇಕು, ಒಟ್ಟಿನಲ್ಲಿ ಹೇಳುವುದಾದರೆ ಅವಳು ಎರಡನೆಯ ಅಮ್ಮನಾಗಿ ಬಿಡುತ್ತಾಳೆ.
ಮಗಳಿಗೆ ತಂದೆಯೇ ಹೀರೋ! ನಾನು ಬದುಕಿನಲ್ಲಿ ಏನನ್ನೂ ಸಾಧಿಸದಿದ್ದರೂ ಅವಳ ಪಾಲಿಗೆ ನಾನೇ ಹೀರೊ. ಅವಳಿಗೆ ಏನನ್ನಾದರೂ ಕೊಡಿಸಲಾಗದಿದ್ದರೆ, ಅವಳೆ ನನಗೆ ಸಮಾಧಾನ ಹೇಳಿ ಮುಂದಿನ ತಿಂಗಳು ಕೊಡುಸುವಿಯಂತೆ ಬಿಡಪ್ಪ ಎನ್ನುತ್ತಾಳೆ.
ಅವಳ ಮನಸ್ಸಿಲ್ಲಿ ತನ್ನ ಅಪ್ಪನಂತೆ ಗಂಡ ಸಿಗಬೇಕು ಎನ್ನುವ ಆಸೆ ಸುಪ್ತವಾಗಿ ಬೆಳೆಯುತ್ತಿರುತ್ತದೆ. ಅವಳಿಗೆ ಮಕ್ಕಳು ಮೊಮ್ಮಕ್ಕಳಾದರೂ, ನಾನು ಮಾತ್ರ ಅವಳನ್ನು ಮುದ್ದು ಪುಟಾಣಿಯಂತೆ ಮಾತನಾಡಿಸಬೇಕು, ನೋಡಿಕೊಳ್ಳಬೇಕು. ಮುದ್ದು ಮಾಡಬೇಕು. ಅವಳು ಬೆಳೆಯುವುದೇ ಇಲ್ಲ. ಅಪ್ಪನ ಮನಸ್ಸನ್ನು ನೋಯಿಸುವವರನ್ನು ಅವಳು ಯಾವ ಕಾರಣಕ್ಕೂ ಕ್ಷಮಿಸಲ್ಲ.
ಓ ಮಗಳು ಮಾತ್ರ ನಿಮ್ಮನ್ನು ನೋಡಿಕೊಳ್ಳುತ್ತಾಳೆ? ಮಗ ನೋಡಿಕೊಳ್ಳ ಅಂತ ನಿಮ್ಮ ಅಭಿಪ್ರಾಯವೇ? ಇಲ್ಲ ಇಲ್ಲ. ಗಂಡು ಮಕ್ಕಳೂ ನೋಡಿಕೋಳ್ಳುತ್ತಾರೆ. ಆದರೆ ಅವರಿಗೆ ನಾವೇ ಎಲ್ಲವನ್ನೂ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಯಾರು ಕಲಿಸಬೇಕಾಗಿಲ್ಲ. ಎಲ್ಲ ಹುಟ್ಟಿನೊಡನೆಯೇ ಬಂದಿರುತ್ತದೆ ಎಂದನು ಗಂಡ. ಇರಬಹುದು ರೀ, ಆದರೆ ಅವಳು ಒಂದಿಲ್ಲ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋಗಬೇಕಲ್ಲವೆ? ವಿಷಾದದಿಂದ ನುಡಿದಳು ಹೆಂಡತಿ. ಹೂಂ ಹೋಗಲೇಬೇಕು, ಆದರೆ, ನಾವು ಸದಾ ಅವಳ ಹೃದಯದಲ್ಲಿ ಬೆಚ್ಚಗೆ ಇರುತ್ತೇವೆ. ಅದಾ ಕಾಲಕ್ಕೂ ಎಂದನು. ಗಂಡನ ಕಣ್ಣಂಚು ತುಸು ತೇವವಾಗಿತ್ತು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply